ADVERTISEMENT

ದಾವಣಗೆರೆ: ಸೈಬರ್‌ ವಂಚನೆಗೆ ‘ಬಹುಕೃತ ವೇಷಂ’

ಜಿಲ್ಲೆಗೂ ಕಾಲಿಟ್ಟ ‘ಡಿಜಿಟಲ್‌ ಅರೆಸ್ಟ್‌’, ಜುಲೈ ತಿಂಗಳಲ್ಲಿ ₹ 86 ಲಕ್ಷ ಕಳೆದುಕೊಂಡ ಜನ

ಜಿ.ಬಿ.ನಾಗರಾಜ್
Published 9 ಸೆಪ್ಟೆಂಬರ್ 2025, 7:59 IST
Last Updated 9 ಸೆಪ್ಟೆಂಬರ್ 2025, 7:59 IST
Olanota Cyber crime.jpg
Olanota Cyber crime.jpg   

ದಾವಣಗೆರೆ: ‘ಕೆಲಸ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರನ್ನು ವಂಚಿಸುವ ಜಾಲದೊಂದಿಗೆ ಸಂಪರ್ಕ ಹೊಂದಿದ್ದೀರಿ. ಇದರಿಂದ ₹ 30 ಲಕ್ಷ ಕಮಿಷನ್‌ ಪಡೆದಿದ್ದೀರಿ. ಬ್ಯಾಂಕ್‌ ಖಾತೆಯಲ್ಲಿ ₹ 30 ಕೋಟಿ ವಹಿವಾಟು ನಡೆದಿರುವುದಕ್ಕೆ ಸಾಕ್ಷ್ಯಗಳಿವೆ. ವಂಚಕರ ಜಾಲದಲ್ಲಿ ಸಿಲುಕಿಲ್ಲ ಎಂಬುದನ್ನು ಖಚಿತಪಡಿಸಲು ₹ 26 ಲಕ್ಷ ಹಣ ವರ್ಗಾವಣೆ ಮಾಡಿ...’

ಬೆಂಗಳೂರು ಪೊಲೀಸ್‌ ಕಮಿಷನರ್‌ ಹೆಸರಿನಲ್ಲಿ ದೂರವಾಣಿ ಕರೆ ಮಾಡಿದ ವ್ಯಕ್ತಿಯ ಧ್ವನಿ ಕೇಳಿದ 75 ವರ್ಷದ ನಿವೃತ್ತ ಪ್ರಾಧ್ಯಾಪಕರಿಗೆ ಆಗಸ ಕಳಚಿ ಮೈಮೇಲೆ ಬಿದ್ದಂತಾಯಿತು. ಈ ಕಳಂಕ ತೊಳೆದುಕೊಳ್ಳುವ ಧಾವಂತದಲ್ಲಿ ವಂಚಕ ಸೂಚಿಸಿದ ಬ್ಯಾಂಕ್‌ ಖಾತೆಗೆ ಹಂತಹಂತವಾಗಿ ₹ 20 ಲಕ್ಷ ಮತ್ತು ₹ 6 ಲಕ್ಷವನ್ನು ಆರ್‌ಟಿಜಿಎಸ್‌ ಮಾಡಿಬಿಟ್ಟರು.

‘ಷೇರುಪೇಟೆಯಲ್ಲಿ ಹೂಡಿಕೆ ಮಾಡಿದರೆ ಶೇ 400ರಷ್ಟು ಲಾಭ ಪಡೆಯಬಹುದು..’ ವಾಟ್ಸ್‌ಆ್ಯಪ್‌ಗೆ ಬಂದ ಲಿಂಕ್‌ 50 ವರ್ಷದ ಅಕೌಂಟೆಂಟ್‌ ಕುತೂಹಲ ಕೆರಳಿಸಿದೆ. ಕ್ಷಣಾರ್ಧದಲ್ಲಿ ಲಿಂಕ್‌ ಒತ್ತಿ ‘ವಾಟ್ಸ್‌ಆ್ಯಪ್‌’ ಗುಂಪಿನ ಸದಸ್ಯರಾಗಿದ್ದಾರೆ. ಅಡ್ಮಿನ್‌ ಹೆಸರಿನಲ್ಲಿ ಪರಿಚಯಿಸಿಕೊಂಡ ಮೂವರು ಹಣ ಹೂಡಿಕೆ ಮಾಡುವಂತೆ ಪುಸಲಾಯಿಸಿದ್ದಾರೆ. ಜುಲೈ 21ರಿಂದ ಆ. 16ರವರೆಗೆ ಹಂತಹಂತವಾಗಿ ₹ 26 ಲಕ್ಷ ವರ್ಗಾವಣೆ ಮಾಡಿದ್ದಾರೆ. ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬುದು ಗೊತ್ತಾದಾಗ ವಂಚಕರ ಜಾಲಕ್ಕೆ ಸಿಲುಕಿದ್ದು ಖಚಿತವಾಗಿದೆ.

ADVERTISEMENT

‘ಸೆನ್’ (ಆರ್ಥಿಕ, ಸೈಬರ್ ಹಾಗೂ ಮಾದಕವಸ್ತು ಅಪರಾಧ) ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಜುಲೈ ತಿಂಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ. ಅಂದಾಜು ₹ 86 ಲಕ್ಷ ಹಣವನ್ನು ಐವರು ಕಳೆದುಕೊಂಡಿದ್ದಾರೆ. 38 ವರ್ಷದ ಗೃಹಿಣಿಯಿಂದ 74 ವರ್ಷದ ನಿವೃತ್ತ ಪ್ರಾಧ್ಯಾಪಕರವರೆಗೆ ಹಲವರು ವಂಚನೆಗೆ ಒಳಗಾಗಿದ್ದಾರೆ.

‘ಹೊಸ ಮಾದರಿಯ ಆನ್‌ಲೈನ್‌ ವಂಚನೆ, ಸೈಬರ್ ಅಪರಾಧಗಳ ತನಿಖೆ ಹಾಗೂ ತ್ವರಿತ ವಿಲೇವಾರಿಗೆ ಇಲಾಖೆ ಕೈಪಿಡಿ ರೂಪಿಸಿದೆ. ತನಿಖಾ ವ್ಯವಸ್ಥೆಯನ್ನು ಸುಧಾರಿಸಲು ಕಾಲಕಾಲಕ್ಕೆ ತರಬೇತಿ ನೀಡಲಾಗುತ್ತಿದೆ. ಸೈಬರ್‌ ಅಪರಾಧಗಳಲ್ಲಿ ಭಾಗಿಯಾದವರ ಬ್ಯಾಂಕ್‌ ಖಾತೆ, ಮೊಬೈಲ್‌ ಫೋನ್‌ ಸಿಮ್‌ ಮಾಹಿತಿ ಪಡೆದು ಶೀಘ್ರ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

₹ 33.45 ಲಕ್ಷ ವಂಚನೆ

‘ಷೇರುಪೇಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು’ ಎಂಬ ಆಮಿಷವೊಡ್ಡಿ ಆಂಜನೇಯ ಬಡಾವಣೆಯ ವ್ಯಕ್ತಿಯೊಬ್ಬರಿಗೆ ₹ 33.45 ಲಕ್ಷ ವಂಚಿಸಲಾಗಿದೆ. ವಾಟ್ಸ್‌ಆಪ್‌ಗೆ ಬಂದ ಈ ಸಂದೇಶವನ್ನು 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನಂಬಿದ್ದಾರೆ. ವಂಚಕರ ಸೂಚನೆಯ ಮೇರೆಗೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿಕೊಂಡಿದ್ದಾರೆ. ಉಳಿತಾಯ ಹಾಗೂ ಸ್ನೇಹಿತರಿಂದ ಸಾಲ ಮಾಡಿ ವಂಚಕರು ಸೂಚಿಸಿದ ಬ್ಯಾಂಕ್‌ ಖಾತೆಗೆ ಆ.11ರಿಂದ ಆ.20ರವರೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಷೇರುಗಳ ಮೌಲ್ಯ ಏರಿಕೆ ಆಗದಿರುವುದನ್ನು ಗಮನಿಸಿ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ‘ಸೆನ್‌’ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

7 ತಿಂಗಳಲ್ಲಿ 70 ಪ್ರಕರಣ

ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಅಂತರ್ಜಾಲದ ಮೇಲಿನ ಅವಲಂಬನೆ ಹೆಚ್ಚಾಗುತ್ತಿದ್ದು ಸೈಬರ್‌ ಅಪರಾಧಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ 7 ತಿಂಗಳಲ್ಲಿ 70 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿವೆ. ಸೈಬರ್‌ ಅಪರಾಧಗಳಿಗೆ ಜಿಲ್ಲೆಯಲ್ಲಿ ಪ್ರತ್ಯೇಕ ಠಾಣೆ ಸ್ಥಾಪನೆಯಾಗಿದೆ. ಡಿವೈಎಸ್‌ಪಿ ದರ್ಜೆಯ ಅಧಿಕಾರಿಯನ್ನು ಠಾಣಾಧಿಕಾರಿಯಾಗಿ ನೇಮಿಸಿ ಕಡಿವಾಣ ಹಾಕುವ ಪ್ರಯತ್ನವನ್ನು ಪೊಲೀಸ್‌ ಇಲಾಖೆ ಮಾಡುತ್ತಿದೆ. ಆದರೂ ‘ಡಿಜಿಟಲ್‌ ಅರೆಸ್ಟ್‌’ನಂತಹ ಅಮಾನವೀಯ ಸ್ವರೂಪದ ಸೈಬರ್ ಅಪರಾಧ ಜಿಲ್ಲೆಗೂ ಕಾಲಿಟ್ಟಿದೆ. ಸೈಬರ್‌ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. 2022ರಲ್ಲಿ 90ರಷ್ಟಿದ್ದ ಪ್ರಕರಣಗಳು 2023ರಲ್ಲಿ 109ಕ್ಕೆ ಏರಿಕೆಯಾಗಿದ್ದವು. 2024ರಲ್ಲಿ ಈ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿ 144ಕ್ಕೆ ತಲುಪಿತ್ತು. ಪ್ರಸಕ್ತ ವರ್ಷ ಕೂಡ ಇದೇ ವೇಗದಲ್ಲಿ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿರುವುದು ಕಳವಳ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.