ADVERTISEMENT

ದಾವಣಗೆರೆ | ತಾಯಂದಿರಲ್ಲಿ ಕ್ಷೀಣಿಸಿದ ಅಪೌಷ್ಟಿಕತೆ: ಸಂಸದ ಸಿದ್ದೇಶ್ವರ್ ಆತಂಕ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 5:28 IST
Last Updated 27 ಸೆಪ್ಟೆಂಬರ್ 2023, 5:28 IST
ಹರಿಹರದಲ್ಲಿ ಮಂಗಳವಾರ ನಡೆದ ಪೋಷಣ್ ಮಾಸ– 2023ರ ಕಾರ್ಯಕ್ರಮವನ್ನು ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು
ಹರಿಹರದಲ್ಲಿ ಮಂಗಳವಾರ ನಡೆದ ಪೋಷಣ್ ಮಾಸ– 2023ರ ಕಾರ್ಯಕ್ರಮವನ್ನು ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು    

ಹರಿಹರ: ‘ಕೇಂದ್ರ ಸರ್ಕಾರ ಪುರಸ್ಕೃತ ಪೋಷಣ್ ಅಭಿಯಾನದಿಂದ ಮಕ್ಕಳು, ಮಹಿಳೆಯರ ಅಪೌಷ್ಟಿಕತೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಕೇಂದ್ರ ಸಂವಹನ ಇಲಾಖೆ, ಶಿಶು ಅಭಿವೃದ್ದಿ ಯೋಜನಾ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಗರದ ಗುರುಭವನದಲ್ಲಿ ಆಯೋಜಿಸಿದ್ದ ಪೋಷಣ ಮಾಸ– 2023 ಮತ್ತು ಪ್ರಧಾನ ಮಂತ್ರಿಯವರ ದೂರದರ್ಶಿತ್ವ– 2047 ಕುರಿತ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆಯ ಪ್ರಮಾಣ ಇಳಿಮುಖವಾಗಲು ಪೋಷಣ್ ಅಭಿಯಾನ ಯೋಜನೆಯ ಕೊಡುಗೆ ಅಪಾರವಾಗಿದೆ. ಪೋಷಣ್ ಅಭಿಯಾನದ ಬಗ್ಗೆ ಅಧಿಕಾರಿಗಳು ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಮಹಿಳೆಯರು ಯೋಜನೆಯಡಿ ಬರುವ ಪ್ರತಿಯೊಂದು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ADVERTISEMENT

ಕೇಂದ್ರ ಸರ್ಕಾರದ ಯೋಜನೆಗಳಾದ ಉಜ್ವಲ ಯೋಜನೆಯಡಿ ಜಿಲ್ಲೆಯ 1.29 ಲಕ್ಷ ಜನರು ಸೌಲಭ್ಯ ಪಡೆದಿದ್ದರೆ, ಕಿಸಾನ್ ಸನ್ಮಾನ ಯೋಜನೆಯಡಿ 1.55 ಲಕ್ಷ ರೈತರಿಗೆ ₹ 442 ಕೋಟಿ ಸಹಾಯಧನ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಬಿ.ಪಿ.ಹರೀಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಪ್ರತಿನಿಧಿಗಳು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗಿತ್ತು. 

ಪುಟ್ಟ ಮಕ್ಕಳು ವಿವಿಧ ತರಕಾರಿಗಳ ವೇಷಧಾರಿಗಳಾಗಿ ಸಮಾರಂಭದಲ್ಲಿ ಗಮನ ಸೆಳೆದರು. ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್, ಸದಸ್ಯೆ ಅಶ್ವಿನಿ ಕೃಷ್ಣ, ಬಿಇಒ ಎಂ.ಹನುಮಂತಪ್ಪ, ಕೇಂದ್ರ ಸಂವಹನ ಇಲಾಖೆಯ ಸಿ.ಎಚ್.ಅಕ್ಷತಾ, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.