ಫಲವನಹಳ್ಳಿ (ನ್ಯಾಮತಿ): ತಾಲ್ಲೂಕಿನ ಫಲವನಹಳ್ಳಿಯಲ್ಲಿ ಮುಸ್ಲಿಂ ಸಮುದಾಯದವರು ಇಲ್ಲ. ಆದರೂ, ಹಿಂದೂಗಳೇ ಸೇರಿ ಭಾನುವಾರ ಮೊಹರಂ ಆಚರಿಸಿದರು. ನ್ಯಾಮತಿಯಿಂದ ಬಂದಿದ್ದ ಮುಸ್ಲಿಂ ಕುಟುಂಬದರು ಪೂಜೆ, ಸಂಪ್ರದಾಯ ನಡೆಸಿಕೊಟ್ಟರು.
ಗ್ರಾಮದ ಪ್ರತಿಯೊಂದು ಮನೆಯಿಂದ ಕಟ್ಟಿಗೆ ತುಂಡನ್ನು ತಂದು ಗುಡ್ಡೆ ಹಾಕಿ ಬೆಂಕಿ ಕುಂಡ ನಿರ್ಮಿಸಿದರು. ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರೂ ಭಕ್ತಿಯಿಂದ ಕೆಂಡ ತುಳಿದರು. ಆ ನಂತರ ಗ್ರಾಮದಲ್ಲಿ ಆಲಾಬಿ ದೇವರ ಮೆರವಣಿಗೆ ನಡೆಯಿತು.
ಆಲಾಬಿ ದೇವರಿಗೆ ಸಕ್ಕರೆ, ಮೆಣಸಿನಕಾಳು, ಊದುಬತ್ತಿ, ಕವಡೆಲೋಬಾನ, ಕಾಣಿಕೆ ಅರ್ಪಿಸಲಾಯಿತು. ಸಂಜೆ ಪಂಜಾಗಳನ್ನು ಮೆರವಣಿಗೆಯಲ್ಲಿ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಶುದ್ಧೀಕರಿಸಿ ತರಲಾಯಿತು.
ಮುಸ್ಲಿಂ ಸಂಪ್ರದಾಯದಂತೆ ಗೋಧಿಹಿಟ್ಟಿನಲ್ಲಿ ತಯಾರಿಸಿದ ಚೌಹಂಗಿಯನ್ನು ಪ್ರಸಾದವಾಗಿ ಹಂಚಲಾಯಿತು ಎಂದು ಗ್ರಾಮಸ್ಥರಾದ ಬಿ.ವೈ.ರವಿಕುಮಾರ, ಗಿರಿಯಪ್ಪ ಮಾಸ್ಟರ್, ಮಲ್ಲಪ್ಪ ಮಾಸ್ಟರ್, ಜಿ.ಎಚ್.ಹಳದಪ್ಪ, ಚಿರಗನಹಳ್ಳಿ ಬಸವರಾಜಪ್ಪ, ಎಂಪಿ. ಬಸವರಾಜಪ್ಪ, ಗೌಡ್ರಸಿದ್ದಪ್ಪ, ಹಾಲನಾಯ್ಕ, ಗೌಡ್ರುರಂಗಪ್ಪ, ಎ.ಕೆ.ಕಾಂತರಾಜ, ಮೇದೂರು ರವಿ, ಲೋಕೇಶನಾಯ್ಕ, ಮಂಜಪ್ಪ ಮಾಹಿತಿ ನೀಡಿದರು.
‘ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿವರ್ಷ ಮೊಹರಂ ಆಚರಣೆ ನಡೆಸಿಕೊಡುತ್ತಿದ್ದೆವು. ಕೋವಿಡ್ ಸಮಯದಲ್ಲಿ ಅನಿವಾರ್ಯ ಕಾರಣಗಳಿಂದ ಮೊಹರಂ ಆಚರಣೆ ಮಾಡಿರಲಿಲ್ಲ. ಈ ವರ್ಷ ಮತ್ತೆ ಮೊಹರಂ ಆಚರಿಸಲಾಯಿತು. ಮುಂದಿನ ದಿನಗಳಲ್ಲೂ ಆಚರಣೆ ಮಾಡುತ್ತೇವೆ’ ಎಂದು ಮೊಹರಂ ಆಚರಣೆಯ ನೇತೃತ್ವ ವಹಿಸಿದ್ದ ನ್ಯಾಮತಿಯ ದಾದಾಪೀರ್ ಸಾಬ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.