ADVERTISEMENT

ದಾವಣಗೆರೆ: ತ್ಯಾಜ್ಯ ಸುರಿದು ಕಟ್ಟಿದ ದಂಡ ₹10.77 ಲಕ್ಷ!

2024ರಲ್ಲಿ ಒಟ್ಟು 297 ಪ್ರಕರಣ; ಮಹಾನಗರ ಪಾಲಿಕೆಯಿಂದ ದಂಡಾಸ್ತ್ರದ ಪ್ರಯೋಗ

ರಾಮಮೂರ್ತಿ ಪಿ.
Published 4 ಜನವರಿ 2025, 7:15 IST
Last Updated 4 ಜನವರಿ 2025, 7:15 IST
ದಾವಣಗೆರೆಯಲ್ಲಿ ಹಸಿ ಮತ್ತು ಒಣ ಕಸವನ್ನು ಸಮರ್ಪಕವಾಗಿ ವಿಂಗಡಿಸದ ಬೇಕರಿಯೊಂದರ ಮಾಲೀಕರಿಗೆ ಪಾಲಿಕೆಯ ಆರೋಗ್ಯ ನಿರೀಕ್ಷಕರು ದಂಡ ವಿಧಿಸಿದರು
ದಾವಣಗೆರೆಯಲ್ಲಿ ಹಸಿ ಮತ್ತು ಒಣ ಕಸವನ್ನು ಸಮರ್ಪಕವಾಗಿ ವಿಂಗಡಿಸದ ಬೇಕರಿಯೊಂದರ ಮಾಲೀಕರಿಗೆ ಪಾಲಿಕೆಯ ಆರೋಗ್ಯ ನಿರೀಕ್ಷಕರು ದಂಡ ವಿಧಿಸಿದರು   

ದಾವಣಗೆರೆ: ಎಲ್ಲೆಂದರಲ್ಲಿ ಘನ ತ್ಯಾ‌ಜ್ಯ ಎಸೆಯುವುದು, ಕಸಕ್ಕೆ ಬೆಂಕಿ ಹಚ್ಚುವುದು ಹಾಗೂ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡದಿರುವುದೂ ಸೇರಿದಂತೆ ತ್ಯಾಜ್ಯ ಸಂಬಂಧಿತ ನಿಯಮಗಳನ್ನು ಉಲ್ಲಂಘಿಸುವವರಿಂದ ಮಹಾನಗರ ಪಾಲಿಕೆಯು 1 ವರ್ಷದ ಅವಧಿಯಲ್ಲಿ ₹10,77,200 ದಂಡ ಸಂಗ್ರಹಿಸಿದೆ.

2024ರ ಜನವರಿಯಿಂದ ಡಿಸೆಂಬರ್‌ ವರೆಗೆ ಪಾಲಿಕೆಯ ಅಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ಒಟ್ಟು 297 ಪ್ರಕರಣಗಳನ್ನು ದಾಖಲಿಸಿಕೊಂಡು ತ್ಯಾಜ್ಯ ಬಿಸಾಡುವವರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. 

ರಸ್ತೆ ಬದಿಗಳಲ್ಲಿ, ವೃತ್ತಗಳಲ್ಲಿ, ಖಾಲಿ ಜಾಗಗಳಲ್ಲಿ ತ್ಯಾಜ್ಯ ಬಿಸಾಡುವವರು, ಎಲ್ಲೆಂದರದಲ್ಲಿ ಕಸಕ್ಕೆ ಬೆಂಕಿ ಹಚ್ಚುವವರು, ಕಟ್ಟಡದ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಮಾಡದಿರುವವರು, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡದಿರುವವರ ವಿರುದ್ಧ ಆರೋಗ್ಯ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ದಂಡ ಸಂಗ್ರಹಿಸುತ್ತಿದ್ದಾರೆ.

ADVERTISEMENT

‘ಬಹುತೇಕ ಬಡಾವಣೆಗಳಲ್ಲಿ ನಿತ್ಯವೂ ಮನೆಗಳ ಬಳಿಯೇ ಪಾಲಿಕೆಯ ವಾಹನಗಳು ಕಸ ಸಂಗ್ರಹಿಸಲು ತೆರಳುತ್ತಿವೆ. ಆದರೂ, ಕೆಲವರು ತ್ಯಾಜ್ಯವನ್ನು ವಾಹನಗಳಿಗೆ ನೀಡುವುದಿಲ್ಲ. ಬದಲಾಗಿ ರಾತ್ರಿ ಇಲ್ಲವೇ ಮುಂಜಾನೆ ಎಲ್ಲೆಂದರಲ್ಲಿ ಸುರಿಯುತ್ತಾರೆ. ಇದರಿಂದ ನಗರದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ. ಇದನ್ನು ತಡೆಯಲು ಸಾರ್ವಜನಿಕರಲ್ಲಿ ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡವನ್ನೂ ವಿಧಿಸಲಾಗುತ್ತಿದೆ’ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಗಳು.

ಪ್ರಕರಣಗಳ ಸಂಖ್ಯೆ ಇಳಿಕೆ:

ಪಾಲಿಕೆಯಿಂದ ದಂಡದ ಪ್ರಯೋಗ ಹೆಚ್ಚುತ್ತಲೇ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರ ಪ್ರಮಾಣ ಇಳಿಮುಖವಾಗಿದೆ. ಜನವರಿಯಲ್ಲಿ 446 ಪ್ರಕರಣ, ಫ್ರೆಬ್ರುವರಿ– 531, ಏಪ್ರಿಲ್‌– 507, ಮೇ– 456, ಜೂನ್‌– 531, ಜುಲೈ– 561 ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ.

ಆ ಬಳಿಕ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ದಂಡ ವಿಧಿಸಿದ ಪ್ರಕರಣಗಳ ಸಂಖ್ಯೆ 300ರ ಗಡಿ ದಾಟಿಲ್ಲ. ಮಾರ್ಚ್‌ನಲ್ಲಿ ಅತೀ ಕಡಿಮೆ 209 ಪ್ರಕರಣ (₹46,700 ದಂಡ) ಹಾಗೂ ಆಗಸ್ಟ್‌ನಲ್ಲಿ ಅತಿ ಹೆಚ್ಚು 661 ಪ್ರಕರಣಗಳು (₹1,42,800 ದಂಡ) ಕಂಡು ಬಂದಿವೆ. 2025ರ ಜ.3ರ ವರೆಗೆ 10 ಪ್ರಕರಣಗಳಲ್ಲಿ ₹4,200 ದಂಡ ಸಂಗ್ರಹಿಸಲಾಗಿದೆ.

ಸಿ.ಟಿ.ಟಿವಿ ಕಣ್ಗಾವಲು:

ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ತಪ್ಪಿಸಲೆಂದೇ ಪಾಲಿಕೆಯು ಪ್ರಮುಖ ಸ್ಥಳಗಳಲ್ಲಿ 13 ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಜೊತೆಗೆ ನಗರದಲ್ಲಿ ಸ್ಮಾರ್ಟ್‌ಸಿಟಿಯಿಂದ ಅಳವಡಿಸಿರುವ ಸಿ.ಸಿ. ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗುತ್ತಿರುವ ದೃಶ್ಯಾವಳಿಯ ನೆರವನ್ನೂ ಪಡೆಯುತ್ತಿದೆ. ರಾತ್ರಿ ವೇಳೆ ಹೆಚ್ಚು ತ್ಯಾಜ್ಯ ಸುರಿಯುವ ಸ್ಥಳಗಳಲ್ಲಿ ಪಾಲಿಕೆಯ ಸೂಪರ್‌ವೈಸರ್‌ಗಳು ಕಾವಲು ಕಾಯುವ ಕೆಲಸವನ್ನೂ ಮಾಡುತ್ತಿದ್ದಾರೆ.

ತ್ಯಾಜ್ಯದ ವಿಚಾರದಲ್ಲಿ ನಿಯಮ ಉಲ್ಲಂಘಿಸುವವರು ‘ಕ್ಯಾಶ್‌ ಇಲ್ಲ’, ‘ಎಟಿಎಂ ಕಾರ್ಡ್‌ ಇಲ್ಲ’ ಎಂದೆಲ್ಲ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವಾಗಿದೆ. 45 ವಾರ್ಡ್‌ಗಳ ವ್ಯಾಪ್ತಿಯಲ್ಲಿ 19 ಜನ ಆರೋಗ್ಯ ನಿರೀಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಆರೋಗ್ಯ ನಿರೀಕ್ಷಕರು 2–3 ವಾರ್ಡ್‌ಗಳ ಉಸ್ತುವಾರಿಯ ಹೊಣೆ ಹೊತ್ತಿದ್ದಾರೆ. ಎಲ್ಲರ ಬಳಿಯೂ ಪಿಒಎಸ್‌ (ಪಾಯಿಂಟ್ ಆಫ್ ಸೇಲ್‌) ಯಂತ್ರಗಳಿವೆ. ನಗದು, ಎಟಿಎಂ ಕಾರ್ಡ್‌ ಇಲ್ಲವೇ ಯುಪಿಐ (ಪೋನ್‌ಪೇ, ಗೂಗಲ್‌ಪೇ ಹಾಗೂ ಇನ್ನಿತರ) ಮೂಲಕವೂ ಆರೋಗ್ಯ ನಿರೀಕ್ಷಕರು ದಂಡ ಸಂಗ್ರಹಿಸುತ್ತಿದ್ದಾರೆ.

ದಾವಣಗೆರೆಯ ಬಡಾವಣೆಯೊಂದರ ಖಾಲಿ ಜಾಗದಲ್ಲಿ ತ್ಯಾಜ್ಯ ಸುರಿದಿರುವುದು (ಸಂಗ್ರಹ ಚಿತ್ರ)
ಮನೆಗಳು ಹಾಗೂ ಹೋಟೆಲ್‌ಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯದ ಪೈಕಿ ಸಾರ್ವಜನಿಕರು ಶೇ80 ರಷ್ಟನ್ನು ವಿಂಗಡಿಸಿ ನೀಡುತ್ತಿದ್ದಾರೆ. ಸಾರ್ವಜನಿಕರು ಶೇ100 ರಷ್ಟು ತ್ಯಾಜ್ಯವನ್ನು ವಿಂಗಡಿಸಿ ನೀಡುವ ಮೂಲಕ ಪಾಲಿಕೆಗೆ ಸಹಕರಿಸಬೇಕು
ರೇಣುಕಾ ಪಾಲಿಕೆ ಆಯುಕ್ತರು
ಹಸಿ ಮತ್ತು ಒಣ ತ್ಯಾಜ್ಯವನ್ನು ಸರಿಯಾಗಿ ವಿಭಜಿಸಿ ನೀಡದೇ ಎಲ್ಲೆಂದರಲ್ಲಿ ರಾತ್ರೋರಾತ್ರಿ ಸುರಿದರೆ ಬೆಂಕಿ ಹಚ್ಚಿದರೆ ನಿಯಮಾನುಸಾರ ದಂಡ ವಿಧಿಸಲಾಗುವುದು
ಬಸವಣ್ಣ ಪರಿಸರ ಎಂಜಿನಿಯರ್
ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡದವರಿಗೆ ಮೊದಲ ಬಾರಿ ತಿಳಿಹೇಳಲಾಗುತ್ತದೆ. ಪದೇ ಪದೇ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ
ಮಲ್ಲಿಕಾ ಆರೋಗ್ಯ ನಿರೀಕ್ಷಕಿ
ಅಂಕಿಅಂಶ
170 ರಿಂದ 180 ಟನ್‌ – ಪ್ರತಿ ನಿತ್ಯ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯ 102 – ತ್ಯಾಜ್ಯ ಸಂಗ್ರಹಿಸುವ ಆಟೊ ಟಿಪ್ಪರ್‌ಗಳು 30 – ತ್ಯಾಜ್ಯ ಸಂಗ್ರಹಿಸುವ ಟ್ರ್ಯಾಕ್ಟರ್‌ಗಳು 13 – ತ್ಯಾಜ್ಯ ವಿಲೇವಾರಿ ಮಾಡುವ ಕಾಂಪ್ಯಾಕ್ಟರ್‌ಗಳು (ಬೃಹತ್ ಲಾರಿ) 800 – ಪಾಲಿಕೆಯ ಸಿಬ್ಬಂದಿ (ಪೌರಕಾರ್ಮಿಕರು ಕಸ ತುಂಬುವವರು ಚಾಲಕರು ಇನ್ನಿತರರು) ಆಧಾರ: ದಾವಣಗೆರೆ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.