ADVERTISEMENT

ದಾವಣಗೆರೆ: ಡಿಸಿ, ಎಸ್‌ಪಿಯಿಂದ ಮಾಸ್ಕ್‌ ಜಾಗೃತಿ

ಎಚ್ಚೆತ್ತುಕೊಳ್ಳದಿದ್ದರೆ ಕಾದಿದೆ ಗಂಡಾಂತರ: ಮಹಾಂತೇಶ ಬೀಳಗಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:31 IST
Last Updated 19 ಏಪ್ರಿಲ್ 2021, 4:31 IST
ದಾವಣಗೆರೆ ತರಕಾರಿ ಮಾರುಕಟ್ಟೆ, ಎಪಿಎಂಸಿ ಸಹಿತ ವಿವಿಧೆಡೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿ ಅಧಿಕಾರಿಗಳು ಕೊರೊನಾ ಜಾಗೃತಿ ಅಭಿಯಾನ ನಡೆಸಿದರು.
ದಾವಣಗೆರೆ ತರಕಾರಿ ಮಾರುಕಟ್ಟೆ, ಎಪಿಎಂಸಿ ಸಹಿತ ವಿವಿಧೆಡೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿ ಅಧಿಕಾರಿಗಳು ಕೊರೊನಾ ಜಾಗೃತಿ ಅಭಿಯಾನ ನಡೆಸಿದರು.   

ದಾವಣಗೆರೆ: ಭಾನುವಾರ ಮುಂಜಾನೆ ತರಕಾರಿ ಮಾರುಕಟ್ಟೆಗೆ ಗ್ರಾಹಕರು ಬರುವ ಹೊತ್ತಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಹಿತ ಹಲವು ಅಧಿಕಾರಿಗಳು ಹಾಜರಾದರು. ಮಾಸ್ಕ್‌ ಧರಿಸದವರನ್ನು ಎಚ್ಚರಿಸಿದರು. ಹಲವರಿಗೆ ದಂಡ ವಿಧಿಸಿದರು. ಕೆಲವರಿಗೆ ಏಟಿನ ರುಚಿ ತೋರಿಸಿದರು.

ತರಕಾರಿ ಮಾರುಕಟ್ಟೆ, ಎಪಿಎಂಸಿ, ಗಡಿಯಾರ ಕಂಬ ಸೇರಿ ಹಲವೆಡೆ ಭೇಟಿ ನೀಡಿದರು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸ್ಯಾನಿಟೈಸರ್‌ ಹಾಕಿಕೊಳ್ಳಬೇಕು. ಅಂತರ ಕಾಪಾಡಿಕೊಳ್ಳಬೇಕು ಎಂದು ತಿಳಿ ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿದ್ದು, ಸಾರ್ವಜನಿಕರು ಮುಂಜಾಗ್ರತೆ ವಹಿಸದಿದ್ದರೆ ಭಾರಿ ಗಂಡಾಂತರಕ್ಕೆ ಸಿಲುಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದರು.

ADVERTISEMENT

ಜಿಲ್ಲೆಯಲ್ಲಿ ಈಗ 500ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಆದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಶನಿವಾರ ಮೂವರು ಸಚಿವರು ವಿಡಿಯೊ ಕಾನ್ಫರೆನ್ಸ್ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಕರ್ತವ್ಯನಿರತ ವೈದ್ಯರು ಒಂದು ವೇಳೆ ಪಾಸಿಟಿವ್ ಬಂದರೆ ಅಂಥವರನ್ನು ಸರ್ಕಾರಿ ಗೆಸ್ಟ್ ಹೌಸ್‍ಗಳಲ್ಲಿ ಅತಿಥಿ ಗೃಹಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು. ಅದಕ್ಕಾಗಿ ಈಗಾಗಲೇ ಸರ್ಕಾರಿ ಅತಿಥಿ ಗೃಹಗಳನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಆಸ್ಪತ್ರೆಗಳಲ್ಲಿ ರೋಗಿ
ಗಳನ್ನು ನೋಡಲು ಬರುವವರನ್ನು ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯ ಆಸ್ಪತ್ರೆಗಳಲ್ಲಿ 1,882 ಬೆಡ್‍ಗಳು ಸಿದ್ಧವಿದೆ. ಅದರಲ್ಲಿ 159 ಬೆಡ್‍ಗಳು ಭರ್ತಿಯಾಗಿವೆ. ಹಿಂದಿನ ವರ್ಷ 933 ಹಾಸಿಗೆಗಳು ಸಾಕಾಗಿದ್ದವು. ಹಾಗಾಗಿ ಎಂತಹ ಪರಿಸ್ಥಿತಿ ಬಂದರೂ ನಿಭಾಯಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ‘ಕೊರೊನಾ ಸೋಂಕು ತೀವ್ರಗೊಳ್ಳುತ್ತಿದ್ದರೂ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಜಾಗೃತಿ ಮೂಡಿಸಿ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುತ್ತಿದ್ದೇವೆ. ಮದುವೆ ಸಮಾರಂಭ, ಕಲ್ಯಾಣ ಮಂಟಪ, ರಾಜಕೀಯ ಆಚರಣೆಗಳು ಸೇರಿ ಸಭೆ ಸಮಾರಂಭಗಳಲ್ಲಿ ಜನಸಂಖ್ಯೆ ಮಿತಿಗೊಳಿಸಿದ್ದೇವೆ. ಧಾರ್ಮಿಕ ಸಭೆಗಳನ್ನು ನಿಷೇಧಿಸಿದ್ದೇವೆ’ ಎಂದರು.

ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ರೆಮ್‍ಡೆಸಿವರ್ ಸೂಜಿಮದ್ದು ಕಾಳಸಂತೆಯಲ್ಲಿ ಮಾರಾಟವಾಗುವುದು ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಾಗೃತಿ ಅಭಿಯಾನದಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಶೀಲ್ದಾರ್ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.