ADVERTISEMENT

ತವರಿನ ಅಭಿವೃದ್ಧಿಗೆ ಸಹಕರಿಸುವೆ: ಪ್ರಭಾ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 15:34 IST
Last Updated 28 ಸೆಪ್ಟೆಂಬರ್ 2024, 15:34 IST
ಮಲೇಬೆನ್ನೂರು ಸಮೀಪದ ಹರಳಹಳ್ಳಿಯಲ್ಲಿ ಶನಿವಾರ  2 ಶಾಲಾ ಕೊಠಡಿ ಉದ್ಘಾಟನಾ ಕಾರ್ಯಕ್ರಮ ಚಿಣ್ಣರು ಚಾಲನೆ ನೀಡಿದರು.
ಮಲೇಬೆನ್ನೂರು ಸಮೀಪದ ಹರಳಹಳ್ಳಿಯಲ್ಲಿ ಶನಿವಾರ  2 ಶಾಲಾ ಕೊಠಡಿ ಉದ್ಘಾಟನಾ ಕಾರ್ಯಕ್ರಮ ಚಿಣ್ಣರು ಚಾಲನೆ ನೀಡಿದರು.   

ಮಲೇಬೆನ್ನೂರು: ‘ಹರಿಹರ ತಾಲ್ಲೂಕಿನ ಸಮಗ್ರ ಬದಲಾವಣೆ ಆಗಲೇಬೇಕಿದ್ದು, ಶಾಸಕರೊಟ್ಟಿಗೆ ಪಕ್ಷಾತೀತವಾಗಿ ಸಹಕರಿಸಲಾಗುವುದು’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

ಸಮೀಪದ ಹರಳಹಳ್ಳಿಯಲ್ಲಿ ಶನಿವಾರ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇತ್ರದ ವಿಪರ್ಯಾಸವೆಂದರೆ ಕಳೆದ ಕೆಲವು ವರ್ಷಗಳಿಂದ ಶಾಸಕರಾಗಿ ಆಯ್ಕೆಯಾದವರ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಿರುವುದು. ಹರಿಹರೇಶ್ವರ ದೇವಾಲಯ, ಬೃಹತ್‌ ಕೈಗಾರಿಕೆ, ಮಠ ಮಾನ್ಯಗಳಿದ್ದು, ತವರು ಮನೆಯ ಅಭಿವೃದ್ಧಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ. ಹರೀಶ್‌ ಸಹಕಾರ ನೀಡುವ ಭರವಸೆ ನೀಡಿ, ‘ಸಂಸದರಿಗೆ ರಾಜ್ಯ ಹೆದ್ದಾರಿ– 25 ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ ಹಾಗೂ ಹಾಳಾಗಿರುವ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಕೋರಿದರು.

ಶಾಲಾ ಕಟ್ಟಡ, ಕಾಂಪೌಂಡ್, ಶೌಚಾಲಯಕ್ಕೆ ಗ್ರಾಮಸ್ಥರು ಬೇಡಿಕೆ ಇಟ್ಟರು. ‘ವಿವಿಧೆಡೆ ದೇವಾಲಯ, ಸಮುದಾಯ ಭವನಕ್ಕೆ ಹಣ ನೀಡುವ ರಾಜಕೀಯ ಒತ್ತಡ, ಅನಿವಾರ್ಯತೆ ಎದುರಾಗುತ್ತಿದೆ. ಬಾಲಕಿಯರ ಶೌಚಾಲಯ ನಿರ್ಮಿಸಲು ಹಣ ನೀಡಲಾಗುವುದು’ ಎಂದು ಶಾಸಕರು ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ‘ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತನ್‌ ಗಡ್ಕರಿ ಅವರೊಂದಿಗೆ ಚರ್ಚೆ ಮಾಡಲಾಗಿದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷೆ ಜಯಮ್ಮ, ಬಿಇಒ ದುರ್ಗಪ್ಪ, ಪಿಡಿಒ ಶಾಂತಪ್ಪ, ಮುಖ್ಯ ಶಿಕ್ಷಕ ಶಿವಣ್ಣ, ನಂದಿಗಾವಿ ಶ್ರೀನಿವಾಸ್‌ ,ಹನಗವಾಡಿ ವೀರೇಶ್‌ ಐರಣಿ ಅಣ್ಣಪ್ಪ, ಎಂ.ಬಿ.ಅಬಿದ್‌ ಅಲಿ, ಎಸ್.ಜಿ. ಪರಮೇಶ್ವರಪ್ಪ, ಪಟೇಲ್‌ ಮಂಜುನಾಥ್ ಎಸ್ಡಿಎಂಸಿ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ ಸಂಸದೆ

ವೇದಿಕೆ ಕೆಳಗಿಳಿದು ವಿದ್ಯಾರ್ಥಿಗಳನ್ನು ಮಾತನಾಡಿಸಿದ ಸಂಸದೆ ಪೌಷ್ಟಿಕ ಆಹಾರ ಸೇವಿಸಲು ಸಲಹೆ ನೀಡಿದರು. ‘ಶಿಕ್ಷಕರು ಚೆನ್ನಾಗಿ ಓದಿಸುತ್ತಾರಾ? ಮೊಟ್ಟೆ ನೀಡುತ್ತಿದ್ದಾರೆಯೇ ಹಣ್ಣು ಗೋಡಂಬಿ ದ್ರಾಕ್ಷಿ ತಿನ್ನುತ್ತೀರಾ ಹಾಲು ಕುಡಿಯುವಿರಾ’ ಎಂದು ಪ್ರಶ್ನಿಸಿದರು. ಒಂದು ಲೋಟ ಹಾಲು ಮೊಟ್ಟೆ ಚಿಕ್ಕಿ ನೀಡುವುದಾಗಿ ಶಿಕ್ಷಕರು ಉತ್ತರಿಸಿದರು. ‘ಪ್ರತಿ ರಾತ್ರಿ ಒಂದು ಕಪ್‌ ಹಾಲು ಕುಡಿಯಿರಿ ಹೆಚ್ಚು ಪ್ರೊಟೀನ್‌ ಅಂಶವಿರುವ ಒಂದು ಹಿಡಿ ಶೇಂಗಾ ತಿನ್ನಿ’ ಎಂದು ಸಲಹೆ ನೀಡಿದರು. ‘ಅಪ್ಪ ಅಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡುವಿರಾ ಮುಂದೆ ಏನಾಗಲು ಬಯಸುವಿರಿ? ‘ರಾಜಕಾರಣಿ ಡಾಕ್ಟರ್‌ ಎಂಜಿನಿಯರ್‌ ವಿಜ್ಞಾನಿ ಶಿಕ್ಷಕ ಪೊಲೀಸ್ ಆಗುವಿರಾ’ ಎಂದು‌ ವಿದ್ಯಾರ್ಥಿಗಳ ಕೈ ಎತ್ತಿಸಿದರು. ಮಕ್ಕಳಿಂದ 5 7ರ ಮಗ್ಗಿ ಹೇಳಿಸಿ ಅಪ್ಪಟ ಶಿಕ್ಷಕಯಾಗಿದ್ದರು. ಮಾಜಿ ರಾಷ್ಟ್ರಪತಿ ವಿಜ್ಞಾನಿ ಡಾ. ಅಬ್ದುಲ್‌ ಕಲಾಂ ಕುರಿತಾಗಿ ಪ್ರಶ್ನಿಸಿ ಅವರಂತೆ ಮುಂದೆ ಬನ್ನಿ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.