
ಹೊನ್ನಾಳಿ: ಕೂಲಿ ಕಾರ್ಮಿಕರ ಬದುಕಿಗೆ ಬಲತುಂಬಿದ್ದ ಮನರೇಗಾ ಯೋಜನೆಯನ್ನು ಕೈಬಿಟ್ಟ ಕೇಂದ್ರ ಸರ್ಕಾರ, ವಿಬಿ-ಜಿ ರಾಮ್ ಜಿ ಜಾರಿಗೆ ತಂದು ದುಡಿಯುವ ಕೈಗಳಿಗೆ ಕೆಲಸವಿಲ್ಲದಂತೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ತಾಲ್ಲೂಕಿನ ಎಚ್. ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಅಂಗನವಾಡಿ ಕೇಂದ್ರ ಕಟ್ಟಡದ ಉದ್ಘಾಟಿಸಿ ಮಾತನಾಡಿದರು.
‘ಮನರೇಗಾ ವಿಶ್ವದಲ್ಲಿಯೇ ಅದ್ಭುತ ಯೋಜನೆಯಾಗಿತ್ತು. 10 ವರ್ಷಗಳಿಂದ ಮೆಚ್ಚಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಯೋಜನೆಯನ್ನು ತೆಗಳುತ್ತಿದ್ದಾರೆ. ದೇಶದಲ್ಲಿ 13 ಕೋಟಿ ಕೂಲಿ ಕಾರ್ಮಿಕರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅವರ ಕೆಲಸಕ್ಕೆ ಕತ್ತರಿ ಹಾಕಿದೆ. ನೂತನ ಯೋಜನೆ ಮೂಲಕ ಕೆಲಸಗಾರರನ್ನು ಗುಲಾಮರನ್ನಾಗಿ ಮಾಡಲು ಕೇಂದ್ರ ಸರ್ಕಾರ ಹೊರಟಿದೆ’ ಎಂದು ದೂರಿದರು.
ಎಚ್. ಗೋಪಗೊಂಡನಹಳ್ಳಿ ಹಾಗೂ ಚಟ್ನಹಳ್ಳಿಯ ಗ್ರಾಮ ಪಂಚಾಯಿತಿಗಳಲ್ಲಿದ್ದ ಆರ್ಥಿಕ ಸಂಪನ್ಮೂಲದ ಜತೆಗೆ ಪಂಚಾಯಿತಿ ಸದಸ್ಯರ ಆರ್ಥಿಕ ನೆರವಿನಿಂದ ಅಂದಾಜು ತಲಾ ₹1.5 ಕೋಟಿ ವೆಚ್ಚದಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ.
‘ಎಚ್. ಗೋಪಗೊಂಡನಹಳ್ಳಿ ಹಾಗೂ ಚಟ್ನಹಳ್ಳಿ ಗ್ರಾಮಗಳಲ್ಲಿ ನಿರ್ಮಿಸಿರುವ ಗ್ರಾಮ ಸೌಧ ಜಿಲ್ಲೆಯಲ್ಲಿಯೇ ಅತ್ಯುತ್ತಮ ಕಟ್ಟಡಗಳಾಗಿವೆ. ಈ ಎರಡೂ ಗ್ರಾ.ಪಂ. ಕಟ್ಟಡಕ್ಕೆ ಸರ್ಕಾರದಿಂದ ತಲಾ ₹75 ಲಕ್ಷ ಅನುದಾನ ಬಿಡುಗಡೆ ಮಾಡಿಸಲು ತಾವು ಬದ್ಧ. ಕಟ್ಟಡ ನಿರ್ಮಾಣಕ್ಕೆ ತಗುಲಿರುವ ವೆಚ್ಚದ ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಕಳಿಸಿಕೊಡಬೇಕು’ ಎಂದು ಜಿ.ಪಂ. ಸಿಇಒ ಅವರಿಗೆ ಸೂಚಿಸಿದರು.
‘15ನೇ ಹಣಕಾಸು ಯೋಜನೆಯಲ್ಲಿ ತಾಲ್ಲೂಕಿಗೆ ಅನುದಾನ ಬಂದಿಲ್ಲ. ನೂತನ ಕಟ್ಟಡವನ್ನು ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮದ ಮುಖಂಡರು ಬಹಳ ಕಷ್ಟಪಟ್ಟು ಕಟ್ಟಿಸಿದ್ದಾರೆ. ಸಚಿವರು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಬೇಕು’ ಎಂದು ಶಾಸಕ ಡಿ.ಜಿ.ಶಾಂತನಗೌಡ ಮನವಿ ಮಾಡಿದರು.
ನ್ಯಾಮತಿ ತಾಲ್ಲೂಕಿನಲ್ಲಿರುವ ಸರ್ಕಾರಿ ಕಚೇರಿಗಳ ಕಟ್ಟಡಗಳಿಗೆ ಅನುದಾನ ನೀಡುವಂತೆ ಹಾಗೂ 47 ಗ್ರಾ.ಪಂ.ಗಳ ಖಾಲಿ ಹುದ್ದೆಗಳ ಭರ್ತಿ ಮಾಡುವಂತೆ ಕೋರಿ ಸಚಿವರಿಗೆ ಅವರು ಮನವಿ ಸಲ್ಲಿಸಿದರು.
ತಕ್ಷಣವೇ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಚುನಾವಣೆ ಘೋಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಅಬ್ದುಲ್ ಜಬ್ಬಾರ್, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿ ಸಮೀರ್ ಶುಕ್ಲಾ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ತಹಶೀಲ್ದಾರ್ ರಾಜೇಶಕುಮಾರ್, ತಾ.ಪಂ. ಇಒ ಡಿ.ಜಿ.ಅಶೋಕ್, ಮಾಜಿ ಶಾಸಕ ಡಿ.ಬಿ.ಗಂಗಪ್ಪ, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ರುದ್ರಯ್ಯ ಹಾಗೂ ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಭಾರತಿ ಹಾಗೂ ರಾಘವೇಂದ್ರ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.