ADVERTISEMENT

​ದಾವಣಗೆರೆ| ಕಾಂಗ್ರೆಸ್ ಸಮಾವೇಶಕ್ಕೆ ಸರ್ಕಾರದ ಹಣ ದುರ್ಬಳಕೆ: ಎಂ.ಪಿ.ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 3:11 IST
Last Updated 18 ಫೆಬ್ರುವರಿ 2026, 3:11 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

​ದಾವಣಗೆರೆ: ‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾವಿರ ದಿನ ಪೂರೈಸಿದ್ದರೂ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಸರ್ಕಾರದ ಅನುದಾನದಲ್ಲಿ ಕಾಂಗ್ರೆಸ್‌ ಪಕ್ಷದ ಸಮಾವೇಶ ನಡೆಸಲಾಗಿದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದೂರಿದರು. 

‘​ಸರ್ಕಾರದ 1,000 ದಿನಗಳ ಸಂಭ್ರಮಾಚರಣೆಯು ರಾಜ್ಯದ ಜನರ ಪಾಲಿಗೆ ಕರಾಳ ದಿನವಾಗಿದೆ. ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಜನರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಸಮಾವೇಶಕ್ಕೆ ಜನರನ್ನು ಕರೆತರಲು ಸಾವಿರಾರು ಸರ್ಕಾರಿ ಬಸ್‌ಗಳನ್ನು ಬಳಸಿಕೊಳ್ಳಲಾಗಿದೆ. ಹೆಚ್ಚಿನ ಬಸ್‌ಗಳ ಜನರಿಲ್ಲದೇ ಖಾಲಿ ಸಂಚರಿಸಿವೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

‘ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡಬೇಕಾದ ₹5,000 ಕೋಟಿ ಮೊತ್ತವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಗೃಹಜ್ಯೋತಿ ಹೆಸರಲ್ಲಿ ಉಚಿತ ವಿದ್ಯುತ್ ಎಂದು ಹೇಳುತ್ತಿದೆ. ಆದರೆ, ವಿದ್ಯುತ್ ದರ ಏರಿಸುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ’ ಎಂದರು. 

ADVERTISEMENT

‘ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಹಣ ದುರುಪಯೋಗವಾಗಿದೆ. ಸರ್ಕಾರದ ಭ್ರಷ್ಟಾಚಾರಕ್ಕೆ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಮುಖ್ಯಮಂತ್ರಿ ಕುಟುಂಬ ಪಡೆದಿದ್ದ 14 ನಿವೇಶನಗಳನ್ನು ಬಿಜೆಪಿ ಹೋರಾಟಕ್ಕೆ ಮಣಿದು ವಾಪಸ್ ಮರಳಿಸಿದೆ’ ಎಂದು ಆರೋಪಿಸಿದರು. 

‘ಗುತ್ತಿಗೆದಾರರಿಗೆ ನೀಡಬೇಕಾದ ₹ 40,000 ಕೋಟಿ ಮೊತ್ತವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಆಡಳಿತದಲ್ಲಿ ಶೇ 60 ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ’ ಎಂದು ಆರೋಪಿಸಿದರು. 

ಬಿಜೆಪಿ ಮುಖಂಡರಾದ ಸತೀಶ್ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳು, ಚಂದ್ರಶೇಖರ್ ಪೂಜಾರ್, ಜೆ.ಕೆ.ಸುರೇಶ್, ತಾರೇಶ್ವರ ನಾಯ್ಕ, ಸಿದ್ದಲಿಂಗಪ್ಪ, ಅನಿಲ್ ಕುಂದೂರು, ವಿಶ್ವಾಸ್, ಪ್ರವೀಣ ಜಾಧವ, ಪಂಜು ಪೈಲ್ವಾನ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.