ADVERTISEMENT

ಕಲ್ಪನಹಳ್ಳಿಯಲ್ಲಿ ಮೆಘಾ ಡೇರಿ ನಿರ್ಮಾಣಕ್ಕೆ ಶೀಘ್ರ ಚಾಲನೆ

ಹೊನ್ನಾಳಿ: ಶಿಮುಲ್ ಹಾಲು ಒಕ್ಕೂಟದ ವಿಭಾಗೀಯ ಮಟ್ಟದ ಸಭೆಯಲ್ಲಿ ವಿದ್ಯಾಧರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 4:18 IST
Last Updated 13 ಸೆಪ್ಟೆಂಬರ್ 2025, 4:18 IST
1ಇಪಿ : ಹೊನ್ನಾಳಿ ತಾ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ನಡೆದ ಶಿಮುಲ್ ಹಾಲು ಒಕ್ಕೂಟದ ವಿಭಾಗೀಯ ಮಟ್ಟದ ಸಭೆಯಲ್ಲಿ ಶಿಮುಲ್ ಅಧ್ಯಕ್ಷ ವಿದ್ಯಾಧರ ಮಾತನಾಡಿದರು.
1ಇಪಿ : ಹೊನ್ನಾಳಿ ತಾ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ನಡೆದ ಶಿಮುಲ್ ಹಾಲು ಒಕ್ಕೂಟದ ವಿಭಾಗೀಯ ಮಟ್ಟದ ಸಭೆಯಲ್ಲಿ ಶಿಮುಲ್ ಅಧ್ಯಕ್ಷ ವಿದ್ಯಾಧರ ಮಾತನಾಡಿದರು.   

ಹೊನ್ನಾಳಿ: ದಾವಣಗೆರೆ ತಾಲ್ಲೂಕು ಎಚ್. ಕಲ್ಪನಹಳ್ಳಿಯಲ್ಲಿ ಈ ಹಿಂದೆ 14 ಎಕರೆ ಜಮೀನು ಮಂಜೂರಾಗಿದ್ದು, ಅಲ್ಲಿ 5 ಲಕ್ಷ ಲೀಟರ್ ಸಾಮಾರ್ಥ್ಯದ ₹ 280 ಕೋಟಿ ವೆಚ್ಚದ ಮೆಘಾ ಡೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ (ಶಿಮುಲ್) ವಿದ್ಯಾಧರ ಹೇಳಿದರು.

ತಾಲ್ಲೂಕಿನ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಶುಕ್ರವಾರ ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲ್ಲೂಕಿನ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ವಿಭಾಗೀಯ ಮಟ್ಟದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಆದರೆ, ಮಾರುಕಟ್ಟೆ ಸಮಸ್ಯೆ ಇದೆ. ಇತ್ತೀಚೆಗೆ 50ಕ್ಕೂ ಹೆಚ್ಚು ಪಾರ್ಲರ್‌ಗಳನ್ನು ತೆರೆಯಲಾಗಿದೆ. ಪ್ರತಿ ವರ್ಷ ₹ 35 ಕೋಟಿಯಷ್ಟು ಸಬ್ಸಿಡಿ ನೀಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಶಿಮುಲ್ ಒಕ್ಕೂಟದ ನಿರ್ದೇಶಕ ಎಚ್.ಕೆ. ಬಸಪ್ಪ ಮಾತನಾಡಿ, ‘ಮೆಘಾ ಡೇರಿ ನಿರ್ಮಾಣಕ್ಕೆ ₹ 280 ಕೋಟಿ ಯೋಜನಾ ವೆಚ್ಚ ತಯಾರಿಸಿದ್ದು, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ಟರ್ನ್ ಕೀ ಆಧಾರದ ಮೇಲೆ ಇದನ್ನು ನಿರ್ಮಿಸಲಿದೆ. ಇದರಲ್ಲಿ ₹ 84 ಕೋಟಿಯಷ್ಟು ಹಣವನ್ನು ನಮ್ಮ ಒಕ್ಕೂಟದಿಂದ ಸ್ವಂತವಾಗಿ ಬಳಸುತ್ತಿದ್ದೇವೆ. ಉಳಿದ ₹ 196 ಕೋಟಿ ಅನುದಾನವನ್ನು ನಾವು ಎನ್‍ಡಿಡಿಬಿ ವತಿಯಿಂದ ಸಾಲವಾಗಿ ಪಡೆಯುತ್ತಿದ್ದೇವೆ’ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿ ಸದಸ್ಯರು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು, ಸಿಬ್ಬಂದಿಗೆ ಎ.ಎಂ.ಸಿ.ಎಸ್ ಸಾಫ್ಟ್‌ವೇರ್ ಬಗ್ಗೆ ತರಬೇತಿ ನೀಡಲಾಗುವುದು. ಒಕ್ಕೂಟದ ಮಾರುಕಟ್ಟೆಯನ್ನು ವಿಸ್ತರಿಸಿ, ಮುಂದಿನ ದಿನಗಳಲ್ಲಿ ಹಾಲಿಗೆ ಯೋಗ್ಯವಾದ ದರವನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

‘ಸಭೆಯಲ್ಲಿ ಚರ್ಚೆಗೊಳಪಟ್ಟ ವಿಷಯಗಳನ್ನು, ಸಲಹೆ, ಸೂಚನೆಗಳನ್ನು ಸ್ವೀಕರಿಸಿ ಸರಿಪಡಿಸಿಕೊಳ್ಳಲಾಗುವುದು. ಹೈನೋದ್ಯಮವು ರೈತರಿಗೆ ನಿರಂತರವಾಗಿ ಮಾರುಕಟ್ಟೆ ನೀಡುವ ಕ್ಷೇತ್ರವಾಗಿದೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ’ ಎಂದು ಶಿಮುಲ್ ನಿರ್ದೇಶಕ ಬಿ.ಜಿ.ಬಸವರಾಜಪ್ಪ ಹೇಳಿದರು.

ಸಮಾರಂಭದಲ್ಲಿ ಶಿಮುಲ್ ಮಾಜಿ ಅಧ್ಯಕ್ಷ ಜಗದೀಶಪ್ಪ ಬಣಕಾರ್, ಚೇತನ್ ಎಸ್. ನಾಡಿಗೇರ್ ಮಾತನಾಡಿದರು. ಶಿಮುಲ್ ವಿಸ್ತರಣಾಧಿಕಾರಿ ಚನ್ನಗಿರಿಯ ಕೆ. ಕರಿಯಮ್ಮ ಸ್ವಾಗತಿಸಿದರು. ಉಪವ್ಯವಸ್ಥಾಪಕ ಡಾ. ಸಂಜಯ್ ನಿರೂಪಿಸಿದರು. ಗುಂಡಪ್ಪ ಯರಗಟ್ಟಿ ವಂದನೆ ಸಲ್ಲಿಸಿದರು. ಸಮಾರಂಭದಲ್ಲಿ ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿಯ ಹಾಲು ಒಕ್ಕೂಟದ ಸಾವಿರಾರು ಸದಸ್ಯರು ಭಾಗವಹಿಸಿದ್ದರು.

2ಇಪಿ : ಶಿಮುಲ್ ನಿರ್ದೇಶಕ ಎಚ್.ಕೆ. ಬಸಪ್ಪ ಅವರು ಮಾತನಾಡಿದರು. 
ಹೊನ್ನಾಳಿ ಚನ್ನಗಿರಿ ಮತ್ತು ನ್ಯಾಮತಿ ತಾಲ್ಲೂಕುಗಳಿಂದ ಒಟ್ಟು 35682 ಸದಸ್ಯರಿದ್ದು ಅವರ ಪೈಕಿ 16915 ಸದಸ್ಯರು ಹಾಲು ಹಾಕುತ್ತಿದ್ದಾರೆ.
– ಎಸ್.ಜಿ. ಶೇಖರ್, ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.