ADVERTISEMENT

ಅಧ್ಯಯನ, ಸಂಶೋಧನೆಗೆ ಮಲೇಷ್ಯಾ ವಿಶ್ವವಿದ್ಯಾಲಯ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 14:51 IST
Last Updated 18 ಫೆಬ್ರುವರಿ 2020, 14:51 IST
ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಬಣಕಾರ್ ಹಾಗೂ ಮಲೇಷ್ಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಪಿ.ಶಿವಕುಮಾರ್ ಒಡಂಬಡಿಕೆ ಪತ್ರ ಪ್ರದರ್ಶಿಸಿದರು
ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಬಣಕಾರ್ ಹಾಗೂ ಮಲೇಷ್ಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಪಿ.ಶಿವಕುಮಾರ್ ಒಡಂಬಡಿಕೆ ಪತ್ರ ಪ್ರದರ್ಶಿಸಿದರು   

ದಾವಣಗೆರೆ: ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಪ್ರಸ್ತುತ ಬೆಳವಣಿಗೆಗೆ ಪೂರಕವಾದ ಅಧ್ಯಯನ, ಸಂಶೋಧನೆ ಮತ್ತು ಪ್ರಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ವಿಶ್ವವಿದ್ಯಾಲಯವು ಮಲೇಷ್ಯಾ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಅಧ್ಯಯನ ವಿಭಾಗದ ಜೊತೆಗೆ ಪರಸ್ಪರ ಒಡಂಬಡಿಕೆ ಮತ್ತು ಒಪ್ಪಂದಕ್ಕೆ ಸಹಿ ಮಾಡಿತು.

ಮಲೇಷ್ಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಪಿ.ಶಿವಕುಮಾರ್ ಅವರು ಸೋಮವಾರ ನಡೆದ ಸಭೆಯಲ್ಲಿ ಒಡಂಬಡಿಕೆಯ ವಿಷಯ ಪ್ರಸ್ತಾಪಿಸಿ, ಚರ್ಚೆಗೆ ಚಾಲನೆ ನೀಡಿದರು. ‘ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳು ಅಭಿವೃದ್ಧಿಪರವಾಗಿರಬೇಕು. ಈ ಉದ್ದೇಶದಿಂದ ಪರಸ್ಪರ ಒಡಂಬಡಿಕೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಮಲೇಷ್ಯಾ ವಿಶ್ವವಿದ್ಯಾಲಯ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ಕಾರ್ಯವ್ಯಾಪ್ತಿ, ಬೇಡಿಕೆಯ ವಲಯ ಹಾಗೂ ಸ್ಥಳೀಯ ಸ್ಥಿತಿಗಳು ವಿಭಿನ್ನವಾಗಿವೆ. ಆದರೆ ಸಂಶೋಧನೆ, ಮಾಹಿತಿ ವಿನಿಮಯ, ಸಂಪರ್ಕ ವ್ಯವಸ್ಥೆ, ಅಧ್ಯಯನ ಹಾಗೂ ಅಧ್ಯಾಪನ ವಿಷಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ಅಧ್ಯಯನಕ್ಕೆ ಹೆಚ್ಚು ಅವಕಾಶಗಳಿವೆ. ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚು ಅನುಕೂಲಕರ ವಾತಾವರಣವಿದೆ. ಅಲ್ಲದೆ ಹೊಸ ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ವಿದೇಶಿ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯಗಳಿದ್ದು, ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಬಹುದು’ ಎಂದು ತಿಳಿಸಿದರು.

ADVERTISEMENT

‘ಸದ್ಯ ಮಲೇಷ್ಯಾದಲ್ಲಿ ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಡಾಟಾ ಅನಲೈಸಿಸ್ ಸೇರಿ ಹಲವು ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಡ್ರೋನ್‌ ಬಳಸಿ ಕೃಷಿ ಮತ್ತು ತೋಟಗಾರಿಕೆಯ ಸಮಸ್ಯೆಗಳ ಪರಿಹಾರಕ್ಕೂ ಆದ್ಯತೆ ನೀಡಲಾಗಿದೆ. ತೋಟದಲ್ಲಿ ಕಾಡುವ ಹುಳುಗಳ ಕಾಟವನ್ನು ಪತ್ತೆ ಮಾಡಲು ಡ್ರೋನ್‌ ಬಳಸಲಾಗುತ್ತಿದೆ. ಹೀಗೆ ಕಂಪ್ಯೂಟರ್ ವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆಯ ವ್ಯಾಪ್ತಿ ವಿಸ್ತೃತವಾಗಿವಾಗಿದ್ದು, ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾಥಿಗಳು, ಪ್ರಾಧ್ಯಾಪಕರು ಮತ್ತು ಸಂಶೋಧನಾರ್ಥಿಗಳ ಇದರ ಪ್ರಯೋಜನ ಪಡೆಯಬಹುದು. ಅಲ್ಲದೆ ಇಲ್ಲಿ ನಡೆಯುವ ಸಂಶೋಧನೆಗಳನ್ನು ಅಲ್ಲಿಯೂ ಬಳಸಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ‘ಮಲೇಷ್ಯಾ ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳ ಕಂಪ್ಯೂಟರ್ ವಿಜ್ಞಾನ ವಿಭಾಗಗಳು ಜಂಟಿಯಾಗಿ ಯೋಜನೆ ರೂಪಿಸಿ ಸಂಶೋಧನೆ, ಸಂಶೋಧನಾ ಪ್ರಬಂಧ ಮಂಡನೆ, ಪ್ರಕಟಣೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲಿವೆ. ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿಭಾಗದ ಅಧ್ಯಾಪಕರು ಸಂಶೋಧನೆ ಮತ್ತು ಅಧ್ಯಯನಕ್ಕೆ ಸಂಬಂಧಿಸಿದಂತೆ ಪರಸ್ಪರ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ಕೆ.ಬಿ.ರಂಗಪ್ಪ, ಪ್ರೊ.ಜೆ.ಕೆ.ರಾಜು, ಪ್ರೊ. ಕುಮಾರ್, ಪ್ರೊ. ವೆಂಕಟೇಶ್, ಕಂಪ್ಯೂಟರ್ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ. ಬಸವಣ್ಣ, ಡಾ. ಚಂದ್ರಕಾಂತ ನಾಯ್ಕೋಡಿ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.