ADVERTISEMENT

ಅಧಿಕ ಮಳೆ: ಮೇಲಕ್ಕೇಳದ ಮೆಕ್ಕೆಜೋಳ

ಅಪಾರ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಬೇಕು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 5:19 IST
Last Updated 8 ಸೆಪ್ಟೆಂಬರ್ 2022, 5:19 IST
ಬಸವಾಪಟ್ಟಣ ಹೋಬಳಿಯಲ್ಲಿ ನಿರಂತರ ಮಳೆಯಿಂದ ಬಿತ್ತನೆ ಮಾಡಿದ ಮೆಕ್ಕೆ ಜೋಳ ಬೆಳೆಯದೇ ಕುಂಠಿತವಾಗಿರುವುದು
ಬಸವಾಪಟ್ಟಣ ಹೋಬಳಿಯಲ್ಲಿ ನಿರಂತರ ಮಳೆಯಿಂದ ಬಿತ್ತನೆ ಮಾಡಿದ ಮೆಕ್ಕೆ ಜೋಳ ಬೆಳೆಯದೇ ಕುಂಠಿತವಾಗಿರುವುದು   

ಬಸವಾಪಟ್ಟಣ: ಇಲ್ಲಿಯ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳವು ಸೆಪ್ಟೆಂಬರ್‌ ಮೊದಲ ವಾರವೂ ಸಮರ್ಪಕವಾಗಿ ಬೆಳೆಯದೇ ಕುಂಠಿತವಾಗಿರುವುದರಿಂದ ರೈತರು ತೀವ್ರ ನಷ್ಟಕ್ಕೆ ಒಳಗಾಗುವಂತಾಗಿದೆ.

ಅಂದಾಜು 3,200 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಶೇ 70ರಷ್ಟು ಬೆಳೆ ಮಳೆಯಿಂದ ಹಾನಿಗೊಳಗಾಗಿದೆ ಎನ್ನುತ್ತಾರೆ ರೈತರು.

ಈ ಭಾಗದಲ್ಲಿ ಅಡಿಕೆ ಮತ್ತು ಮಕ್ಕೆಜೋಳ ಪ್ರಮುಖ ಆರ್ಥಿಕ ಬೆಳೆಗಳಾಗಿವೆ. ಅಡಿಕೆ ತೋಟ ಮಾಡಲಾಗದವರು ಸುಲಭವಾಗಿ ಮೆಕ್ಕೆಜೋಳ ಬೆಳೆಯುತ್ತಾರೆ. ಆದರೆ ಪ್ರಸಕ್ತ ವರ್ಷ ಅಧಿಕ ಮಳೆ ಸುರಿದಿದ್ದರಿಂದ ಭೂಮಿಯ ತೇವಾಂಶ ಹೆಚ್ಚಿ ಬೆಳೆ ಸರಿಯಾಗಿ ಬೆಳೆಯಲು ಅಡ್ಡಿಯಾಗಿದೆ. ಗೊಬ್ಬರ, ಬೀಜ ಹಾಗೂ ಬಿತ್ತನೆಗೆ ಖರ್ಚು ಮಾಡಿದ ಬಂಡವಾಳವೂ ಬರದಂತಾಗಿದೆ ಎನ್ನುತ್ತಾರೆ ದಾಗಿನಕಟ್ಟೆಯ ರೈತ ರಂಗಪ್ಪ.

ADVERTISEMENT

ಬಹುಪಾಲು ರೈತರಿಗೆ ಬೆಳೆ ವಿಮೆಯ ಬಗ್ಗೆ ಅರಿವಿಲ್ಲ. ಬೆಳೆ ವಿಮೆ ಮಾಡಿಸಿಕೊಳ್ಳಿ ಎಂದು ಕೃಷಿ ಇಲಾಖೆ ಎಷ್ಟು ಬಾರಿ ಸೂಚಿಸಿದರೂ ಕಿವಿಗೊಡದ ರೈತರಿಗೆ ವಿಮೆಯ ಸೌಲಭ್ಯ ಸಿಗುವುದೂ ಇಲ್ಲ. ಜಿಲ್ಲಾಡಳಿತವೇ ಬೆಳೆ ಹಾನಿಯ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರಾದ ಕಾಳೇಶ್‌, ಎಸ್‌.ಆರ್‌. ರವಿಕುಮಾರ್‌
ಒತ್ತಾಯಿಸಿದ್ದಾರೆ.

‘ಕಳೆದ ವರ್ಷ ಒಂದು ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹ 1,500ಕ್ಕೂ ಅಧಿಕ ದರ ಸಿಕ್ಕಿತ್ತು. ಈ ವರ್ಷ ₹ 2,600 ಇದೆ. ಬೆಳೆ ಇಲ್ಲದೇ ಪೂರೈಕೆ ಕಡಿಮೆಯಾಗುವುದನ್ನು ಅರಿತ ಪಶು ಆಹಾರ ತಯಾರಕರು ಹೆಚ್ಚಿನ ದರ ನೀಡಿ ಮೆಕ್ಕೆಜೋಳವನ್ನು ಕೊಳ್ಳಲು ಮುಂದಾಗಿದ್ದಾರೆ. ಆದರೆ, ರೈತರಿಗೆ ಬೆಎ ಕೈಗೆಟುಕುವುದು ಅನುಮಾನ. ಇದೇ ದರ ನಿರಂತರವಾಗಿದ್ದರೆ ರೈತರಿಗೆ ಮೆಕ್ಕೆಜೋಳದ ಬೆಳೆಯಲ್ಲಿ ಸ್ವಲ್ಪವಾದರೂ ಲಾಭವಾಗಲಿದೆ’ ಎನ್ನುತ್ತಾರೆ ಜಿ.ಕೆ. ಹಳ್ಳಿಯ ರೈತ ನಾಗರಾಜ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.