ದಾವಣಗೆರೆ: ‘ವಾಲ್ಮೀಕಿಯ ಶ್ರೀರಾಮನೇ ಬೇರೆ, ಅಯೋಧ್ಯಯ ಶ್ರೀರಾಮನೇ ಬೇರೆ. ವಾಲ್ಮೀಕಿಯಿಂದ ಶ್ರೀರಾಮನೋ, ಶ್ರೀರಾಮನಿಂದ ವಾಲ್ಮೀಕಿಯೊ ಎಂಬ ಕುರಿತು ಚಿಂತನೆ ಮಾಡುವ ಅಗತ್ಯವಿದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.
ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದ ಅವರು, ‘ವಾಲ್ಮೀಕಿ ಶ್ರೀರಾಮನ ಸೃಷ್ಟಿಕರ್ತ. ಅಯೋಧ್ಯಯ ರಾಮ ಹಾಗೂ ವಾಲ್ಮೀಕಿಯ ರಾಮರಾಜ್ಯದ ಪರಿಕಲ್ಪನೆಯ ನಡುವೆ ವ್ಯತ್ಯಾಸಗಳಿವೆ’ ಎಂದು ಪ್ರತಿಪಾದಿಸಿದರು.
‘ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಿದಾಗ ಇಡೀ ಜಗತ್ತು ಸಂತೋಷಪಟ್ಟಿತ್ತು. ಪಟ್ಟಾಭಿಷೇಕವಾದಾಗ ಹಾಗೂ ವನವಾಸಕ್ಕೆ ತೆರಳುವಾಗ ಶ್ರೀರಾಮ ಸ್ಥಿತಪ್ರಜ್ಞನಾಗಿದ್ದನು. ಯಥಾಸ್ಥಿತಿವಾದವನ್ನು ಧರ್ಮ ಪ್ರತಿಪಾದಿಸುತ್ತದೆ ಎಂಬುದನ್ನು ಈ ಮೂಲಕ ವಾಲ್ಮೀಕಿ ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.
ಇವಿಎಂನಿಂದ ಬಿಜೆಪಿ ಗೆಲ್ಲುತ್ತಿದೆ. ಇವಿಎಂ ಮೇಲೆ ಬಲವಾದ ಸಂಶಯವಿದೆ. ಅನುಮಾನ ಮೂಡಬಾರದು ಎಂಬ ಕಾರಣಕ್ಕೆ ಕರ್ನಾಟಕ ಹೊರತುಪಡಿಸಿ ಅಲ್ಲಲ್ಲಿ ಕೈಚಳಕ ತೋರಲಾಗುತ್ತಿದೆಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ
ಸಚಿವರ ಗೋಪ್ಯ ಚರ್ಚೆ
ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಸಚಿವರು ಸಭೆ ನಡೆಸಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಸಚಿವರಾದ ಸತೀಶ ಜಾರಕಿಹೊಳಿ ಎಚ್.ಸಿ.ಮಹದೇವಪ್ಪ ಅವರೊಂದಿಗೆ ಗೋಪ್ಯ ಮಾತುಕತೆ ನಡೆಸಿದರು. ಬಳ್ಳಾರಿ ಸಂಸದ ತುಕಾರಾಂ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ದಲಿತ ಸಮಾವೇಶ
‘ಗೃಹ ಸಚಿವ ಜಿ.ಪರಮೇಶ್ವರ ಸಾರಥ್ಯದಲ್ಲಿ ದಲಿತ ಸಮಾವೇಶ ನಡೆಯಲಿದೆ. ಇದರ ರೂಪುರೇಷವನ್ನು ಪರಮೇಶ್ವರ ಸಿದ್ಧಪಡಿಸಲಿದ್ದಾರೆ’ ಎಂದು ಲೋಕೋಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ‘ಇದು ಎಸ್‌ಸಿ ಅಥವಾ ಎಸ್‌ಟ್ ಸಮುದಾಯಕ್ಕೆ ಸೀಮಿತವಾದ ಸಮಾವೇಶವಲ್ಲ. ಧ್ವನಿ ಇಲ್ಲದ ಸಮುದಾಯಗಳಲ್ಲಿ ಅರಿವು ಮೂಡಿಸಲು ಸಮಾವೇಶ ಆಯೋಜಿಸಲಾಗುತ್ತಿದೆ. ಕಾಂಗ್ರೆಸ್ ನೇತೃತ್ವದಲ್ಲಿಯೇ ಇದು ನಡೆಯಲಿದೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.