
ದಾವಣಗೆರೆ: ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯ. ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಿದ ರಕ್ತದ ಶೇ 25ರಷ್ಟನ್ನು ಜಿಲ್ಲಾ ಆಸ್ಪತ್ರೆಗೆ ನೀಡಬೇಕು. ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡುವಂತಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಖಾಸಗಿ ರಕ್ತನಿಧಿ ಕೇಂದ್ರಗಳ ಸಮನ್ವಯ ಸಭೆ, ಎಚ್ಐವಿ ಹರಡುವಿಕೆ ಮತ್ತು ನಿಯಂತ್ರಣ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿರುವ ಹಲವು ಖಾಸಗಿ ರಕ್ತನಿಧಿ ಕೇಂದ್ರಗಳು ಎಚ್‌ಐವಿ ಬಾಧಿತರಿಂದಲೂ ರಕ್ತ ಸಂಗ್ರಹಿಸಿ ಪರೀಕ್ಷಿಸದೇ ಮಾರಾಟ ಮಾಡುತ್ತಿವೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿವೆ. ಈ ಕುರಿತು ಜಿಲ್ಲಾಡಳಿತಕ್ಕೆ ಹಲವು ದೂರುಗಳು ಬಂದಿವೆ. ದಾನಿಗಳಿಂದ ಪಡೆಯುವ ರಕ್ತವನ್ನು ಪರೀಕ್ಷಿಸುವುದು ಕಡ್ಡಾಯ’ ಎಂದು ತಾಕೀತು ಮಾಡಿದರು.
‘ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ರಕ್ತವನ್ನು ಉಚಿತವಾಗಿ ನೀಡಬೇಕು. ನಿಗದಿಪಡಿಸಿದ ದರಪಟ್ಟಿಯನ್ನು ರಕ್ತನಿಧಿ ಕೇಂದ್ರಗಳ ಎದುರು ಪ್ರಕಟಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚು ಹಣ ವಸೂಲಿ ಮಾಡುವಂತಿಲ್ಲ. ಮತ್ತೊಮ್ಮೆ ಇಂತಹ ದೂರುಗಳು ಬರದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.
200 ಎಚ್‌ಐವಿ ಪ್ರಕರಣ:
‘ಜಿಲ್ಲೆಯಲ್ಲಿ ಶೇ 0.35 ರಷ್ಟು ಎಚ್‌ಐವಿ ಸೋಂಕಿತರ ಪ್ರಮಾಣವಿದೆ. ಪ್ರತಿ ವರ್ಷ 200 ಹೊಸ ಎಚ್‌ಐವಿ ಪ್ರಕರಣಗಳು ಪತ್ತೆಯಾಗುತ್ತಿವೆ. ಎಚ್‌ಐವಿ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಹದಿಹರೆಯದವರ ಸಮಸ್ಯೆಗಳನ್ನು ಪರಿಹರಿಸಲು ಆಪ್ತ ಸಮಾಲೋಚನೆಗೆ ಒಳಪಡಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.
‘ಕುತೂಹಲ, ಹೊಸ ಅನುಭವ ಪಡೆಯುವ ಆಸಕ್ತಿ, ಬದಲಾಗುತ್ತಿರುವ ಸಾಮಾಜಿಕ, ಕೌಟುಂಬಿಕ ವಾತಾವರಣದಿಂದ ಯುವಜನರಲ್ಲಿ ಎಚ್‌ಐವಿ ಸೋಂಕು ಹರಡುತ್ತಿದೆ. ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ಕಡ್ಡಾಯ. ಸೋಂಕು ಕಂಡುಬಂದರೆ ವಿಶೇಷ ಚಿಕಿತ್ಸೆಯನ್ನು ನೀಡಿ ತಾಯಿಯಿಂದ ಮಗುವಿಗೆ ಸೋಂಕು ಹರಡುವುದನ್ನು ನಿಯಂತ್ರಿಸಬಹುದು’ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಹಾಜರಿದ್ದರು.
61 ಗ್ರಾಮ ಪಂಚಾಯಿತಿ ಕ್ಷಯಮುಕ್ತ
‘ಜಿಲ್ಲೆಯ 61 ಗ್ರಾಮ ಪಂಚಾಯಿತಿಗಳು ಕ್ಷಯ ರೋಗ ಮುಕ್ತವಾಗಿವೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಶ್ರಮವಹಿಸಿ ಜಿಲ್ಲೆಯನ್ನು ಕ್ಷಯ ರೋಗ ಮುಕ್ತವಾಗಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸೂಚನೆ ನೀಡಿದರು. ‘ಕ್ಷಯರೋಗ ನಿರ್ಮೂಲನೆಗೆ ಶಾಲಾ-ಕಾಲೇಜು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸಬೇಕು. ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಕ್ಷಯರೋಗಿಗಳ ಮಾಹಿತಿಯನ್ನು ಜಿಲ್ಲಾ ಆಸ್ಪತ್ರೆಗೆ ನೀಡಬೇಕು. ಕ್ಷಯರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ನಿಗಾವಹಿಸಬೇಕು’ ಎಂದರು.
2080 ಕ್ಷಯರೋಗಿಗಳು ಪತ್ತೆ
‘ಜಿಲ್ಲೆಯಲ್ಲಿ 2080 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ. ಕ್ಷಯರೋಗಿಗಳಿಗೆ 8991 ಆಹಾರ ಕಿಟ್ ವಿತರಿಸಲಾಗಿದೆ’ ಎಂದು ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮುರಳೀಧರ್ ಸಭೆಗೆ ಮಾಹಿತಿ ನೀಡಿದರು. ‘ಕ್ಷಯರೋಗ ವಾಸಿಯಾಗುವ ಕಾಯಿಲೆ. 9 ತಿಂಗಳವರೆಗೆ ಚಿಕಿತ್ಸೆ ನೀಡಿದಲ್ಲಿ ರೋಗಿ ಗುಣಮುಖನಾಗಲು ಸಾಧ್ಯ. ಕ್ಷಯ ರೋಗಿಗಳಿಗೆ ಪ್ರತಿ ತಿಂಗಳು ₹ 1000 ಗೌರವಧನ ಉಚಿತವಾಗಿ ಚಿಕಿತ್ಸೆ ಮತ್ತು ಆಹಾರ ಕಿಟ್ ನೀಡಲಾಗುತ್ತಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.