ADVERTISEMENT

ಮಕ್ಕಳ ಚಟುವಟಿಕೆಯತ್ತ ನಿಗಾ ವಹಿಸಿ

ಬಾಲಕಾರ್ಮಿಕ, ಕಿಶೋರ ಕಾರ್ಮಿಕ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 2:59 IST
Last Updated 8 ಡಿಸೆಂಬರ್ 2019, 2:59 IST
ದಾವಣಗೆರೆಯ ಮಂಡಕ್ಕಿ ಭಟ್ಟಿ ಲೇಔಟ್‍ನ ಮಿಲ್ಲತ್ ಮೈದಾನದಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆಯಿಂದ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಉದ್ಘಾಟಿಸಿದರು
ದಾವಣಗೆರೆಯ ಮಂಡಕ್ಕಿ ಭಟ್ಟಿ ಲೇಔಟ್‍ನ ಮಿಲ್ಲತ್ ಮೈದಾನದಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆಯಿಂದ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಉದ್ಘಾಟಿಸಿದರು   

ದಾವಣಗೆರೆ:ಪ್ರಸ್ತುತ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ತಿಳಿಯದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದರ ಬಗ್ಗೆ ಪೋಷಕರು ಗಮನ ಹರಿಸಬೇಕುಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆಯಿಂದ ಶನಿವಾರ ಮಂಡಕ್ಕಿ ಭಟ್ಟಿ ಲೇಔಟ್‍ನ ಮಿಲ್ಲತ್ ಮೈದಾನದಲ್ಲಿ ಏರ್ಪಡಿಸಿದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ 1986 ಹಾಗೂ 2016ರ ತಿದ್ದುಪಡಿಯ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಂಡಕ್ಕಿಭಟ್ಟಿ ಭಾಗದ ಯುವಕರು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ADVERTISEMENT

ಮಕ್ಕಳನ್ನು ಮಕ್ಕಳಾಗಿ ಇರಲು ಬಿಡಿ. ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ಕಳುಹಿಸುವ ಬದಲು ಶಾಲೆಗೆ ಕಳುಹಿಸಿ. ಮಕ್ಕಳು ಬೌದ್ಧಿಕವಾಗಿ, ಆರೋಗ್ಯಕರವಾಗಿ ಬೆಳೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಶಿಕ್ಷಣ ಅವಶ್ಯ. ಅವರ ಹಕ್ಕುಗಳ ಬಗ್ಗೆ ಅವರಿಗೆ ತಿಳಿಸಿಕೊಡಿ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ‘ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಮಕ್ಕಳಿಗಾಗಿ ಸರ್ಕಾರ ನೀಡಿರುವ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ನೀಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ‘ಹೆಣ್ಣು ಮನಸ್ಸು ಮಾಡಿದರೆ ಏನ್ನಾದರೂ ಸರಿಪಡಿಸಬಹುದು. ಮಕ್ಕಳ ಸಾಧನೆಯಲ್ಲಿ ತಾಯಿಯ ಪಾತ್ರ ಮುಖ್ಯ. ಹೆಣ್ಣು, ಗಂಡು ಎಂಬ ಭೇದ ತೊರದೇ ಸಮಾನವಾಗಿ ಬೆಳೆಸಿ. ಈ ಭಾಗದಲ್ಲಿ ಬಾಲ್ಯವಿವಾಹಗಳು ಇಂದಿಗೂ ನಡೆಯುತ್ತಿವೆ ಎಂಬ ಸುದ್ದಿ ಇದೆ. ಹೆಣ್ಣು ಮಕ್ಕಳನ್ನು ಭಾರವೆಂದು ಭಾವಿಸಬೇಡಿ. ಅವರಿಗೆ ಸಮಾನ ಶಿಕ್ಷಣ ನೀಡಿ’ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾದ್‌ ಮಾತನಾಡಿದರು.

ದಾವಣಗೆರೆ ಮಂಡಕ್ಕಿ ಭಟ್ಟಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಮಹಮದ್ ಆರ್ಷದ್ (ಮುನ್ನಾ) ಅಧ್ಯಕ್ಷತೆ ವಹಿಸಿದ್ದರು.ಡಿಡಿಪಿಐ ಪರಮೇಶ್ವರಪ್ಪ, ವಾರ್ತಾಧಿಕಾರಿ ಅಶೋಕ್‍ಕುಮಾರ್ ಡಿ., ನಿವೃತ್ತ ಪೊಲೀಸ್ ಅಧಿಕಾರಿ ರವಿ ನಾರಾಯಣ, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಉಷಾಕುಮಾರಿ, ಮಂಡಕ್ಕಿ ಭಟ್ಟಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಸಲಹಾ ಸಮಿತಿ ಅಧ್ಯಕ್ಷ ಎ.ಬಿ. ಹಬೀಬುಲ್ಲಾ ಸಾಬ್, ಕಾರ್ಯದರ್ಶಿ ಎಂ.ಆರ್. ಸಿದ್ದಿಕ್‌, ಅವಲಕ್ಕಿ ಭಟ್ಟಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಬಿ.ಆರ್. ಬಶೀರ್ ಸಾಬ್, ಸಂಘದ ಖಾಲಿದ್ ಖಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.