ADVERTISEMENT

ನಿರಂತರ ಮಳೆ: ಮೆಕ್ಕೆಜೋಳಕ್ಕೆ ದರವಿದ್ದರೂ ‘ಫಲ’ ಸಿಗದ ಸ್ಥಿತಿ

ದಾವಣಗೆರೆಯಲ್ಲಿ ಕ್ವಿಂಟಲ್‌ಗೆ ₹2,200 ದರ; ಮಳೆಯಿಂದಾಗಿ ಆಗುತ್ತಿಲ್ಲ ಕಟಾವು

ರಾಮಮೂರ್ತಿ ಪಿ.
Published 12 ಅಕ್ಟೋಬರ್ 2025, 22:46 IST
Last Updated 12 ಅಕ್ಟೋಬರ್ 2025, 22:46 IST
ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಬಳಿ ಮೆಕ್ಕೆಜೋಳದ ಜಮೀನು ಕೆಸರುಮಯವಾಗಿರುವುದು 
ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಬಳಿ ಮೆಕ್ಕೆಜೋಳದ ಜಮೀನು ಕೆಸರುಮಯವಾಗಿರುವುದು    

ದಾವಣಗೆರೆ: ಮೆಕ್ಕೆಜೋಳಕ್ಕೆ ಈಗ ಉತ್ತಮ ದರವಿದ್ದರೂ ಮಳೆಯಿಂದಾಗಿ ಬೆಳೆ ಕಟಾವು ಮಾಡಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಕಟಾವು ಮುಗಿಯುವ ವೇಳೆಗೆ ಬೆಳೆ ಕುಸಿಯುವ ಆತಂಕ ಅವರನ್ನು ಕಾಡುತ್ತಿದೆ. 

ಇಲ್ಲಿನ ಎಪಿಎಂಸಿಯಲ್ಲಿ ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ ₹2,200 ದರವಿದೆ. ಜಿಲ್ಲೆಯಲ್ಲಿ ಸದ್ಯ ಕಟಾವು ಪೂರ್ತಿಯಾಗಿ ಆರಂಭಗೊಂಡಿಲ್ಲ. ಎಪಿಎಂಸಿಗೆ ಸದ್ಯ ನಿತ್ಯ ಸರಾಸರಿ 9 ಸಾವಿರ ಕ್ವಿಂಟಲ್‌ ಆವಕವಾಗುತ್ತಿದೆ. 

ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 1.20 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಹಾವೇರಿ, ಶಿವಮೊಗ್ಗ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ.

ADVERTISEMENT

ಮಳೆಯಿಂದ ಹಲವೆಡೆ ಜಮೀನುಗಳಲ್ಲಿ ನೀರು ನಿಂತಿದೆ. ಇದರಿಂದ ಕಟಾವು ಯಂತ್ರಗಳು ತೆರಳಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರ ಅಲಭ್ಯತೆಯಿಂದಾಗಿಯೂ ಕಟಾವು ಮುಂದೂಡಲಾಗುತ್ತಿದೆ. 

‘ಮೆಕ್ಕೆಜೋಳಕ್ಕೆ ಒಳ್ಳೆ ದರ ಇದೆ. ದಲ್ಲಾಳಿಗಳು ಜಮೀನಿಗೆ ಬಂದು  ಖರೀದಿಸುತ್ತಿದ್ದು, ಕ್ವಿಂಟಲ್‌ಗೆ ₹1,900 ರಿಂದ ₹2,100 ಸಿಗುತ್ತಿದೆ’ ಎಂದು ಚನ್ನಗಿರಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ರೈತ ಎಸ್‌.ಎಂ.ಮುನಿ ತಿಳಿಸಿದರು. 

‘ಕೆಲ ಜಮೀನಿನಲ್ಲಿ ನೀರು ನಿಂತಿರುವುದರಿಂದ ಕಟಾವು ಯಂತ್ರ ತರಲಾಗುತ್ತಿಲ್ಲ. ತಗ್ಗು ಭಾಗದಲ್ಲಿ ಬೆಳೆಯು ನೀರು ಪಾಲಾಗಿದೆ’ ಎಂದು ಜಗಳೂರು ತಾಲ್ಲೂಕಿನ ಅಸಗೋಡುವಿನ ರಾಘವೇಂದ್ರ ಹೇಳಿದರು. 

ಆರಂಭವಾಗದ ಖರೀದಿ ಕೇಂದ್ರ: ಮೆಕ್ಕೆಜೋಳಕ್ಕೆ ಈ ಬಾರಿ ಕೇಂದ್ರ ಸರ್ಕಾರವು ಕ್ವಿಂಟಲ್‌ಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ₹2,400 ಘೋಷಿಸಿದೆ. ಆದರೆ, ಇದುವರೆಗೂ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ.

‘ರೈತರು ಮೆಕ್ಕೆಜೋಳವನ್ನು ದಲ್ಲಾಳಿಗಳಿಗೆ ಹಾಗೂ ಎಪಿಎಂಸಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಶೀಘ್ರವೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಒತ್ತಾಯಿಸಿದರು.

ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಬಳಿ ಮೆಕ್ಕೆಜೋಳದ ಜಮೀನೊಂದರಲ್ಲಿ ನೀರು ನಿಂತಿರುವುದು
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಾರದೊಳಗೆ ಅನುಮತಿ ಸಿಗುವ ನಿರೀಕ್ಷೆ ಇದೆ.
ಮಧುಸೂದನ್‌ ಕೆ.ಪಿ. ಜಂಟಿ ನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

‘ತಮಿಳುನಾಡಿನಲ್ಲಿ ಕಟಾವು ಶುರುವಾಗಿಲ್ಲ’ 

‘ತಮಿಳುನಾಡು ಬಿಹಾರ ಸೇರಿ ಕೆಲ ರಾಜ್ಯಗಳಲ್ಲಿ ಮೆಕ್ಕೆಜೋಳ ಬೆಳೆ ಕಟಾವು ಶುರುವಾಗಿಲ್ಲ. ಅಲ್ಲಿ ಕಟಾವು ಶುರುವಾದರೆ ಬೆಲೆ ಇಳಿಯುವ ಸಾಧ್ಯತೆ ಇದೆ’ ಎಂದು ದಾವಣಗೆರೆ ಎಪಿಎಂಸಿಯ ಸಹಾಯಕ ನಿರ್ದೇಶಕ ಜೆ.ಪ್ರಭು ತಿಳಿಸಿದರು.  ‘ರಾಜ್ಯದಿಂದ ಹೆಚ್ಚಿನ ಪ್ರಮಾಣದ ಜೋಳವನ್ನು ತಮಿಳುನಾಡಿಗೆ ಪೂರೈಸಲಾಗುತ್ತಿದೆ. ಈ ಭಾಗದ ಸಕ್ಕರೆ ಕಾರ್ಖಾನೆಗಳು ಮೆಕ್ಕೆಜೋಳ ಬಳಸಿ ಎಥೆನಾಲ್‌ ತಯಾರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳವರು ವ್ಯಾಪಾರಿಗಳ ಮೂಲಕ ಖರೀದಿಸುತ್ತಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.