ADVERTISEMENT

ಲೆಕ್ಕ ಅಂದರೆ ದುಃಖ: 1247 ವಿದ್ಯಾರ್ಥಿಗಳು ಗೈರು

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 16:04 IST
Last Updated 27 ಜೂನ್ 2020, 16:04 IST
ದಾವಣಗೆರೆಯಲ್ಲಿ ಸೇಂಟ್‌ ಪಾಲ್‌ ಪರೀಕ್ಷಾ ಕೇಂದ್ರದ ಬಳಿಕ ವಿದ್ಯಾರ್ಥಿಗಳಿಗೆ ಕಾಯುತ್ತಿರುವ ಪಾಲಕರು
ದಾವಣಗೆರೆಯಲ್ಲಿ ಸೇಂಟ್‌ ಪಾಲ್‌ ಪರೀಕ್ಷಾ ಕೇಂದ್ರದ ಬಳಿಕ ವಿದ್ಯಾರ್ಥಿಗಳಿಗೆ ಕಾಯುತ್ತಿರುವ ಪಾಲಕರು   

ದಾವಣಗೆರೆ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿಯ ಗಣಿತ ಪರೀಕ್ಷೆಗೆ ಭಾರಿ ಸಂಖ್ಯೆಯಲ್ಲಿ ಅಂದರೆ 1247 ವಿದ್ಯಾರ್ಥಿಗಳಿ ಗೈರಾಗಿದ್ದಾರೆ.

ಒಟ್ಟು 21,991 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, ಅದರಲ್ಲಿ 20,804 ಮಂದಿ ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ ಮೊದಲ ಬಾರಿ ಪರೀಕ್ಷೆ ಬರೆದ ಶಾಲಾ ವಿದ್ಯಾರ್ಥಿಗಳ ಸಂಖ್ಯೆ 20,433 ಆಗಿದೆ. ಖಾಸಗಿಯಾಗಿ ಮೊದಲ ಬಾರಿ ಪರೀಕ್ಷೆ ಬರೆಯಲು 459 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಅದರಲ್ಲಿ 88 ಮಂದಿ ಗೈರಾಗಿದ್ದರು. ಬೇರೆ ಜಿಲ್ಲೆಯಲ್ಲಿ ಓದುತ್ತಿದ್ದ, ವಲಸೆ ಬಂದ 375 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಹೆಸರು ಸೇರಿಸಿಕೊಂಡಿದ್ದರು. ಅದರಲ್ಲಿ ಇಬ್ಬರು ಗೈರಾಗಿದ್ದಾರೆ.

ಕಂಟೈನ್‌ಮೆಂಟ್‌ ಪ್ರದೇಶದ 80 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆ ಬರೆಯಲು ಬಂದ ಬಳಿಕ ಅನಾರೋಗ್ಯ ಕಾಣಿಸಿಕೊಂಡ ಒಬ್ಬರಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಯಿತು.

ADVERTISEMENT

ಜಿಲ್ಲಾಧಿಕಾರಿ ಭೇಟಿ: ಸರ್ಕಾರಿ ಪ್ರೌಢಶಾಲೆ, ಸಿದ್ದಗಂಗಾ, ಗೋಪನಾಳ, ಬಾತಿ ಗ್ರಾಮಗಳ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.

‘ಕಣ್ಣಿನ ದೋಷ ಮತ್ತು ಶ್ರವಣದೋಷವುಳ್ಳ ಮಕ್ಕಳು ಕೂಡ ಪರೀಕ್ಷೆ ಬರೆಯುವ ಪರಿ ನೋಡಿ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ಸಾಮಾಜಿಕ ಅಂತರ ಕಾಪಡಿಕೊಂಡು ಯಾವುದೇ ರೀತಿಯ ಗೊಂದಲ ಆಗದಂತೆ ವಿದ್ಯಾರ್ಥಿಗಳನ್ನು ಒಳಗೆ ಕಳುಹಿಸಿ, ಕೂರಿಸುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರ ಥರ್ಮಲ್ ಸ್ಕಾನಿಂಗ್ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಇಬ್ಬರು ಎನ್.ಸಿ.ಸಿ ಕಮಾಂಡರ್‌ಗಳ ನೇಮಕ ಮಾಡಲಾಗಿದೆ. ರೆಡ್‌ಕ್ರಾಸ್, ಸ್ಕೌಟ್ಸ್ ಅಂಡ್ ಗೈಡ್ಸ್‌ನವರು ನಮಗೆ ನೆರವಾಗಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. ಬಹಳಷ್ಟು ದೂರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯುದಂತೆ ಎಚ್ಚರಿಕೆ ವಹಿಸಲಾಗಿದೆ’ ಎಂದು ತಿಳಿಸಿದರು.

ಡಿಡಿಪಿಐ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ಮುಖ್ಯ ಅಧೀಕ್ಷಕರು, ಎನ್.ಸಿ.ಸಿ. ಕಮಾಂಡರ್ಸ್‌ ಇದ್ದರು.

ಪಾಲಕರಲ್ಲಿ ಇಲ್ಲದ ಅಂತರ

ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲು ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹರಸಾಹಸ ಪಡುತ್ತಿದೆ. ಆದರೆ ಮಕ್ಕಳನ್ನು ಕರೆದುಕೊಂಡು ಹೋಗಲು ಬರುವ ಪಾಲಕರು ರಸ್ತೆ ಬದಿಯಲ್ಲಿ ಯಾವುದೇ ಅಂತರ ಕಾಯ್ದುಕೊಳ್ಳದೇ ಗುಂಪುಗೂಡಿ ನಿಂತಿರುವುದು ಬಹುತೇಕ ಪರೀಕ್ಷಾ ಕೇಂದ್ರಗಳ ಪಕ್ಕದ ರಸ್ತೆಯಲ್ಲಿ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.