ADVERTISEMENT

ವಿಧಾನ ಪರಿಷತ್‌ ಟಿಕೆಟ್ ಅಸಮಾಧಾನ: ಕಾಂಗ್ರೆಸ್‌ಗೆ ನಸೀರ್‌ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 12:47 IST
Last Updated 18 ಜೂನ್ 2020, 12:47 IST

ದಾವಣಗೆರೆ: ‘ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ನಿಂದ ಹಳೆ ಮುಖಗಳಿಗೆ ಟಿಕೆಟ್‌ ನೀಡಲಾಗಿದೆ. ಹೊಸಬರಿಗೆ ಪಕ್ಷದಲ್ಲಿ ಮನ್ನಣೆ ನೀಡಿಲ್ಲ. ಇದರಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಕಾಂಗ್ರೆಸ್‌ ಜಿಲ್ಲಾ ಸಮಿತಿ ಉಪಾಧ್ಯಕ್ಷ ಡಾ. ಸಿ.ಆರ್‌. ನಸೀರ್‌ ಅಹ್ಮದ್‌ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘30 ವರ್ಷಗಳಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದು, ಪಕ್ಷದಲ್ಲಿ ಹಲವು ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಮಂಡಳಿ ಹಾಗೂ ಆಯೋಗದ ಸದಸ್ಯನಾಗಿ ಕೆಲಸ ಮಾಡಿದ್ಧೇನೆ. ಆದರೆ ಪಕ್ಷದಲ್ಲಿ ನನ್ನ ಸೇವೆ ಪರಿಗಣಿಸಿಲ್ಲ ಎಂಬ ಅಸಮಾಧಾನವಿದೆ. ಹೀಗಾಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಹೇಳಿದರು.

‘ಪಕ್ಷದಲ್ಲಿ ಹಲವು ಬಾರಿ ಅಧಿಕಾರ ಅನುಭವಿಸಿದ ಇಬ್ಬರು ಹಿರಿಯರಿಗೆ ವಿಧಾನಪರಿಷತ್‌ಗೆ ಟಿಕೆಟ್‌ ನೀಡಲಾಗಿದೆ. ಈ ಬಗ್ಗೆ ಬೇಸರವಿಲ್ಲ. ಆದರೆ ಹಳೆಬರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಿದ್ದರೆ ಸಾಮಾನ್ಯ ಕಾರ್ಯಕರ್ತರಿಗೆ ಪಕ್ಷದಿಂದ ಸಂದೇಶ ರವಾನಿಸಿದಂತಾಗುತ್ತಿತ್ತು. ‌ಹೊಸಬರನ್ನು ಪರಿಗಣಿಸುವಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ಗೆ ಪತ್ರ ಬರೆದಿದ್ದೆ. ಸೋನಿಯಾ ಗಾಂಧಿ ನನ್ನ ಸಲಹೆಯನ್ನು ಪರಿಗಣಿಸುವುದಾಗಿ ತಿಳಿಸಿದ್ದರು. ಆದರೂ ಪಕ್ಷದ ನಿರ್ಧಾರ ಅಸಮಾಧಾನ ತಂದಿದೆ’ ಎಂದು ಹೇಳಿದರು.

ADVERTISEMENT

‘ವಿಧಾನ ಪರಿಷತ್‌ಗೆ ಮಧ್ಯ ಕರ್ನಾಟಕ ಅಥವಾ ಉತ್ತರ ಕರ್ನಾಟಕದವರನ್ನು ಪರಿಗಣಿಸಬೇಕಿತ್ತು. ಯಾವಾಗಲೂ ಬೆಂಗಳೂರಿನವರನ್ನೇ ಪರಿಗಣಿಸುತ್ತಿರುವುದು ಸರಿಯಲ್ಲ. ನನ್ನ ನಿರ್ಧಾರ ಯಾರ ವಿರುದ್ಧವೂ ಅಲ್ಲ. ಪಕ್ಷಕ್ಕೆ ರಾಜೀನಾಮೆ ನೀಡಿದ್ದರೂ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಮುಖಂಡರಾದ ಬರ್ಕತ್‌ ಅಲಿ, ಸಯ್ಯದ್‌ ತಾಜ್‌ಪೀರ್‌, ಶಫಿ ಅಹ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.