ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಹೆಳವನಕಟ್ಟೆ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದ ಕೆರೆಯು ಕೊಕ್ಕರೆಗಳ (ಬೆಳ್ಳಕ್ಕಿ) ಹಿಂಡಿನಿಂದ ಪಕ್ಷಿಧಾಮವಾಗಿ ಬದಲಾಗಿದ್ದು, ಜನಮನ ಸೆಳೆಯುತ್ತಿದೆ.
ಮಳೆ ಕೊರತೆಯಿಂದಾಗಿ ಸಂಪೂರ್ಣವಾಗಿ ಬತ್ತಿ ನೀರಿಲ್ಲದೇ ಒಣಗಿದ್ದ ಕೆರೆಯಲ್ಲಿ ಜಾಲಿ, ಲಂಟಾನ್ ಗಿಡಗಳು ಬೆಳೆದಿದ್ದವು. ಹೆಳವ ಹಾಲಪ್ಪ ಕಟ್ಟಿಸಿದ ಕೆರೆಯ ಒಂದು ಪಾರ್ಶ್ವದ ಹೂಳೆತ್ತಿಸಿ ಸ್ವಚ್ಛ ಮಾಡಿದ ಬಳಿಕ ಕೆರೆಯ ಸ್ವರೂಪ ಬದಲಾಗಿದೆ. ಕೆರೆಗೆ ನಾಲೆಯಿಂದ ನೀರು ಹರಿಸಲಾಯಿತು. ಮುಂಗಾರು ಮಳೆಗೆ ಅದು ಭರ್ತಿಯಾಯಿತು. ಹೀಗಾಗಿ ಅಲ್ಲಲ್ಲಿ ಕಾಣುವ ಜಾಲಿಮರಗಳು ಮೂರ್ನಾಲ್ಕು ಬಗೆಯ ಪಕ್ಷಿಗಳಿಗೆ ಆಶ್ರಯ ನೀಡಿವೆ.
ನಾಟಿ ವೇಳೆ ಭತ್ತದ ಗದ್ದೆಗಳಲ್ಲಿ ಹುಳು ಹೆಕ್ಕುವ ಬರುವ ಬೆಳ್ಳಕ್ಕಿಗಳು, ಸಂಜೆಯಾಗುತ್ತಿದ್ದಂತೆಯೇ ಹಿಂಡು ಹಿಂಡಾಗಿ ಕೆರೆ ಬಯಲಿಗೆ ಹಾರುತ್ತವೆ. ‘ಕಿಚ ಕಿಚ, ಕೊರ ಕೊರ, ಕಾಚ್’ ಎಂದು ಶಬ್ದ ಮಾಡುತ್ತಾ ಬರುವ ದೃಶ್ಯವೇ ಸೊಗಸು. ಬೆಳಗಿನ ವೇಳೆ ಅವು ಮತ್ತೆ ಸಾಲಾಗಿ ಅಲ್ಲಿಂದ ತೆರಳುವ ದೃಶ್ಯ ನಯನ ಮನೋಹರವಾಗಿರುತ್ತದೆ. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಹಕ್ಕಿಗಳ ಕಲರವ ಕಾಣಸಿಗುತ್ತದೆ.
ಕಳೆದ ಒಂದು ತಿಂಗಳಿಂದ ಸುತ್ತಮುತ್ತಲ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಪಕ್ಷಿಗಳು ಕೆರೆಗೆ ಬರುತ್ತಿದ್ದು, ಜನರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ ರಂಗನಾಥ ದೇವಾಲಯದ ಆಡಳಿತಾಧಿಕಾರಿ, ಉಪ ತಹಶೀಲ್ದಾರ್ ಆರ್. ರವಿ ಹಾಗೂ ಮುಜರಾಯಿ ಶಾನುಭೋಗ ಎಂ.ಡಿ. ಧರ್ಮರಾವ್.
ಇಲ್ಲಿ ಸಂತಾನೋತ್ಪತ್ತಿ ಮಾಡುವ ಪಕ್ಷಿಗಳನ್ನು ರಕ್ಷಿಸಬೇಕಾದರೆ ಸರ್ಕಾರವು ಕೆರೆಗೆ ತಂತಿಬೇಲಿ ಹಾಕಿ ಸೂಕ್ತ ಭದ್ರತೆ ಕಲ್ಪಿಸಬೇಕು. ಕೆರೆಗೆ ತ್ಯಾಜ್ಯ ಎಸೆಯದಂತೆ ನಿಯಂತ್ರಿಸಬೇಕು ಎನ್ನುತ್ತಾರೆ ಹಿರೆಹಾಲಿವಾಣದ ಶಿವಕ್ಳ ಆಂಜನೇಯ.
ಪ್ರವಾಸಿ ತಾಣವನ್ನಾಗಿ ಮಾಡಲು ಆಗ್ರಹ
ಸರ್ಕಾರವು ಈಗಾಗಲೇ ದೇವಾಲಯದಲ್ಲಿ ಪ್ರವಾಸಿಗರಿಗೆ ಯಾತ್ರಿ ನಿವಾಸ ಪ್ರವಾಸಿ ಬಂಗಲೆ ಕಟ್ಟಡಗಳನ್ನು ನಿರ್ಮಿಸಿದೆ. ಅದೇ ಮಾದರಿಯಲ್ಲಿ ಕೆರೆ ಅಭಿವೃದ್ಧಿ ಮಾಡಬೇಕು. ನದಿಯಿಂದ ನೀರು ಹರಿಸಿ ಕೆರೆ ಭರ್ತಿ ಮಾಡಬೇಕು. ವೀಕ್ಷಣಾ ಗೋಪುರ ದೋಣಿ ವಿಹಾರ ಕೇಂದ್ರಗಳನ್ನು ನಿರ್ಮಿಸಬೇಕು ಎನ್ನುತ್ತಾರೆ ಪರಿಸರ ಪ್ರೇಮಿಗಳು. ಯಾವ ಸರ್ಕಾರಗಳೂ ಕೆರೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲ. ಜಿಲ್ಲಾಡಳಿತ ಜನಪ್ರತಿನಿಧಿಗಳು ಸೂಕ್ತ ಯೋಜನೆ ರೂಪಿಸಿ ಇಲ್ಲಿ ಉದ್ಯಾನವನ ನಿರ್ಮಿಸಬೇಕು. ಉಪಹಾರ ಕೇಂದ್ರ ತೆರೆದು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕು. ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಹೆಳವನಕಟ್ಟೆ ಗಿರಿಯಮ್ಮನ ಕ್ಷೇತ್ರವು ಪಕ್ಷಿಧಾಮವಾಗಿ ಅಭಿವೃದ್ಧಿ ಹೊಂದಿದರೆ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.