ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಶುರುವಾಗಲಿದೆ ‘ನಮ್ಮ ಕ್ಲಿನಿಕ್‌’

ಜಿಲ್ಲೆಗೆ ಒಂದು ಕ್ಲಿನಿಕ್‌ ಮಂಜೂರು; ಆವರಗೆರೆಯಲ್ಲಿ ಸ್ಥಳ ಗುರುತು

ಚಂದ್ರಶೇಖರ ಆರ್‌.
Published 8 ಅಕ್ಟೋಬರ್ 2022, 6:59 IST
Last Updated 8 ಅಕ್ಟೋಬರ್ 2022, 6:59 IST
ನಮ್ಮ ಕ್ಲಿನಿಕ್‌ 
ನಮ್ಮ ಕ್ಲಿನಿಕ್‌    

ದಾವಣಗೆರೆ:ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದ ‘ನಮ್ಮಕ್ಲಿನಿಕ್‌’ ಶೀಘ್ರದಲ್ಲೇ ಜಿಲ್ಲೆಯಲ್ಲೂ ಆರಂಭವಾಗಲಿದೆ.

ಜಿಲ್ಲೆಗೆ ಒಂದರಂತೆ ‘ನಮ್ಮ ಕ್ಲಿನಿಕ್‌’ ಮಂಜೂರಾಗಿದ್ದು, ನಗರದ ಆವರಗೆರೆಯ ಆರೋಗ್ಯ ಉಪ ಕೇಂದ್ರದಲ್ಲಿ ಮೊದಲ ಕ್ಲಿನಿಕ್‌ ತೆರೆಯಲು ಉದ್ದೇಶಿಸಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿದೆ.

ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರ ಆರಂಭಿಸಿರುವ ‘ಮೊಹಲ್ಲಾಕ್ಲಿನಿಕ್‌’ ಮಾದರಿಯಲ್ಲಿ ರಾಜ್ಯದ ನಗರ ಪ್ರದೇಶಗಳಲ್ಲಿ ‘ನಮ್ಮಕ್ಲಿನಿಕ್‌’ ಸ್ಥಾಪಿಸಲಾಗುವುದು ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು.ಆರ್ಥಿಕವಾಗಿ ದುರ್ಬಲರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ‘ನಮ್ಮಕ್ಲಿನಿಕ್‌’ಗಳನ್ನು ಸ್ಥಾಪಿಸಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ.

ADVERTISEMENT

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿಕ್ಲಿನಿಕ್‌ ಆರಂಭವಾಗಿದೆ. ವರ್ಷಾಂತ್ಯದಲ್ಲಿ ರಾಜ್ಯದಾದ್ಯಂತ ‘ನಮ್ಮಕ್ಲಿನಿಕ್‌’ಗಳು ಆರಂಭವಾಗುವ ನಿರೀಕ್ಷೆ ಇದೆ.

ನಗರದಲ್ಲೂ ಕ್ಲಿನಿಕ್‌ ಆರಂಭಿಸಲು ಜಾಗ ಗುರುತಿಸಲಾಗಿದೆ. ಸರ್ಕಾರದಿಂದ ಅನುಮೋದನೆ ಬಂದ ಕೂಡಲೇ ಆರಂಭಿಸಲಾಗುವುದು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಏನಿದು ನಮ್ಮಕ್ಲಿನಿಕ್‌?:

ಜಿಲ್ಲಾ, ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಸ್ಥಳೀಯವಾಗಿ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ‘ನಮ್ಮ ಕ್ಲಿನಿಕ್’ ಆರಂಭಿಸಲಾಗುತ್ತಿದೆ.

ಇಲ್ಲಿ ಉಚಿತ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಮಾಡಲಾಗುತ್ತದೆ. ಒಟ್ಟು 12 ರೀತಿಯ ಆರೋಗ್ಯ ಸೇವೆಗಳು ಹಾಗೂ 14 ವಿಧದ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಇ-ಸಂಜೀವಿನಿ ಹಾಗೂ ಟೆಲಿ ಕೌನ್ಸೆಲಿಂಗ್‌ ಮೂಲಕ ಕೊಡಿಸುವ ವ್ಯವಸ್ಥೆ ಇಲ್ಲಿ ಇರಲಿದೆ.

ಕನಿಷ್ಠ 30,000 ಜನಸಂಖ್ಯೆ:

‘ನಮ್ಮಕ್ಲಿನಿಕ್‌’ ಆರಂಭಿಸಲು ಆರೋಗ್ಯ ಇಲಾಖೆ ಕೆಲವು ಮಾನದಂಡಗಳನ್ನು ನಿಗದಿ ಮಾಡಿದೆ. ಕನಿಷ್ಠ 30,000 ಜನಸಂಖ್ಯೆ ಇರುವ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕ್ಲಿನಿಕ್‌ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ.

‘ಜಿಲ್ಲೆಗೆ ಒಂದು ಕ್ಲಿನಿಕ್‌ ಮಂಜೂರಾಗಿದೆ. ಆವರಗೆರೆಯ ಆರೋಗ್ಯ ಉಪ ಕೇಂದ್ರದಲ್ಲೇ ‘ನಮ್ಮ ಕ್ಲಿನಿಕ್’ ತೆರೆಯಲು ನಿರ್ಧರಿಸಲಾಗಿದೆ. ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ಸಿಬ್ಬಂದಿ ನೇಮಕಾತಿ ನಡೆದಿದೆ. ಬಹುಶಃ ರಾಜ್ಯದಾದ್ಯಂತ ಒಟ್ಟಿಗೆ ಕೇಂದ್ರಗಳು ಆರಂಭವಾಗಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಗುವ ಎಲ್ಲ ಸೇವೆಗಳು ಇಲ್ಲಿ ಲಭ್ಯ ಇರಲಿವೆ. ವೈದ್ಯರು, ಸಿಬ್ಬಂದಿ ನೇಮಕಾತಿಗೆ ಸಂದರ್ಶನ ನಡೆಯಲಿದೆ. ಸರ್ಕಾರದಿಂದ ಸೂಚನೆ ಬಂದ ಕೂಡಲೇ ಕ್ಲಿನಿಕ್‌ ಆರಂಭಿಸಲಾಗುವುದು.
-ಡಾ. ನಾಗರಾಜ್‌, ಡಿಎಚ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.