ADVERTISEMENT

ದಾವಣಗೆರೆ ಜಿಲ್ಲೆಗೆ ಮತ್ತೆ ತಪ್ಪಿದ ಸಚಿವ ಸ್ಥಾನ

ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ನೋವಲ್ಲೂ ನಿಷ್ಠೆ ತೋರುತ್ತಿರುವ ಶಾಸಕರು

ಬಾಲಕೃಷ್ಣ ಪಿ.ಎಚ್‌
Published 5 ಆಗಸ್ಟ್ 2021, 2:08 IST
Last Updated 5 ಆಗಸ್ಟ್ 2021, 2:08 IST
ಎಸ್‌.ಎ. ರವೀಂದ್ರನಾಥ್
ಎಸ್‌.ಎ. ರವೀಂದ್ರನಾಥ್   

ದಾವಣಗೆರೆ: ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನ ಸಿಕ್ಕಿಯೇ ಸಿಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡವರಿಗೆ ನಿರಾಸೆಯಾಗಿದೆ. ಐವರು ಶಾಸಕರಿದ್ದರೂ ಎಲ್ಲರಿಗೂ ‘ಬೆಣ್ಣೆ’ ಹಚ್ಚಿ ಸುಮ್ಮನೆ ಕೂರಿಸುವಲ್ಲಿ ಬಿಜೆಪಿಯ ವರಿಷ್ಠರು ಯಶಸ್ವಿಯಾಗಿದ್ದಾರೆ.

ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಹಿಂದೆ ತೋಟಗಾರಿಕೆ ಸಚಿವರಾಗಿ ಕೆಲಸ ಮಾಡಿದ ಅನುಭವ ಇದ್ದವರು. ಪಕ್ಷದ ಹಿರಿಯರಲ್ಲಿ ಒಬ್ಬರು. ಜಿಲ್ಲೆಯಲ್ಲಿ ಬಿಜೆಪಿಯ ಇತರ ಶಾಸಕರು ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಜತೆಗೆ ಹೋದರೂ ಕೆಜೆಪಿಗೆ ಹೋಗದೇ ಗಟ್ಟಿಯಾಗಿ ಪಕ್ಷದಲ್ಲಿ ನಿಂತವರು. ಹಾಗಾಗಿ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯೂ ನಿಜವಾಗಿಲ್ಲ.

‘ಜನಪ್ರತಿನಿಧಿಗಳು ಯಾವತ್ತೂ ಆಶಾವಾದಿಗಳಾಗಿರಬೇಕು. ಇನ್ನೂ ನಾಲ್ಕು ಸ್ಥಾನ ಭರ್ತಿಯಾಗಿಲ್ಲ. ಅದರಲ್ಲಿ ಒಂದನ್ನು ದಾವಣಗೆರೆ ಜಿಲ್ಲೆಗೆ ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅಬಕಾರಿ ಸಚಿವರಾಗಿ ಕೆಲಸ ಮಾಡಿದವರು. 2019ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಲೇ ಸಚಿವ ಸ್ಥಾನಕ್ಕಾಗಿ ತೀವ್ರ ಹಕ್ಕೊತ್ತಾಯ ಮಂಡಿಸಿದ್ದರು. ಈ ಬಾರಿಯೂ ಮುಂದುವರಿಸಿದ್ದರು. ಜಿಲ್ಲೆಯಿಂದ ಮುಂಚೂಣಿಯಲ್ಲಿದ್ದ ಮೂರು ಹೆಸರುಗಳಲ್ಲಿ ಅವರದ್ದೂ ಒಂದಾಗಿತ್ತು.

‘ಮಧ್ಯಕರ್ನಾಟಕಕ್ಕೆ ಸಚಿವ ಸ್ಥಾನಕೊಡಲೇಬೇಕು ಎಂದುಒತ್ತಾಯಿಸಿದ್ದೆವು. ನಮ್ಮಲ್ಲಿ ಯಾರಾದರೂ ಸಚಿವರಾಗುತ್ತೇವೆ ಎಂದು ನಂಬಿದ್ದೆವು. ಕೊಡಬೇಕಿತ್ತು, ಕೊಟ್ಟಿಲ್ಲ. ಮುಖ್ಯಮಂತ್ರಿ ಮತ್ತು ಬಿಜೆಪಿ ಹೈಕಮಾಂಡ್‌ ನಿರ್ಧಾರಕ್ಕೆ ತಲೆಬಾಗುತ್ತೇನೆ. ಮುಂದೆಯೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ’ ಎಂದು ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ.

ಎರಡು ಬಾರಿ ಶಾಸಕರಾಗಿ ಅನುಭವ ಹೊಂದಿರುವ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಈ ಬಾರಿ ಸಚಿವರಾಗಲು ಪ್ರಯತ್ನಿಸಿದ್ದರು. ಆದರೆ, ಅವರ ಪ್ರಯತ್ನ ಕೈಗೂಡಿಲ್ಲ.

‘ರಾಜ್ಯದ ಅಭಿವೃದ್ಧಿ ಮತ್ತು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ ನಿರ್ಧಾರ ಕೈಗೊಂಡಿದ್ದಾರೆ. ಸಚಿವ ಸ್ಥಾನ ಜಿಲ್ಲೆಗೆ ನೀಡಬೇಕಿತ್ತು. ಏನು ಮಾಡಲಿಕ್ಕಾಗುತ್ತದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ’ ಎಂದು ಮಾಡಾಳ್‌ ತಿಳಿಸಿದ್ದಾರೆ.

ಮೂರು ಬಾರಿ ಶಾಸಕರಾಗಿರುವ ಜಗಳೂರಿನ ಎಸ್‌.ವಿ. ರಾಮಚಂದ್ರ ಅವರು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದರು. ಸಮುದಾಯದ ಮೂಲಕ ಒತ್ತಡ ಹೇರುವ ಪ್ರಯತ್ನವನ್ನೂ ಮಾಡಿದ್ದರು.

‘ನಾವು ಐದು ಮಂದಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ ಮೇಲೆ ಒತ್ತಡ ಹಾಕಿದ್ದೆವು. ಸಚಿವ ಸ್ಥಾನ ಕೊಡಬೇಕಿರುವುದು ಧರ್ಮ ಆಗಿತ್ತು. ಈಗ ಕೊಟ್ಟಿಲ್ಲ. ಮುಂದೆಯಾದರು ಕೊಡಲಿ. ಈಗಿನ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇನೆ’ ಎಂದು ರಾಮಚಂದ್ರ ಹೇಳಿದ್ದಾರೆ.

ಮೊದಲ ಬಾರಿ ಶಾಸಕರಾಗಿರುವ ಮಾಯಕೊಂಡದ ಶಾಸಕ ಪ್ರೊ. ಲಿಂಗಣ್ಣ ಮಾತ್ರ ಯಾವುದೇ ರೀತಿ ಲಾಬಿ ಮಾಡಲು ಹೋಗಿರಲಿಲ್ಲ. ಯಾರಿಗಾದರೂ ಸಿಕ್ಕಿದರೆ ಸಾಕು ಎಂದು ಅವರು ಅಂದುಕೊಂಡಿದ್ದರು.

‘ಈಗ ಕೊಟ್ಟಿಲ್ಲ. ಆದರೆ, ಇನ್ನೂ ನಾಲ್ಕು ಸಚಿವ ಸ್ಥಾನಗಳು ತುಂಬಿಲ್ಲ. ಹಾಗಾಗಿ ಮುಂದೆ ಸಿಗಬಹುದು’ ಎಂದು ಲಿಂಗಣ್ಣ ಆಶಾಭಾವ ವ್ಯಕ್ತಪಡಿಸಿದ್ದಾರೆ.

2018ರಿಂದ ಇಲ್ಲಿಯವರೆಗೆ ಹೊರಗಿನವರೇ ಉಸ್ತುವಾರಿ ಸಚಿವರಾಗಿದ್ದರು. ಅದು ಈಗಲೂ ಮುಂದುವರಿದಿದೆ.

ಈ ಬಾರಿ ಸಮಾಧಾನ ಹೇಗೆ?

2019ರಲ್ಲಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಜಿಲ್ಲೆಗೆ ಸಚಿವ ಸ್ಥಾನ ಸಿಗದೇ ಇದ್ದರೂ ಸಮಾಧಾನ ಪಡಿಸಲು ಹಲವು ದಾರಿಗಳನ್ನು ಹುಡುಕಲಾಗಿತ್ತು.

ಎಂ.ಪಿ. ರೇಣುಕಾಚಾರ್ಯ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂದು ನೇಮಕ ಮಾಡಿ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿತ್ತು. ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಎಸ್‌.ವಿ. ರಾಮಚಂದ್ರ ಅವರಿಗೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಪ್ರೊ. ಲಿಂಗಣ್ಣ ಅವರನ್ನು ಬಾಬೂ ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಹೀಗೆ ಐವರು ಶಾಸಕರಲ್ಲಿ ನಾಲ್ವರಿಗೆ ವಿವಿಧ ಸ್ಥಾನಮಾನ ನೀಡಲಾಗಿತ್ತು.

ಈಗ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನಮಾನ ನೀಡಿ ಅಸಮಾಧಾನ ಏಳದಂತೆ ಮಾಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.