ADVERTISEMENT

ನಶಿಸುತ್ತಿದೆ ಪ್ರೀತಿ, ಬಾಂಧವ್ಯ: ಮಾದಾರ ಚನ್ನಯ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:50 IST
Last Updated 4 ನವೆಂಬರ್ 2025, 7:50 IST
1ಇಪಿ : ಹೊನ್ನಾಳಿ ತಾ ಎಚ್.ಕಡದಕಟ್ಟೆ ಗ್ರಾಮದಲ್ಲಿ ಶ್ರೀ ಧರಿಲಿಂಗೇಶ್ವರ ನೂತನ ದೇವಾಲಯ ಪ್ರವೇಶೋತ್ಸವದ ಅಂಗವಾಗಿ ನಡೆದ ಧರ್ಮಸಭೆಯನ್ನು ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಉದ್ಘಾಟಿಸಿದರು. 
1ಇಪಿ : ಹೊನ್ನಾಳಿ ತಾ ಎಚ್.ಕಡದಕಟ್ಟೆ ಗ್ರಾಮದಲ್ಲಿ ಶ್ರೀ ಧರಿಲಿಂಗೇಶ್ವರ ನೂತನ ದೇವಾಲಯ ಪ್ರವೇಶೋತ್ಸವದ ಅಂಗವಾಗಿ ನಡೆದ ಧರ್ಮಸಭೆಯನ್ನು ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಉದ್ಘಾಟಿಸಿದರು.    

ಹೊನ್ನಾಳಿ: ‘ಆಧುನಿಕ ಜಗತ್ತಿನಲ್ಲಿ ಸುಖಭೋಗಗಳಿಗೆ ಆದ್ಯತೆ ಹೆಚ್ಚಿದ್ದರಿಂದ ಪ್ರೀತಿ, ಬಾಂಧವ್ಯ, ಸಾಮರಸ್ಯಗಳು ನಶಿಸಿ ಹೋಗುತ್ತಿವೆ’ ಎಂದು ಚಿತ್ರದುರ್ಗದ  ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಎಚ್. ಕಡದಕಟ್ಟೆಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಧರಿಲಿಂಗೇಶ್ವರ ದೇವಾಲಯ ಪ್ರವೇಶೋತ್ಸವ, ಶಿಲಾಮೂರ್ತಿ ಪ್ರತಿಷ್ಠಾಪನೆ, ಕಳಸಾ ರೋಹಣ ಅಂಗವಾಗಿ ನಡೆದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

‘ನಮ್ಮ ಧರ್ಮ ಭದ್ರಪಡಿಸಿಕೊಂಡು ಇತರೆ ಧರ್ಮಗಳನ್ನು ಗೌರವಿಸಬೇಕು. ಬಸವಣ್ಣ ಹೇಳಿದಂತೆ ನಾವು ಮೊದಲು ಕಾಯಕ ಪ್ರಧಾನ ಸಮಾಜ, ಸಮಾನತೆಯ ಹಾಗೂ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಿಕೊಂಡು ಬಾಳಬೇಕು’ ಎಂದು ಹೇಳಿದರು.

ADVERTISEMENT

‘ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಶಾಲೆಗೆ ಬಿಟ್ಟು ಬಂದಿದ್ದ ಮಕ್ಕಳೂ ದೇಶದೊಳಗೆ ಈಗ ಉದ್ಯೋಗ ಪಡೆದು ತಂದೆ– ತಾಯಿಗಳನ್ನು ಸಾಕುತ್ತಿದ್ದಾರೆ, ರೆಸಿಡೆನ್ಸಿ ಸ್ಕೂಲ್‍ಗಳಲ್ಲಿ ಬಿಟ್ಟು ಓದಿಸಿದ ಮಕ್ಕಳು, ವಿದೇಶದಲ್ಲಿ ಉದ್ಯೋಗ ಪಡೆದು ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟು ಫೋನ್ ಪೇ ಮಾಡುವ ಮೂಲಕ ದೂರ ಉಳಿಯುತ್ತಿದ್ದಾರೆ’ ಎಂದು ವಾಸ್ತವವನ್ನು ತಿಳಿಸಿ ಹೇಳಿದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ‘ಎಚ್. ಕಡದಕಟ್ಟೆ ಗ್ರಾಮ ಹೊನ್ನಾಳಿಗೆ ಹೊಂದಿಕೊಂಡಿದ್ದು ನಗರಸಭೆಯಾಗಿ ಮೇಲ್ದರ್ಜೆಗೇರುವ ಹೊನ್ನಾಳಿಗೆ ಸೇರ್ಪಡೆಯಾಗುವ ದಿನಗಳು ದೂರವಿಲ್ಲ. ದೇವಸ್ಥಾನ ಮತ್ತು ಸಮುದಾಯ ಭವನಗಳಿಗೆ ಅಂದಾಜು ₹ 10 ಕೋಟಿಯಷ್ಟು ಅನುದಾನ ನೀಡಿದ್ದೇನೆ ’ ಎಂದು ಹೇಳಿದರು.

ಬಿಜೆಪಿ ಮುಖಂಡ ಶಾಂತರಾಜ್ ಪಾಟೀಲ್ ಮಾತನಾಡಿ, ‘ಗ್ರಾಮೀಣ ಜನತೆ ದೇವಾಲಯ, ಮಠಗಳನ್ನು ನಂಬಿಕೊಂಡು ಪ್ರಾಚೀನ ಜೀವನಶೈಲಿಯನ್ನು ಅಳವಡಿಸಿಕೊಂಡಿರುವುದರಿಂದ ಅವರಲ್ಲಿ ಧಾರ್ಮಿಕ ಶ್ರೀಮಂತಿಕೆ ಇದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಡಿ.ಬಿ.ಗಂಗಪ್ಪ, ಶ್ರೀ ಧರಿಲಿಂಗೇಶ್ವರ ದೇವಸ್ಥಾನ ಕಮಿಟಿ ಗೌರವಾಧ್ಯಕ್ಷ ಬಿ.ಜಯದೇವಪ್ಪ ಮಾತನಾಡಿದರು. ಕಮಿಟಿಯ ಅಧ್ಯಕ್ಷ ಎಚ್.ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.

ಗಾಯಕ ಕಡದಕಟ್ಟೆ ತಿಮ್ಮಪ್ಪ ಅವರು ರಚಿಸಿದ ಧರಿಲಿಂಗೇಶ್ವರ ಹಾಗೂ ಬಸವೇಶ್ವರಸ್ವಾಮಿ ಕುರಿತ ಧ್ವನಿಸುರುಳಿ ಬಿಡುಗಡೆ ಮಾಡಿದರು. ಎಂ. ತಿಮ್ಮಪ್ಪ, ಸುರೇಶ್ ಹಾಗೂ ಬಸಪ್ಪ, ದಾನಪ್ಪ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.