ದಾವಣಗೆರೆ– ಹರಿಹರ ಅರ್ಬನ್ ಕೋಅಪರೇಟಿವ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು.
–ಪ್ರಜಾವಾಣಿ ಚಿತ್ರ
ದಾವಣಗೆರೆ: ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ‘ಮತ್ತೊಮ್ಮೆ ಮೋದಿ’ ಘೋಷವಾಕ್ಯದಡಿ ಬಿಜೆಪಿಯ ಕಾರ್ಯಕರ್ತರು ಸೇನಾನಿಗಳಂತೆ ಕಾರ್ಯ ನಿರ್ವಹಿಸಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಶ್ರಮಿಕ ವರ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರದ ಕೊಡುಗೆಗಳ ಬಗ್ಗೆ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಮನವರಿಕೆ ಮಾಡಿಕೊಡಬೇಕಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
‘ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಮುದ್ರಾ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಶ್ರಮಿಕ ವರ್ಗಕ್ಕೆ ಔದ್ಯೋಗಿಕ, ಆರ್ಥಿಕ ಶಕ್ತಿ ನೀಡುತ್ತಿದೆ. ಹೀಗಾಗಿ ಸೂಕ್ಷ್ಮ, ಅತಿ ಸೂಕ್ಷ್ಮ ಸಮುದಾಯಗಳಿಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕಿದೆ’ ಎಂದರು.
‘ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ನೇತೃತ್ವ ವಹಿಸಿರುವುದು ಪಕ್ಷಕ್ಕೆ ದೊಡ್ಡ ಶಕ್ತಿ ದೊರೆತಿದೆ. ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲುವ ವಿಶ್ವಾಸ ಇದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
‘ದೇಶದ್ರೋಹಿಗಳನ್ನು ಕಾಂಗ್ರೆಸ್ ಮಡಿಲಲ್ಲಿ ಇಟ್ಟುಕೊಂಡಿದೆ’ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ಸೋಮಶೇಖರ್, ಸತೀಶ್, ಕುಬೇಂದ್ರಪ್ಪ, ರಘುನಂದನ್ ಅಂಬರಕರ್, ಬಿ.ಎಂ.ಸತೀಶ್ ಕೊಳೇನಹಳ್ಳಿ, ರಾಜನಹಳ್ಳಿ ಶಿವಕುಮಾರ್, ವಿಶ್ವಾಸ್, ಗುರುನಾಥ, ಮಂಜುನಾಥ, ಇನ್ನಿತರರು ಇದ್ದರು.
ಪತ್ರಿಕಾಗೋಷ್ಠಿ ಬಳಿಕ ದಾವಣಗೆರೆ– ಹರಿಹರ ಅರ್ಬನ್ ಕೋಅಪರೇಟಿವ್ ಸಮುದಾಯ ಭವನದಲ್ಲಿ ಬಿಜೆಪಿ ಒಬಿಸಿ ಸಮಾವೇಶ ನಡೆಯಿತು. ಪಕ್ಷದ ಹಲವು ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.