ADVERTISEMENT

ಮೆಕ್ಕೆಜೋಳ; ದರ ಕುಸಿತ: ದಾರಿ ಕಾಣದಾದ ಕೃಷಿಕರು

ತೆನೆ ಮುರಿದು ಹೊಲಗಳಲ್ಲಿಯೇ ರಾಶಿ ಹಾಕುತ್ತಿರುವ ರೈತರು: ಬೆಂಬಲ ಬೆಲೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:12 IST
Last Updated 21 ನವೆಂಬರ್ 2025, 6:12 IST
ಸಂತೇಬೆನ್ನೂರು ಬಳಿಯ ಜಮೀನೊಂದರಲ್ಲಿ ಮೆಕ್ಕೆಜೋಳದ ತೆನೆ ಮುರಿದು ರಾಶಿ ಹಾಕಿರುವುದು
ಸಂತೇಬೆನ್ನೂರು ಬಳಿಯ ಜಮೀನೊಂದರಲ್ಲಿ ಮೆಕ್ಕೆಜೋಳದ ತೆನೆ ಮುರಿದು ರಾಶಿ ಹಾಕಿರುವುದು   

ಸಂತೇಬೆನ್ನೂರು: ಮೆಕ್ಕೆಜೋಳ ಬೆಲೆ ಕುಸಿತದಿಂದ ಕಂಗಾಲಾಗಿರುವ ಈ ಭಾಗದ ರೈತರು, ತೆನೆ ಮುರಿದು ಹೊಲಗಳಲ್ಲಿಯೇ ರಾಶಿ ಹಾಕುತ್ತಿರುವುದು ಈಗ ಸಾಮಾನ್ಯವಾಗಿದೆ.  

ಕಳೆದ ವರ್ಷ ₹ 2,200 ರಿಂದ ₹2,250 ರವರೆಗೆ ದರ ಇತ್ತು. ಈ ಬಾರಿ ಸ್ಥಳದಲ್ಲಿ ₹ 1,600 ರಿಂದ ₹ 1,700ರ ಅಂತರದಲ್ಲಿ ಖರೀದಿ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ₹ 1,800 ರಿಂದ ₹ 1,900ರವರೆಗೆ ಧಾರಣೆ ಇದೆ. ಸಾಗಣೆ ವೆಚ್ಚವೂ ದುಬಾರಿ ಆಗಿದೆ.  

‘ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಗೆ ಮುಂದಾಗಬೇಕು. ಇಲ್ಲವಾದರೆ ಇದನ್ನೇ ನಂಬಿರುವ ರೈತರ ಬದುಕು ಅಯೋಮಯವಾಗಲಿದೆ’ ಎಂದು ರೈತ ರುದ್ರಪ್ಪ ಮತ್ತು ನಾಗರಾಜ್ ಆಗ್ರಹಿಸಿದರು.

ADVERTISEMENT

‘ಜಮೀನು ಹಸನು, ಬಿತ್ತನೆ ಬೀಜ, ಗೊಬ್ಬರ, ಔಷಧಿ, ಕಳೆ ನಿವಾರಣೆ, ಕೊಯ್ಲಿನ ದರ ಗಗನಮುಖಿ ಆಗಿವೆ. ಕೂಲಿಗಳನ್ನು ಕಲೆ ಹಾಕಿ ನಿಗದಿತ ಸಮಯದಲ್ಲಿ ಕೃಷಿ ಕೆಲಸ ಮಾಡುವುದು ಉಸಿರುಗಟ್ಟಿಸಿದೆ. ಪ್ರಕೃತಿ ವಿಕೋಪ, ಗಿಳಿ ಹಾಗೂ ಪ್ರಾಣಿಗಳ ಕಾಟದಲ್ಲಿ ಬೆಳೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿ ನಮ್ಮದಾಗಿದೆ’ ಎಂದರು. 

‘ಒಂದು ಎಕರೆ ಮೆಕ್ಕೆಜೋಳ ಬೆಳೆಯಲು ₹ 25,000 ಖರ್ಚು ತಗುಲಿದೆ. ಪ್ರತಿ ಎಕರೆಗೆ 15 ರಿಂದ 20 ಕ್ವಿಂಟಲ್ ಸರಾಸರಿ ಇಳುವರಿ ಇದೆ. ಮನೆ ಮಂದಿಯೆಲ್ಲ ಬೆಳೆ ನಿರ್ವಹಣೆಗೆ ಪಟ್ಟ ಶ್ರಮಕ್ಕೆ ಕಿಂಚಿತ್ತೂ ಪ್ರತಿಫಲ ಇಲ್ಲದಂತಾಗಿದೆ. ಕೆಲವೆಡೆ ಪ್ರತಿಭಟನೆಗಳಾಗುತ್ತಿವೆ. ಜನಪ್ರತಿನಿಧಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು’ ಎಂದು ರೈತ ರಂಗಪ್ಪ ಕೋರಿದರು.  

‘ಈ ಬಾರಿ 24 ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದೇನೆ. ಈಗಾಗಲೇ ತೆನೆ ಮುರಿದು ತಿಂಗಳು ಕಳೆಯಿತು. ಹೊಲದಲ್ಲಿಯೇ ರಾಶಿ ಹಾಕಿದ್ದೇನೆ. ಬಹುತೇಕ ರೈತರು ಬೆಲೆ ಏರಿಕೆಗಾಗಿ ಕಾಯುತ್ತಿದ್ದಾರೆ. ಇನ್ನೂ ಮೂರು ತಿಂಗಳಾದರೂ ಕಾಯುತ್ತೇವೆ’ ಎನ್ನುತ್ತಾರೆ ರೈತ ವಿನಾಯಕ. 

‘ಪಾಪ್ ಕಾರ್ನ್ ಧಾರಣೆ ತೀವ್ರ ಕುಸಿದಿದೆ. ಕಳೆದ ಬಾರಿ ಪ್ರತಿ ಕ್ವಿಂಟಲ್‌ಗೆ ₹ 6,000 ರಿಂದ ₹ 7,000 ದರ ಇತ್ತು. ಸದ್ಯ ₹ 3,000 ಆಸುಪಾಸಿನಲ್ಲಿದೆ’ ಎನ್ನುತ್ತಾರೆ ರೈತ ಸಿದ್ಧಲಿಂಗಪ್ಪ.

‘ಬೆಲೆ ಕುಸಿತಕ್ಕೆ ಹಲವು ಕಾರಣಗಳಿವೆ. ಪ್ರಮುಖವಾಗಿ ರಾಜ್ಯದಲ್ಲಿ ಮೆಕ್ಕೆಜೋಳದಿಂದ ಸ್ಟಾರ್ಚ್ ಉತ್ಪಾದಿಸುತ್ತಿದ್ದ ಕಾರ್ಗಿಲ್ ಕಂಪನಿ ಮುಚ್ಚಲಾಗಿದೆ. ರಫ್ತಿಗೆ ಕಡಿವಾಣ ಹಾಕಿದ ಅಮೆರಿಕದ ಕ್ರಮವೂ ಬೇಡಿಕೆ ಕುಸಿಯಲು ಕಾರಣ. ನಿತ್ಯ ಸಾವಿರಾರು ಕ್ವಿಂಟಲ್ ಮೆಕ್ಕೆಜೋಳಕ್ಕೆ ಇದ್ದ ಬೇಡಿಕೆ ನಿಂತಿದೆ. ದಾವಣಗೆರೆಯಿಂದ ಕೋಲ್ಕತ್ತ ಮೂಲಕ ಬಾಂಗ್ಲಾದೇಶಕ್ಕೆ ಆಗುತ್ತಿದ್ದ ಮೆಕ್ಕೆಜೋಳದ ರಫ್ತು ನಿಂತಿದೆ. ತಮಿಳುನಾಡಿನಲ್ಲಿ ಕುಕ್ಕುಟೋದ್ಯಮ ಹಿನ್ನಡೆ ಅನುಭವಿಸಿದ್ದರಿಂದ ಬೇಡಿಕೆ ಕುಸಿದಿದೆ. ಇತರ ರಾಜ್ಯಗಳಲ್ಲಿಯೂ ಮೆಕ್ಕೆಜೋಳದ ಬೆಳೆ ವೃದ್ಧಿಸಿದೆ’ ಎನ್ನುತ್ತಾರೆ ದಾವಣಗೆರೆಯ ದಲ್ಲಾಳಿ ಮಂಡಿ ವರ್ತಕ ಕೆ.ಎಜಾಜ್ ಅಹಮದ್.

ಸಂತೇಬೆನ್ನೂರು ಹೊರವಲಯದ ಜಮೀನೊಂದರಲ್ಲಿ ಮೆಕ್ಕೆಜೋಳದ ತೆನೆ ಮುರಿದು ಒಕ್ಕಣೆ ಮಾಡದೆ ರಾಶಿ ಹಾಕಿರುವುದು
ಚನ್ನಗಿರಿ ತಾಲ್ಲೂಕಿನಲ್ಲಿ 21 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಈ ಬಾರಿ ಉತ್ತಮ ಇಳುವರಿ ಬಂದಿದೆ.
– ಬಿ.ಬಿ.ಕುಮಾರ್, ಕೃಷಿ ಅಧಿಕಾರಿ ಸಂತೇಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.