ADVERTISEMENT

‘ಎಂಎಸ್‌ಪಿ; ನೋಂದಣಿಗೆ ಮಿತಿ ಇಲ್ಲ’: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 4:25 IST
Last Updated 13 ನವೆಂಬರ್ 2025, 4:25 IST

ದಾವಣಗೆರೆ: ‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಮುಂಗಾರು ಋತುವಿನ ಕೃಷಿ ಉತ್ಪನ್ನಗಳನ್ನು ಖರೀದಿಸಲು ಜಿಲ್ಲೆಯಾದ್ಯಂತ 5 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರೈತ ಮುಖಂಡರೊಂದಿಗೆ ನಡೆದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. 

‘ಬೆಂಬಲ ಬೆಲೆಯಲ್ಲಿ ರೈತರಿಂದ ಭತ್ತ ಮತ್ತು ರಾಗಿ ಖರೀದಿಗೆ ನೋಂದಣಿ ದಿನಾಂಕವನ್ನು ಡಿಸೆಂಬರ್‌ ವರೆಗೆ ಮುಂದೂಡಲಾಗಿದೆ. ರೈತರು ಭತ್ತವನ್ನು ಎಷ್ಟು ಕ್ವಿಂಟಲ್ ಬೇಕಾದರೂ ಖರೀದಿ ಕೇಂದ್ರಕ್ಕೆ ನೀಡಲು ನೋಂದಣಿ ಮಾಡಿಸಬಹುದು. ರೈತರು ನೋಂದಣಿ ಮಾಡಿಸಿದ ಅಷ್ಟೂ ಭತ್ತವನ್ನು ಖರೀದಿ ಮಾಡುತ್ತೇವೆ. ತಾಂತ್ರಿಕ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದರು. 

ADVERTISEMENT

‘ಕ್ವಿಂಟಲ್ ರಾಗಿಗೆ ₹ 4,886, ಸಾಮಾನ್ಯ ಭತ್ತಕ್ಕೆ ₹2,369, ಗ್ರೇಡ್-ಎ ಭತ್ತಕ್ಕೆ ₹2,389 ನಿಗದಿಪಡಿಸಲಾಗಿದೆ. ಇಲ್ಲಿಯವರೆಗೆ ಭತ್ತಕ್ಕೆ 18 ಜನ ನೋಂದಣಿ ಮಾಡಿಸಿದ್ದು, ರಾಗಿಗೆ 1,800 ಜನ ನೋಂದಣಿ ಮಾಡಿಸಿದ್ದಾರೆ’ ಎಂದು ತಿಳಿಸಿದರು. 

‘ತೂಕದ ಅಳತೆಯಲ್ಲಿ ವ್ಯತ್ಯಾಸ ಕಂಡುಬಂದರೆ, ಕ್ರಮ ಕೈಗೊಳ್ಳಲಾಗುವುದು. ರೈತರ ಮನವಿಯಂತೆ ಆನ್‌ಲೈನ್‌ ಫ್ರೂಟ್ ತಂತ್ರಾಂಶದಲ್ಲಿ ನೇರವಾಗಿ ನೋಂದಣಿ ಮಾಡಿಸಲು ಪಾಸ್‌ಬುಕ್ ತೆಗೆದುಕೊಳ್ಳಬಾರದು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಹರಿಹರದಲ್ಲಿ ಇ-ಟೆಂಡರ್ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರಾದ ಮಧುಸೂದನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್, ಬೆಸ್ಕಾಂನ ಪ್ರವೀಣ, ರೈತ ಮುಖಂಡರಾದ ನಾಗರಾಜ, ತೇಜಸ್ವಿ ಪಟೇಲ್, ಹುಚ್ಚವ್ವನಹಳ್ಳಿ ಮಂಜುನಾಥ್, ಈರಣ್ಣ, ಮಂಡಲೂರು ವಿಶ್ವನಾಥ, ಹಳ್ಳೂರು ನಾಗರಾಜ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.