ADVERTISEMENT

‘ಕರ್ನಾಟಕದ ಮ್ಯಾಂಚೆಸ್ಟರ್’ ಗತವೈಭವ ಮರುಕಳಿಸಲಿ

ಬೆಣ್ಣೆದೋಸೆ ಊರಾಗಿರುವುದು ದುರದೃಷ್ಟಕರ

ಡಿ.ಕೆ.ಬಸವರಾಜು
Published 11 ಆಗಸ್ಟ್ 2022, 5:09 IST
Last Updated 11 ಆಗಸ್ಟ್ 2022, 5:09 IST
ಅಥಣಿ ವೀರಣ್ಣ
ಅಥಣಿ ವೀರಣ್ಣ   

ದೇಶ ಸ್ವತಂತ್ರವಾಗಿ 75 ವರ್ಷ‌ ಪೂರೈಸುತ್ತಿರುವ ಸುಸಂದರ್ಭದಲ್ಲೇ ದಾವಣಗೆರೆ ಜಿಲ್ಲೆಯಾಗಿ ರೂಪುಗೊಂಡು ರಜತೋತ್ಸವದ ಸಂಭ್ರಮಾಚರಣೆಯಲ್ಲಿದೆ. ಮೊದಲು ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯ ಭಾಗವಾಗಿದ್ದ ಪ್ರದೇಶಗಳು ಒಟ್ಟಾಗಿ 1997ರ ಆಗಸ್ಟ್‌ನಲ್ಲಿ ಹೊಸ ಜಿಲ್ಲೆ ಹೊರಹೊಮ್ಮಿದೆ. ಅನೇಕರ ಹೋರಾಟದ ಫಲವಾಗಿ ದಾವಣಗೆರೆ ಜಿಲ್ಲೆಯಾಗಿ ರೂಪುಗೊಂಡಿದೆ. ಜಿಲ್ಲಾ ಕೇಂದ್ರದ ಸ್ಥಾನಮಾನ ಪಡೆಯಲು ಇಲ್ಲಿನವರ ಪ್ರಯತ್ನ, ಆಶಯದ ಕುರಿತು ಬೆಳಕು ಚೆಲ್ಲುವ ಸರಣಿ ನಿಮ್ಮ ನೆಚ್ಚಿನ ‘ಪ್ರಜಾವಾಣಿ’ಯಲ್ಲಿ ಇಂದಿನಿಂದ.

ದಾವಣಗೆರೆ: ‘25 ವರ್ಷಗಳ ಮುಂಚೆಯೇ ದಾವಣಗೆರೆ ಜಿಲ್ಲೆಯಾಗಬೇಕಿತ್ತು. ಆದರೆ, ಬ್ರಿಟಿಷರ ಕಲ್ಪನೆಯಲ್ಲಿ ಕೋಟೆಗಳು ಇರುವ ಪ್ರದೇಶಗಳನ್ನು ಜಿಲ್ಲೆಯನ್ನಾಗಿ ಮಾಡಿದ್ದರಿಂದ ಚಿತ್ರದುರ್ಗ ಮೊದಲು ಜಿಲ್ಲೆಯಾಗಿ, ದಾವಣಗೆರೆ ತಡವಾಗಿ ಆಯಿತು..’

ದಾವಣಗೆರೆ ಜಿಲ್ಲೆಯಾಗಿ 25 ವರ್ಷಗಳು ಸಂದಿದ್ದು, ಖ್ಯಾತ ಉದ್ಯಮಿ ಅಥಣಿ ವೀರಣ್ಣ ಅವರು ಜಿಲ್ಲೆಯಾದ ಬಗ್ಗೆ ಒಂದಿಷ್ಟು ನೆನಪುಗಳನ್ನು ‘ಪ್ರಜಾವಾಣಿ’ಯ ಜೊತೆ ಹಂಚಿಕೊಂಡಿದ್ದಾರೆ.

ADVERTISEMENT

‘ಶಿಕ್ಷಣ, ಕೈಗಾರಿಕೆಗಳ ಅಭಿವೃದ್ಧಿ, ಜನಸಂಖ್ಯೆ ಆಧಾರದ ಮೇಲೆ 1997ರಲ್ಲಿ ಚಿತ್ರದುರ್ಗದಿಂದ ಬೇರ್ಪಡಿಸಿ, ಹೊಸ ಜಿಲ್ಲೆಯನ್ನಾಗಿ ಮಾಡಲಾಯಿತು. ಈ ಕೀರ್ತಿ ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್ ಅವರಿಗೆ ಸಲ್ಲುತ್ತದೆ’ ಎಂದು ನೆನಪಿಸಿಕೊಂಡರು.

ಒಂದು ಕಾಲದಲ್ಲಿ ಹತ್ತಿ ಗಿರಣಿಗಳಿಂದಾಗಿ ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂಬ ಖ್ಯಾತಿ ಪಡೆದಿದ್ದ ದಾವಣಗೆರೆಯಲ್ಲಿ ಈಗ ಮಿಲ್‌ಗಳು ನಶಿಸಿ ಹೋಗಿವೆ. ಹತ್ತಿ ಗಿರಣಿಗಳಿಂದ ಗುರುತಿಸಿಕೊಳ್ಳಬೇಕಿದ್ದ ಜಿಲ್ಲೆಯು ಇಂದು ‘ಬೆಣ್ಣೆದೋಸೆ’ಯ ಊರು ಎಂದು ಕರೆಸಿಕೊಳ್ಳುತ್ತಿರುವುದು ದುರದೃಷ್ಟಕರ. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಿಂದಾಗಿ ‘ಕರ್ನಾಟಕದ ಆಕ್ಸ್‌ಫರ್ಡ್‌’ ಆಗಿ ಬೆಳೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ನೀರಾವರಿ ಪ್ರದೇಶ ವಿಶಾಲವಾಗಿದೆ. ಆದರೆ, ಕೈಗಾರಿಕೆಗಳು ನಿರೀಕ್ಷಿತ ಮಟ್ಟಿಗೆ ಅಭಿವೃದ್ಧಿಯಾಗಲಿಲ್ಲ. ರಾಜಕೀಯ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕೈಗಾರಿಕೆಯಲ್ಲಿ ಹಿಂದುಳಿಯಲು ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರು ಭದ್ರಾ ಜಲಾಶಯ ನಿರ್ಮಿಸದೇ ಇದ್ದರೆ ದಾವಣಗೆರೆಗೆ ಅಷ್ಟೊಂದು ಪ್ರಾಮುಖ್ಯತೆ ಇರುತ್ತಿರಲಿಲ್ಲ. ಜಿಲ್ಲೆಯೂ ಆಗುತ್ತಿರಲಿಲ್ಲ ಎಂದು ಅವರು ಸ್ಮರಿಸಿದರು.

‘ಕಿರ್ಲೋಸ್ಕರ್, ಪಾಲಿಫೈಬರ್ ಕಾರ್ಖಾನೆಗಳು, ಜವಳಿ ಮಿಲ್‌ಗಳು ಇದ್ದುದರಿಂದ ದಾವಣಗೆರೆ ಶ್ರೀಮಂತಿಕೆ ಪಡೆದಿತ್ತು. ಕೈಗಾರಿಕೆಗಳ ದೃಷ್ಟಿಯಲ್ಲಿ ಈಗ ಆ ಹೆಸರು, ಶಿವಮೊಗ್ಗ ಹಾಗೂ ಭದ್ರಾವತಿಗೆ ಹೋಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೈಗಾರಿಕೆಯಲ್ಲಿ ಜಿಲ್ಲೆ ಹಿಂದುಳಿದಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಲೋಚನೆಗಳನ್ನು ಇತರರೊಂದಿಗೆ ಹೋಲಿಸಲಸಾಧ್ಯ. ರಾಜಕಾರಣದಲ್ಲಿ ಮುಂಚೂಣಿಯಲ್ಲಿ ಇದ್ದರು. ಜೆ.ಎಚ್. ಪಟೇಲ್ ಅವರ ಜೊತೆ ಒಟನಾಡವಿದ್ದುದರಿಂದ ಜಿಲ್ಲೆಯಾಗಲು ಸಾಧ್ಯವಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ರಾಜಧಾನಿಯಾಗಬೇಕಿತ್ತು: ‘ದಾವಣಗೆರೆಯು ರಾಜ್ಯದ ಮಧ್ಯಭಾಗದಲ್ಲಿ ಇರುವುದರಿಂದ ಬೆಂಗಳೂರಿಗೆ ಬದಲಾಗಿ ರಾಜಧಾನಿ ಆಗಬೇಕಿತ್ತು. ಆದರೆ, ಮೂಲಸೌಲಭ್ಯಗಳ ಕೊರತೆ ಇದ್ದುದರಿಂದ ರಾಜಧಾನಿ ಆಗುವುದು ಕೈತಪ್ಪಿತು’ ಎಂದು ಅವರು ವಿಷಾದಿಸಿದರು.

‘ಎಸ್‌.ಎಸ್. ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದ ಸಂದರ್ಭ ಜಿಲ್ಲೆಯ ಮೂಲಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ದೊರೆಯಿತು. ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾದರೆ ಇನ್ನಷ್ಟು ಅಭಿವೃದ್ಧಿಯಾಗುತ್ತದೆ’ ಎಂಬ ಆಶಯ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.