ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಏಪ್ರಿಲ್ ತಿಂಗಳಲ್ಲಿ ಮಾವಿನ ಮರ ಹೂವು ಬಿಟ್ಟು, ಚಿಗುರು ಹಾಗೂ ಹೀಚುಗಳಿಂದ ಕಂಗೊಳಿಸುತ್ತಿರುವುದು
ಚನ್ನಗಿರಿ: ಹಣ್ಣುಗಳ ರಾಜ ಮಾವಿನ ಸುಗ್ಗಿ ಮುಕ್ತಾಯವಾಗುವ ಸಮಯ ಸಮೀಪಿಸುತ್ತಿರುವ ವೇಳೆಯಲ್ಲಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮಾವಿನ ಮರಗಳು ಹೂವು, ಚಿಗುರಿನಿಂದ ಕಂಗೊಳಿಸುತ್ತಿವೆ.
ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಮಾವು ಹೂವು ಬಿಟ್ಟು, ಚಿಗುರಿನಿಂದ ತುಂಬಿಕೊಂಡು ಮಾರ್ಚ್ ತಿಂಗಳಿಂದ ಕಾಯಿ ಬಿಡುವುದು ಸಾಮಾನ್ಯ. ಬಸವ ಜಯಂತಿ ಕಳೆದು ಕಾರಹುಣ್ಣಿಮೆ ವೇಳೆಗೆ ಮಾವಿನಹಣ್ಣಿನ ಸೀಜನ್ ಮುಕ್ತಾಯವಾಗುತ್ತದೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಕೆಲವು ಗ್ರಾಮಗಳಲ್ಲಿ ಮಾವಿನ ಮರಗಳು ಏಪ್ರಿಲ್ ತಿಂಗಳಲ್ಲಿಯೂ ಹೂವು ಬಿಟ್ಟು, ಚಿಗುರು ಆಗಿ ಕಾಯಿಯಾಗಲು ಆರಂಭಿಸಿವೆ. ಜೂನ್ ವೇಳೆಗೆ ಮಾವಿನ ಹಣ್ಣಿನ ಫಸಲಿಗೆ ಬರುವ ಸಂಭವ ಇದೆ.
ತಾಲ್ಲೂಕಿನ ಮಾವು ಬೆಳೆಯುವ ಪ್ರದೇಶಗಳಲ್ಲಿ ಮಾವಿನಹಣ್ಣಿನ ಸುಗ್ಗಿ ಬಹುತೇಕ ಮುಕ್ತಾಯಗೊಂಡಿದೆ. ಈ ಬಾರಿ ಮಾವಿನ ಮರಗಳಿಗೆ ಅಂಟು ಹಾಗೂ ಬೂದು ರೋಗ ಬಿದ್ದ ಕಾರಣ ಹೂವು ಬಿಟ್ಟ ಸಮಯದಲ್ಲಿ ಬಹುತೇಕ ಹೂವುಗಳು ಉದುರಿದ್ದರಿಂದ ಮಾವಿನ ಕಾಯಿ ಇಳುವರಿ ಇಲ್ಲದೇ ಮಾವಿನ ತೋಟಗಳ ಕೇಣಿದಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಹೂವು ಬಿಡದ ಮಾವಿನ ಮರಗಳು ಈಗ ಹೂವು ಬಿಟ್ಟು ಚಿಗುರಿದ್ದು, ಕಾಯಿ ಕಟ್ಟುತ್ತಿವೆ. ಇದೇ ರೀತಿ ಬಿಸಿಲಿನ ವಾತಾವರಣ ಇದ್ದರೆ ಜೂನ್ ತಿಂಗಳಲ್ಲಿ ಮಾವು ಹಣ್ಣಾಗುವ ಸಂಭವ ಇದೆ. ಮಳೆ ಜಾಸ್ತಿಯಾದರೆ ಮಾವಿನ ಮರಗಳಲ್ಲಿನ ಕಾಯಿಗಳು ಉದುರಿ ಕೆಳಗೆ ಬೀಳಲು ಪ್ರಾರಂಭಿಸುತ್ತವೆ. ಹವಾಮಾನ ವೈಪರೀತ್ಯದಿಂದಾಗಿ ಈ ವ್ಯತ್ಯಾಸ ಕಂಡುಬಂದಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.