
ದಾವಣಗೆರೆ: ರಾಷ್ಟ್ರೀಯ ಆಹಾರ ಭದ್ರತೆ ಹಾಗೂ ಪೌಷ್ಟಿಕ ಆಹಾರ ಅಭಿಯಾನದ ಅಂಗವಾಗಿ ಕೃಷಿ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ‘ಬರದ ಭಯಕ್ಕೆ ಸಿರಿಧಾನ್ಯ ಅಭಯ’, ‘ಜೋಳ ತಿಂದವನು ಆಗುವನು ಗೂಳಿಯಂತೆ ಬಲಿಷ್ಠ’, ‘ಸಿರಿಧಾನ್ಯ ತಿನ್ನಿರಿ ಆರೋಗ್ಯ ಕಾಪಾಡಿಕೊಳ್ಳಿ’ ಎಂಬ ಭಿತ್ತಿಚಿತ್ರಗಳನ್ನು ಹಿಡಿದು ನಡಿಗೆಯಲ್ಲಿ ಹೆಜ್ಜೆ ಹಾಕಿದರು.
ಪುರುಷರು ಪಂಚೆ ಹಾಗೂ ಶಲ್ಯ ಧರಿಸಿದ್ದರು. ಮಹಿಳೆಯರು ಸೀರೆಯುಟ್ಟು ಸಾಗಿದರು. ಡೊಳ್ಳ ಕುಣಿತ ಸೇರಿದಂತೆ ಕಲಾ ತಂಡಗಳು ನಡಿಗೆಯನ್ನು ಇನ್ನಷ್ಟು ಆಕರ್ಷಕಗೊಳಿಸಿದ್ದವು. ಸಿರಿಧಾನ್ಯಗಳ ಮಹತ್ವ ಸಾರುವ ಘೋಷಣೆಗಳು ಮೊಳಗಿದವು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಅವರು ನಗರದ ಗುಂಡಿ ಮಹದೇವಪ್ಪ ವೃತ್ತದಲ್ಲಿ ನಡಿಗೆಗೆ ಚಾಲನೆ ನೀಡಿದರು. ಇಲ್ಲಿಂದ ಆರಂಭವಾದ ನಡಿಗೆ ಶಾಮನೂರು ರಸ್ತೆ, ಗಂಗೂಬಾಯಿ ಹಾನಗಲ್ ಉದ್ಯಾನದ ಮೂಲಕ ಕರ್ನಲ್ ಎಂ.ಬಿ.ರವೀಂದ್ರನಾಥ ವೃತ್ತದಲ್ಲಿ ಅಂತ್ಯವಾಯಿತು. ಮನವ ಸರಪಳಿ ನಿರ್ಮಿಸಿ ಸಿರಿಧಾನ್ಯಗಳ ಮಹತ್ವ ಸಾರಲಾಯಿತು.
‘ಹೈಬ್ರೀಡ್ ಧಾನ್ಯಗಳ ಆಹಾರ ಕಡಿಮೆ ಮಾಡಿ ಪಾರಂಪರಿಕವಾಗಿ ಬಂದಿರುವ ಸಿರಿಧಾನ್ಯ ಆಹಾರ ಪದ್ಧತಿ ರೂಢಿಸಿಕೊಂಡರೆ ಆರೋಗ್ಯ ಚೆನ್ನಾಗಿ ಇರುತ್ತದೆ. ಬದಲಾದ ಜೀವನ ಶೈಲಿಯಿಂದ ಅಂಟುತ್ತಿರುವ ಕಾಯಿಲೆಗಳನ್ನು ದೂರವಿಡಬಹುದು. ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಅಭಿಪ್ರಾಯಪಟ್ಟರು.
‘ಸಿರಿಧಾನ್ಯ ಬಡವರ ಆಹಾರ ಎಂಬ ಕೀಳರಿಮೆ ಹಿಂದೆ ಇತ್ತು. ಈಗ ಕಾಲ ಬದಲಾಗಿದ್ದು, ಇದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯುವ ಈ ಧಾನ್ಯದಿಂದ ರೈತರ ಬದುಕು ಕೂಡ ಹಸನವಾಗಲಿದೆ. ಭತ್ತ, ಮೆಕ್ಕೆಜೋಳ ಸೇರಿದಂತೆ ಇತರ ಬೆಳೆಗಳಿಗೆ ಬೇಕಾಗುವಷ್ಟು ನೀರು ಸಿರಿಧಾನ್ಯಗಳಿಗೆ ಬೇಡ. ಇದರಿಂದ ನೀರಿನ ಸಂರಕ್ಷಣೆ ಆಗಲಿದೆ. ಹೀಗಾಗಿ ಸಿರಿಧಾನ್ಯ ಬಳಕೆ ಇನ್ನೂ ಹೆಚ್ಚಾಗಬೇಕು’ ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ದೇವರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.