ADVERTISEMENT

ನಾನು ಹರಕೆಯ ಕುರಿ ಅಲ್ಲ: ದಾವಣಗೆರೆ ಕ್ಷೇತ್ರ ’ಮೈತ್ರಿ‘ಅಭ್ಯರ್ಥಿ ಎಚ್‌.ಬಿ.ಮಂಜಪ್ಪ

ಪ್ರಕಾಶ ಕುಗ್ವೆ
Published 25 ಏಪ್ರಿಲ್ 2019, 10:00 IST
Last Updated 25 ಏಪ್ರಿಲ್ 2019, 10:00 IST
ಎಚ್. ಬಿ. ಮಂಜಪ್ಪ
ಎಚ್. ಬಿ. ಮಂಜಪ್ಪ   

ಪೈಲ್ವಾನರೂ ಆದ ಹೊನ್ನಾಳಿಯ ಎಚ್.ಬಿ. ಮಂಜಪ್ಪ ಮೈತ್ರಿ ಪಕ್ಷಗಳ ಅಭ್ಯರ್ಥಿ. ತಮ್ಮ ಸ್ವ ಕ್ಷೇತ್ರ ಹೊನ್ನಾಳಿಯಲ್ಲಿ ಶುಕ್ರವಾರ ಬಿರು ಬಿಸಿಲಿನಲ್ಲೇ ರೋಡ್ ಶೋದಲ್ಲಿ ಬ್ಯುಸಿಯಾಗಿದ್ದರು. ಇದರ ಮಧ್ಯೆಯೇ ‘ಪ್ರಜಾವಾಣಿ’ ಪ್ರಶ್ನೆಗಳಿಗೆ ಅವರು ಮುಖಾಮುಖಿಯಾದರು.

* ಶಾಮನೂರು ಕುಟುಂಬ ನಿಮ್ಮನ್ನು ‘ಹರಕೆಯ ಕುರಿ’ ಮಾಡುತ್ತಿದೆಯೇ?

– ಹರಕೆಯ ಕುರಿ ಎನ್ನುವುದು ಸುಳ್ಳು. ನಾನು ಹರಕೆಯ ಕುರಿಯಾಗುವ ಸನ್ನಿವೇಶವೇ ಇಲ್ಲ. ಇದು ಬಿಜೆಪಿಯ ಅಪಪ್ರಚಾರ. ನನ್ನ ಹತ್ತಿರ ದುಡ್ಡಿಲ್ಲ, ತಾವು ದುಡ್ಡು ಚೆಲ್ಲಿ ಗೆಲ್ಲಬಹುದು ಎಂದು ಅಲೋಚಿಸಿದ್ದಾರೆ. ನಾನೂ ಪಕ್ಷದ ತಳಹಂತದಿಂದ ಬಂದಿದ್ದೇನೆ. ಪಟ್ಟಣ ಪಂಚಾಯಿತಿ ಸದಸ್ಯ, ಅಧ್ಯಕ್ಷನಾಗಿ, ತಾಲ್ಲೂಕು ಪಂಚಾಯಿತಿ ಸದಸ್ಯ, ಅಧ್ಯಕ್ಷನಾಗಿ, ಜಿಲ್ಲಾ ಪಂಚಾಯಿತಿ ಸದಸ್ಯ, ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ಹಾಲಿ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಎಲ್ಲಾ ಜಾತಿ, ವರ್ಗಗಳ ಜತೆಗೂ ಉತ್ತಮ ಬಾಂಧವ್ಯ
ಹೊಂದಿದ್ದೇನೆ.

ADVERTISEMENT

ಶಾಮನೂರು, ಮಲ್ಲಣ್ಣ ಅವರು ಈ ಬಾರಿ ವೈಯಕ್ತಿಕ ಕಾರಣದಿಂದ ಚುನಾವಣೆ ಬೇಡ ಎಂದು ತೀರ್ಮಾನಿಸಿದ್ದಾರೆ. ಹಾಗಾಗಿ ನನ್ನ ಮೇಲೆ ವಿಶ್ವಾಸ ಇಟ್ಟು ಅವಕಾಶ ಕೊಟ್ಟಿದ್ದಾರೆ. ಈಗಲೂ ನನ್ನ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ರಾತ್ರಿ–ಹಗಲು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಶಾಸಕ ಎಸ್‌. ರಾಮಪ್ಪ, ಮಾಜಿ ಶಾಸಕರಾದ ಎಚ್‌.ಎಸ್‌. ಶಿವಶಂಕರ್‌, ಶಾಂತನಗೌಡರು, ವಡ್ನಾಳ್ ರಾಜಣ್ಣ, ರಾಜೇಶ್, ಅವರೊಂದಿಗೆ ಎಂ.ಪಿ. ಪ್ರಕಾಶ್ ಅವರ ಮಕ್ಕಳು, ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ‍

* ಟಿಕೆಟ್‌ ಘೋಷಣೆ ತಡವಾಗಿದ್ದು ನಿಮಗೆ ತೊಂದರೆಯಾಗಲಿಲ್ಲವೇ?

–ತೊಂದರೆ ಇಲ್ಲ. ಇನ್ನೂ ಕಾಲಾವಕಾಶ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು; ಪ್ರತಿ ಹಳ್ಳಿಗೂ ಭೇಟಿ ನೀಡಲು ಸಾಧ್ಯವಾಗುತ್ತಿತ್ತು. ಈಗಲೂ ಸಮಯ ಇದೆ. ಈಗ ಪ್ರತಿ ದಿನ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಮತದಾರರನ್ನು ಭೇಟಿಯಾಗುತ್ತಿದ್ದೇನೆ. ಈಗಾಗಲೇ ಪ್ರತಿ ತಾಲ್ಲೂಕಿಗೂ ಎರಡೆರೆಡು ಬಾರಿ ಹೋಗಿದ್ದೇನೆ.

* ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಇದುವರೆಗೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ; ನಿಮ್ಮ ಪರವಾಗಿ ಇನ್ನೂ ಪ್ರಚಾರ ಕೈಗೊಂಡಿಲ್ಲ ಅಲ್ಲವೇ?

–ಮೊದಲ ಹಂತದ ಚುನಾವಣೆಯಲ್ಲಿ ಎಲ್ಲರೂ ಬ್ಯುಸಿ ಇದ್ದರು. ಮುಂದಿನ ಎರಡ್ಮೂರು ದಿನಗಳಲ್ಲಿ ಕ್ಷೇತ್ರಕ್ಕೆ ಬರಬಹುದು. ಕಾಂಗ್ರೆಸ್ಸಿನಿಂದ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ, ಸಚಿವರಾದ ಸತೀಶ್‌ ಜಾರಕಿಹೊಳಿ, ಪಿ.ಟಿ. ಪರಮೇಶ್ವರ ನಾಯ್ಕ, ಇನ್ನೂ ಆನೇಕರು ಬಂದು ಪ್ರಚಾರ ಕಾರ್ಯ
ನಡೆಸುವರು.

* ಕ್ಷೇತ್ರದಲ್ಲಿ ಸಮಾನಮನಸ್ಕರ ಹೆಸರಿನಲ್ಲಿ ಕೆಲವರು ಸಂಘಟಿತರಾಗಿದ್ದಾರೆ. ಇದು ನಿಮಗೆ ಪೂರಕವೋ ಅಥವಾ ಹಿನ್ನಡೆಯೋ?

–ಕೆಲವರಲ್ಲಿ ಗೊಂದಲಗಳಿದ್ದವು. ಹೀಗೆ ಬಹಿರಂಗವಾಗಿ ಸೇರಿ, ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತಿರುವುದು ಒಳ್ಳೆಯದು. ಅವರೆಲ್ಲರೂ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆಂಬ ವಿಶ್ವಾಸ ಇದೆ.

* ಯಾವ ಅಂಶಗಳ ಮೇಲೆ ಚುನಾವಣೆ ಎದುರಿಸುತ್ತೀರಿ?

ಬಿಜೆಪಿ ವೈಫಲ್ಯಗಳೇ ನಮಗೆ ಚುನಾವಣೆ ವಿಷಯಗಳು. ಐದು ವರ್ಷಗಳಲ್ಲಿ ಅಭಿವೃದ್ಧಿ ಕುರಿತಂತೆ ಸುಳ್ಳು ಹೇಳಿದ್ದು, ಬೆಲೆ ನಿಯಂತ್ರಿಸಲು ಆಗದಿರುವುದು, ಕಪ್ಪುಹಣ ಹಿಂದಕ್ಕೆ ತಾರದಿರುವುದು,
ರೈತರ ಸಾಲ ಮನ್ನಾ ಮಾಡದಿರುವುದು, ಇವೇ ವಿಷಯಗಳು. ಇಂತಹ ಆಡಳಿತ ನೀಡುವವರು ದೇಶಕ್ಕೆ ಬೇಕಾ ಎಂದು ಮತದಾರರನ್ನು
ಕೇಳುತ್ತಿದ್ದೇವೆ.

* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಆದ್ಯತೆಗಳು ಯಾವುವು?

–ನೀರಾವರಿ ಈ ಕ್ಷೇತ್ರದ ಮೊದಲ ಅವಶ್ಯಕತೆ. ಕೆರೆಗಳಿಗೆ ನೀರು ತುಂಬಿಸುವುದು, ಏತ ನೀರಾವರಿ ಯೋಜನೆ ಜಾರಿಗೊಳಿಸುವುದು, ಕುಡಿಯುವ ನೀರು ಒದಗಿಸುವುದು ನನ್ನ ಆದ್ಯತೆಯ ಕೆಲಸಗಳು.

* ಮೈತ್ರಿ ಪಕ್ಷದ ಬೆಂಬಲ ಹೇಗಿದೆ?

–ಸಂಪೂರ್ಣ ಬೆಂಬಲ ಇದೆ. ನಮ್ಮ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಶಾಸಕ ಎಸ್‌. ರಾಮಪ್ಪ, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಎದುರು ಬದುರು ಸ್ಪರ್ಧಿಸಿದ್ದರು. ಈಗ ಅವರಿಬ್ಬರೂ ಜಂಟಿಯಾಗಿ ಮತಯಾಚಿಸುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಕೊಟ್ರೇಶ್, ದಾವಣಗೆರೆಯಲ್ಲಿ ಅಮಾನುಲ್ಲಾ ಖಾನ್, ಚನ್ನಗಿರಿಯಲ್ಲಿ ಹೊದಿಗೆರೆ ರಮೇಶ್ ಇವರೆಲ್ಲರೂ ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.