ADVERTISEMENT

ದಾವಣಗೆರೆ: ಭಾವೈಕ್ಯದ ಸಂಕೇತ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:28 IST
Last Updated 8 ಜುಲೈ 2025, 5:28 IST
<div class="paragraphs"><p>ಹಳೇ ದಾವಣಗೆರೆಯ ಹೊಂಡದ ವೃತ್ತದಲ್ಲಿನ ಹಜ್ರತ್ ಸೈಯದ್ ರತನ್ ಷಾ (ಬುಡನ್) ವಲಿ ಚಿಸ್ತಿ ದರ್ಗಾ ಮುಂಭಾಗದಲ್ಲಿ ಮೊಹರಂ ಹಬ್ಬದ ಕೊನೆ ದಿನವಾದ ಸೋಮವಾರ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು </p><p></p></div>

ಹಳೇ ದಾವಣಗೆರೆಯ ಹೊಂಡದ ವೃತ್ತದಲ್ಲಿನ ಹಜ್ರತ್ ಸೈಯದ್ ರತನ್ ಷಾ (ಬುಡನ್) ವಲಿ ಚಿಸ್ತಿ ದರ್ಗಾ ಮುಂಭಾಗದಲ್ಲಿ ಮೊಹರಂ ಹಬ್ಬದ ಕೊನೆ ದಿನವಾದ ಸೋಮವಾರ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು

   

–ಪ್ರಜಾವಾಣಿ ಚಿತ್ರ:ಸತೀಶ್ ಬಡಿಗೇರ

ADVERTISEMENT

ದಾವಣಗೆರೆ: ನಗರದಲ್ಲಿ ಸೋಮವಾರ ಹಿಂದೂ– ಮುಸ್ಲಿಂ ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬ ಶ್ರದ್ಧಾ–ಭಕ್ತಿಯಿಂದ ನೆರವೇರಿತು. ದೇವರ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು, ಹರಕೆ ತೀರಿಸಿದರು.

ಇಲ್ಲಿನ ಹೊಂಡದ ವೃತ್ತದಲ್ಲಿರುವ ಹಜರತ್ ಸೈಯದ್ ರತನ್ ಷಾವಲಿ ದರ್ಗಾದಲ್ಲಿ ಸೋಮವಾರ ಸಂಜೆ ಸಾಮೂಹಿಕವಾಗಿ ಪಂಜಾಗಳ ಗಂಟು ಕಟ್ಟುವ ಮೂಲಕ ಮೊಹರಂ ಹಬ್ಬಕ್ಕೆ ತೆರೆಬಿದ್ದಿತು.

ಹಬ್ಬಕ್ಕೆ ವಾರದ ಹಿಂದೆಯೇ ಚಾಲನೆ ಸಿಕ್ಕಿತ್ತು. ಪೆಟ್ಟಿಗೆಯಲ್ಲಿದ್ದ ದೇವರುಗಳನ್ನು ಹೊರತೆಗೆದು ಪ್ರತಿಷ್ಠಾಪಿಸಲಾಗಿತ್ತು. 9ನೇ ದಿನವಾದ ಭಾನುವಾರ ರಾತ್ರಿ ಅಗ್ನಿಕುಂಡ ಹಾಕಿ ಅಲಾಯಿ ದೇವರನ್ನು (ಪಂಜಾ) ಹೊತ್ತವರು ಕೆಂಡವನ್ನು ಹಾಯ್ದರು. 10ನೇ ದಿನವಾದ ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಅಲಾಯಿ ದೇವರುಗಳ ಮೆರವಣಿಗೆ ನಡೆಯಿತು.

ಬಾಷಾನಗರ, ಕೆಟಿಜೆ ನಗರ ಸೇರಿ ವಿವಿಧೆಡೆ ಪಂಜಾ ಸ್ಥಾಪನೆ ಮಾಡಲಾಗಿತ್ತು. ಧಾರ್ಮಿಕ ಗುರುಗಳಿಂದ ಪ್ರವಚನಗಳು ನಡೆದವು. ಹೊಂಡದ ವೃತ್ತ, ಶಿವಾಜಿನಗರದ ಪ್ರಮುಖ ರಸ್ತೆಗಳಲ್ಲಿ ಅಲಾಯಿ ದೇವರ ಮೆರವಣಿಗೆ ಆಗಮಿಸಿದಾಗ ಹರಕೆ ಹೊತ್ತ ಭಕ್ತರು ಕರಿಮೆಣಸು, ಮಂಡಕ್ಕಿ, ವೀಳ್ಯೆದೆಲೆ ಅರ್ಪಿಸಿದರು. ಜಾತಿ, ಧರ್ಮದ ಬೇಧ ಮರೆತು ಹಬ್ಬದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮೊಹರಂ ಹಬ್ಬಕ್ಕೆ ಸಂಬಂಧಿಸಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗೊಂದಲ ಉಂಟಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಭಾನುವಾರವೇ ಕಡೆಯ ದಿನ ಆಚರಿಸಲಾಗಿತ್ತು. ತಂಜೀಮ್ ಉಲೇಮಾ-ಎ-ಸುನ್ನತ್ ಸಮಿತಿ ಮಸೀದಿಗಳಿಗೆ ನೀಡಿದ ಸೂಚನೆ ಯಂತೆ ಹಬ್ಬವನ್ನು ಭಾನುವಾರ ಆಚರಿಸುವುದಾಗಿ ತಿಳಿಸಿತ್ತು. ಆದರೆ, ಮೊಹರಂ ಆಚರಣೆ ಸಮಿತಿ ಸೋಮವಾರ ಹಬ್ಬಕ್ಕೆ ತೀರ್ಮಾನಿಸಿತ್ತು.

‘ಮೊಹರಂ ಕಡೆಯ ದಿನಕ್ಕೆ ಪ್ರಸಕ್ತ ವರ್ಷ ಕೆಲ ಗೊಂದಲ ಸೃಷ್ಟಿಯಾಗಿತ್ತು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಆಗದಂತೆ ಸಮಿತಿ ಕಾರ್ಯಪ್ರವೃತ್ತವಾಗಲಿದೆ’ ಎಂದು ಮೊಹರಂ ಸಮಿತಿಯ ಕಾರ್ಯದರ್ಶಿ ತೌಫಿಕ್ ಅಹಮ್ಮದ್ ತಿಳಿಸಿದರು.

ನ್ಯಾಮತಿಯಲ್ಲಿ ಸಂಭ್ರಮ

ನ್ಯಾಮತಿ: ತಾಲ್ಲೂಕಿನ ಕುರುವ ಗ್ರಾಮದಲ್ಲಿ ಸೋಮವಾರ ಮೊಹರಂ ಕಡೆಯ ದಿನವನ್ನು ಹಿಂದೂ– ಮುಸ್ಲಿಂ ಸಮುದಾಯದವರು ಒಟ್ಟಾಗಿ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದರು.

ಮುಂಜಾನೆ ಪಂಜಾಕ್ಕೆ ಪೂಜೆ ಸಲ್ಲಿಸಲಾಯಿತು. ಮೊಹರಂ ನಿಮಿತ್ತ ನಿರ್ಮಿಸಿದ್ದ ಅಗ್ನಿಕುಂಡದಲ್ಲಿ ಹಿಂದೂ– ಮುಸ್ಲಿಂ ಸಮುದಾಯದವರು ಹಾದು ಹರಕೆ ತೀರಿಸಿದರು. ಗ್ರಾಮದ ಮಹಿಳೆಯರು ಒಳಗೊಂಡಂತೆ ಸಾರ್ವಜನಿಕರು ಕೆಂಡದ ಬಳಿ ನೆರೆದಿದ್ದರು. ಪಂಜಾಕ್ಕೆ ಎಲ್ಲರೂ ಸಕ್ಕರೆ, ಮೆಣಸು, ಮಂಡಕ್ಕಿ ಅರ್ಪಿಸಿ ಭಕ್ತಿ ಸಮರ್ಪಿಸಿದರು.

‘ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಎರಡೂ ಧರ್ಮದವರು ಸೌಹಾರ್ದಯುತವಾಗಿ ಮೊಹರಂ ಆಚರಿಸಿಕೊಂಡು ಬರುತ್ತಿದ್ದೇವೆ’ ಎಂದು ಗ್ರಾಮದ ಹಿರಿಯರಾದ ಸುರೇಶ ನವಲೆ, ಪೀರಾಸಾಬ್, ಜಮಾಲ್‌ಸಾಬ್, ಟಿ. ಮಂಜಪ್ಪ, ಟಿ. ಶೇಖರಪ್ಪ, ಅಶೋಕ ಭೋವಿ, ಬಿ.ಮಹೇಶಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.