
ಹರಿಹರ: ‘ಶಾಲಾ ಶೌಚಾಲಯದಲ್ಲಿ ನೀರು ಬಾರದಿದ್ದರೆ ವಿದ್ಯಾರ್ಥಿಗಳು ಮೊದಲು ಮುಖ್ಯ ಶಿಕ್ಷಕರಿಗೆ, ನಂತರ ಬಿಇಒಗೆ ತಿಳಿಸಬೇಕು. ಅಲ್ಲೂ ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು. ಸಮಸ್ಯೆಗಳು ಎದುರಾದರೆ ಅಧಿಕಾರಿಗಳಿಗೆ ತಿಳಿಸಿ ಪರಿಹರಿಸಿಕೊಳ್ಳಿ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕಿವಿಮಾತು ಹೇಳಿದರು.
ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಸ್ಥಳೀಯ ಘಟಕ ಹಾಗೂ ಸ್ಫೂರ್ತಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಸದ್ಭಾವನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರು ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಹೊಂದಿ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಪರಿಹರಿಸಿಕೊಳ್ಳುವತ್ತ ಚಿತ್ತ ಹರಿಸಬೇಕು’ ಎಂದು ಹೇಳಿದರು.
‘ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ 1,500 ವಿದ್ಯಾರ್ಥಿಗಳು ದೇಶದ ವಿವಿಧೆಡೆ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡವರ ಮಕ್ಕಳು ಪ್ರತಿಭಾವಂತರಿದ್ದರೆ ಅವರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತದಂತೆ ಶಿಕ್ಷಣವನ್ನು ಪಸರಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಇನ್‌ಸೈಟ್ಸ್ ಐಎಎಸ್ ಸ್ಥಾಪಕ ಜಿ.ಬಿ.ವಿನಯ್ ಕುಮಾರ್ ಹೇಳಿದರು.
‘ಎಲ್ಲ ಧರ್ಮಿಯರಿಗೂ ಸಂವಿಧಾನದ ಪೀಠಿಕೆಯು ಮಂತ್ರ, ಪ್ರಾರ್ಥನೆಯಾಗಬೇಕು. ಮಹಿಳಾ ಆಯೋಗದ ಅಧ್ಯಕ್ಷರು ಕ್ರಿಯಾಶೀಲರಾಗಿ ಹಾಗೂ ನಿರ್ಭೀತಿಯಿಂದ ಮಾಡುತ್ತಿರುವ ಸೇವೆಯಿಂದ ರಾಜ್ಯದ ಮಹಿಳಾ ಸಮುದಾಯದಲ್ಲಿ ಆತ್ಮಸ್ಥೈರ್ಯ ಮೂಡಿದೆ’ ಎಂದು ವಕೀಲರಾದ ಜಿ.ಎಚ್.ಭಾಗೀರಥಿ ಹೇಳಿದರು.
‘ಪ್ರೊ.ಬಿ.ಕೃಷ್ಣಪ್ಪ ಅವರು ಹುಟ್ಟಿರುವ ಮನೆಯನ್ನು ಸ್ಮಾರಕವಾಗಿಸಬೇಕು. ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಅವರ ಹೆಸರಿಡಬೇಕು. ತಾಲ್ಲೂಕಿನ ಕಡ್ಲೆಗೊಂದಿ ಗ್ರಾಮದ ನಿರ್ವಸತಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸರ್ಕಾರದ ಗಮನ ಸೆಳೆಯಬೇಕು’ ಎಂದು ನಾಗಲಕ್ಷ್ಮಿ ಚೌಧರಿ ಅವರಿಗೆ ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮನವಿ ನೀಡಿದರು.
ದಸಂಸ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಜಿ.ಬಿ.ವಿನಯ್ ಕುಮಾರ್ ಸದ್ಭಾವನ ಪ್ರಶಸ್ತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಗೋವಿಂದರೆಡ್ಡಿ, ವೈದ್ಯರಾದ ವಿ.ಟಿ.ನಾಗರಾಜ್, ಸಚಿನ್ ಬೊಂಗಾಳೆ, ಬಿಇಒ ಡಿ.ದುರುಗಪ್ಪ, ಭದ್ರಾವತಿಯ ನಿವೃತ್ತ ಪ್ರಾಚಾರ್ಯ ಶಿವಬಸಪ್ಪ, ದಸಂಸ ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಹೊನ್ನಾಳಿಯ ಚನ್ನಕೇಶವ, ಬುಳ್ಳಸಾಗರದ ಸಿದ್ಧರಾಮಣ್ಣ, ಸಿಡಿಪಿಒ ಪ್ರಿಯದರ್ಶಿನಿ, ಬಿ.ಮಗ್ದುಮ್, ಅಲೆಮಾರಿ ಸಮುದಾಯದ ಮುಖಂಡ ಸಣ್ಣ ಅಜ್ಜಯ್ಯ, ದುರುಗಪ್ಪ, ವಕೀಲ ವೀರೇಶ್, ದಸಂಸ ಪದಾಧಿಕಾರಿಗಳಾದ ಮಂಜುನಾಥ್ ಎಂ.ಎಸ್, ಕಡ್ಲೆಗೊಂದಿ ತಿಮ್ಮಣ್ಣ, ಚೌಡಪ್ಪ ಸಿ.ಭಾನುವಳ್ಳಿ, ಗದಿಗೆಪ್ಪ, ಸುರೇಶ್ ಬಿ. ಕೆಂಚನಹಳ್ಳಿ, ಧರ್ಮರಾಜ್ ಹಳ್ಳಿಹಾಳ್, ರಾಮಣ್ಣ, ಹನುಮಂತ ಡಿ, ಮಂಜಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.