ADVERTISEMENT

ನನ್ನೆದುರು ಸೋತು ಮಲ್ಲಿಕಾರ್ಜುನಗೆ ಮಾನಸಿಕ ಖಿನ್ನತೆ: ಸಂಸದ ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 21 ಮೇ 2021, 3:36 IST
Last Updated 21 ಮೇ 2021, 3:36 IST
ಜಿ.ಎಂ ಸಿದ್ದೇಶ್ವರ್‌
ಜಿ.ಎಂ ಸಿದ್ದೇಶ್ವರ್‌   

ದಾವಣಗೆರೆ: ‘ನನ್ನೆದುರು ಸೋತು ಸೋತು ಮಲ್ಲಿಕಾರ್ಜುನಗೆ ಮಾನಸಿಕ ಖಿನ್ನತೆ ಉಂಟಾಗಿದೆ. ಹಾಗಾಗಿ ಉದ್ವೇಗದಿಂದ ಮಾತನಾಡುತ್ತಿದ್ದಾನೆ. ಮಾನಸಿಕತೆ ಬಗ್ಗೆ ಎಲ್ಲಾದರೂ ತೋರಿಸಿಕೊಳ್ಳುವುದು ಒಳ್ಳೆಯದು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹರಿಹಾಯ್ದಿದ್ದಾರೆ.

ಸಿದ್ದೇಶ್ವರ ಬಗ್ಗೆ ಮಲ್ಲಿಕಾರ್ಜುನ ಮಾಡಿದ್ದ ಆರೋಪಗಳಿಗೆ ಸುದ್ದಿಗಾರರ ಜತೆ ಅವರು ಪ್ರತಿಕ್ರಿಯಿಸಿದರು. ‘ನನಗೆ ದಿನಕ್ಕೆ ಒಂದು ಕೋಟಿ ಆದಾಯ ಇದೆ ಎಂದು ಹೇಳಲು ಈತ ನಮ್ಮ ಅಂಗಡಿಯಲ್ಲಿ ಗುಮಾಸ್ತನಾಗಿದ್ದಾನಾ? ನಮ್ಮ ಆಸ್ತಿ ಬಗ್ಗೆ ಕೇಳಲು ಇವರು ಯಾರು’ ಎಂದು ಪ್ರಶ್ನಿಸಿದರು.

‘ಸಂಸದ ಆದ ಮೇಲೆ ನನ್ನ ಆಸ್ತಿ ಜಾಸ್ತಿಯಾಗಿದೆ. ಚರ್ಚೆಗೆ ಬರಲಿ ಎಂದಿದ್ದಾನೆ. ಬೇರೆಯವರು ಕಟ್ಟಿದ ಬಾಪೂಜಿ ಸಂಸ್ಥೆಗಳನ್ನು ಹೊಡ್ಕೊಳ್ಳುವವರೆಗೆ ಇವರಲ್ಲಿ ಎಲ್ಲಿತ್ತು ಆಸ್ತಿ? ನಮ್ಮಪ್ಪ ಮೊದಲಿನಿಂದಲೂ ಶ್ರೀಮಂತರಾಗಿದ್ದರು. 1994ರಲ್ಲಿ ಇವರು ಲಕ್ಷ್ಮೀ ಫ್ಲೋರ್‌ ಮಿಲ್‌ ಖರೀದಿಸಲು ನಾನು ಸಾಲ ಕೊಟ್ಟಿದ್ದೆ. 1996ರಲ್ಲಿ ವಿದೇಶದಿಂದ ಸಕ್ಕರೆ ತರಿಸಲು ಸಾಲ ಕೊಟ್ಟಿದ್ದೆ. 1997ರಲ್ಲಿ ವಾಲಂಟೈರ್‌ ಡಿಕ್ಲರ್‌ ಮಾಡಲು ಸಾಲ ಕೊಟ್ಟಿದ್ದೆ. ಅದನ್ನೆಲ್ಲ ವಸೂಲಿ ಮಾಡಲು ಕಷ್ಟವಾಗಿತ್ತು’ ಎಂದರು.

ADVERTISEMENT

‘ನಾನು ತಾಯಿ ಹಾಲು ಕುಡಿದವನು. ನಾಯಿ ಹಾಲು ಕುಡಿವ ನಾಯಿಗಳಿಗಾದರೂ ನಿಯತ್ತಿದೆ. ಇವರಿಗಿಲ್ಲ. ನಿನ್ನೆ ಮಾತನಾಡುವಾಗ ಪಕ್ಕದಲ್ಲಿ ಸೈಯದ್‌ ಸೈಫುಲ್ಲ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದರು. ಸೈಫುಲ್ಲ ಅವರಿಗೆ 1994ರಲ್ಲಿ ಬಿ ಫಾರ್ಮ್‌ ಸಿಕ್ಕಿದಾಗ ಏನು ಮಾಡಿದರು ಎಂದು ಗೊತ್ತಿದೆ’ ಎಂದು ಹೇಳಿದರು.

‘ಶಾಮನೂರು ಶಿವಶಂಕರಪ್ಪ ಹಿರಿಯರು. ಆ ಕಾರಣಕ್ಕೆ ಅವರಿಗೆ ಗೌರವ ಕೊಡುತ್ತೇನೆ. ಮಲ್ಲಿಕಾರ್ಜುನ ನನಗಿಂತ ಕಿರಿಯ. ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಲಿ. ಮೋದಿ ಮುಂದೆ ಮಂಡಿಯೂರುತ್ತೇನೆ ಎಂದೆಲ್ಲ ಟೀಕೆ ಮಾಡಿದ್ದಾನೆ. ನಾನು ಮತ್ತು ಮೋದಿ ಸಮ ವಯಸ್ಕರು. ನಾನು ಪ್ರಧಾನಿ ಮುಂದೆ ಮಂಡಿಯೂರಲ್ಲ. ಗೌರವಯುತವಾಗಿ ಮಾತನಾಡುತ್ತೇನೆ. ಹಿರಿಯರ ಮುಂದೆ ಮಂಡಿಯೂರುತ್ತೇನೆ’ ಎಂದು ಉತ್ತರಿಸಿದರು.

‘ಜಿಲ್ಲೆಯಲ್ಲಿ ಕೆಲಸ ಮಾಡುವವರು ಡಿಸಿ, ಎಸ್ಪಿ. ಹಾಗಾಗಿ ಅವರನ್ನು ಕರೆಕೊಂಡು ಹೋಗಿಯೇ ನೋಡಬೇಕು. ಪ್ರತಿ ತಾಲೂಕು 2-3 ಸಲ ಸುತ್ತಾಡಿದ್ದೇನೆ. ಜಿಲ್ಲಾಸ್ಪತ್ರೆ, ಸರ್ಕಾರಿ ಆಸ್ಪತ್ರೆಗಳಿಗೂ ಸುತ್ತಾಡಿದ್ದೇನೆ. ಇದೆಲ್ಲ ಪ್ರದರ್ಶನವಲ್ಲ. ಅಂಥ ಬುದ್ಧಿಯೂ ನನಗಿಲ್ಲ. ಜನರ ಮಾಲೀಕರು ನಾವಲ್ಲ. ಜನರ ಸೇವಕರು ನಾವು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.