ADVERTISEMENT

ದಾವಣಗೆರೆ: ಕ್ರಿಕೆಟ್‌ ಜಾತ್ರೆಗೆ ದಾವಣಗೆರೆ ಸಜ್ಜು

ಶಾಮನೂರು ಡೈಮಂಡ್‌, ಶಿವಗಂಗಾ ಕಪ್‌ ಕ್ರಿಕೆಟ್‌ ಟೂರ್ನಿ ನ.24ರಿಂದ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 13:08 IST
Last Updated 23 ನವೆಂಬರ್ 2021, 13:08 IST
ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರದಿಂದ ನಡೆಯಲಿರುವ ಎಸ್.ಎಸ್. ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ ರಾಷ್ಟ್ರ ಮಟ್ಟದ ಟೆನಿಸ್‍ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ನೀಡುವ ಟೀಶರ್ಟ್‌ ಅನ್ನು ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಅನಾವರಣಗೊಳಿಸಿದರು.
ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರದಿಂದ ನಡೆಯಲಿರುವ ಎಸ್.ಎಸ್. ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ ರಾಷ್ಟ್ರ ಮಟ್ಟದ ಟೆನಿಸ್‍ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ನೀಡುವ ಟೀಶರ್ಟ್‌ ಅನ್ನು ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಅನಾವರಣಗೊಳಿಸಿದರು.   

ದಾವಣಗೆರೆ: ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಬುಧವಾರದಿಂದ ಐದು ದಿನಗಳ ಕಾಲ ಕ್ರಿಕೆಟ್‌ ಜಾತ್ರೆ ನಡೆಯಲಿದ್ದು, ಹೊನಲು ಬೆಳಕಿನಲ್ಲಿ ಪಂದ್ಯಗಳನ್ನು ನಡೆಸಲು ಜಿಲ್ಲಾ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ದಿವಂಗತ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸವಿನೆನಪಿಗಾಗಿ ನ.25ರಿಂದ 28ರವರೆಗೆ ಎಸ್.ಎಸ್. ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ ರಾಷ್ಟ್ರ ಮಟ್ಟದ ಟೆನಿಸ್‍ಬಾಲ್ ಕ್ರಿಕೆಟ್ ಟೂರ್ನಿ ನಡೆಯಲಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಕ್ರೀಡಾಪಟುಗಳಿಗೆ ನೀಡುವ ಟೀಶರ್ಟ್‌ ಅನಾವರಣಗೊಳಿಸಿದ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ , ‘ಬುಧವಾರ ಸಂಜೆ 6 ಗಂಟೆಗೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಟೂರ್ನಿಯನ್ನು ಉದ್ಘಾಟಿಸಲಿದ್ದಾರೆ’ ಎಂದರು.

ADVERTISEMENT

14ನೇ ಬಾರಿಗೆ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್‌ ಟೂರ್ನಿಯನ್ನು ನಡೆಸುತ್ತಿದ್ದೇವೆ. 32 ತಂಡಗಳು ಪಾಲ್ಗೊಳ್ಳಲಿವೆ. ಕರ್ನಾಟಕದ ವಿವಿಧೆಡೆಯಿಂದ 14 ತಂಡಗಳು, ದಾವಣಗೆರೆ ಜಿಲ್ಲೆಯ 12 ತಂಡಗಳು ಪಾಲ್ಗೊಳ್ಳಲಿವೆ. ಮಧ್ಯಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ಒಟ್ಟು 6 ತಂಡಗಳು ಬರಲಿವೆ. 400 ಕ್ರೀಡಾಪಟುಗಳು ಟೂರ್ನಿಗೆ ಬರುತ್ತಿದ್ದಾರೆ. ಎಲ್ಲಾ ಕ್ರೀಡಾಪಟುಗಳಿಗೂ ಊಟ–ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

‘ಪ್ರಥಮ ಬಹುಮಾನ ₹ 3,55,555 ಹಾಗೂ ಶಾಮನೂರು ಡೈಮಂಡ್ ಕಪ್, ದ್ವಿತೀಯ ಬಹುಮಾನ ₹ 2,55,555 ಹಾಗೂ ಶಿವಗಂಗಾ ಕಪ್, ತೃತೀಯ ಬಹುಮಾನವಾಗಿ ₹ 1,25,555 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಉತ್ತಮ ಆಲ್‍ರೌಂಡರ್‌ಗೆ ಹೀರೋ ಹೋಂಡಾ ಬೈಕ್ ನೀಡಲಾಗುವುದು. ಸುಮಾರು ₹ 30 ಲಕ್ಷ ವೆಚ್ಚ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದಾಗ ದಾವಣಗೆರೆಯಲ್ಲಿ 13 ಕ್ರೀಡಾ ತರಬೇತುದಾರರು ಇದ್ದರು. ಈಗ ಕೇವಲ ಐದಾರು ತರಬೇತುದಾರರಿದ್ದಾರೆ. ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲೆಗೆ ಅನುದಾನ ಬರುತ್ತಿಲ್ಲ. ಕ್ರೀಡಾ ವಸತಿನಿಲಯದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಕ್ರೀಡಾಪಟುಗಳಿಗೆ ತರಬೇತಿ ಸಿಗುತ್ತಿಲ್ಲ’ ಎಂದು ದಿನೇಶ್‌ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಸಂಘದ ಸಹ ಕಾರ್ಯದರ್ಶಿ ಜಯಪ್ರಕಾಶ್‌ ಗೌಡ, ‘ಮೂರನೇ ತೀರ್ಪುಗಾರರ ವ್ಯವಸ್ಥೆ ಇರಲಿದೆ. ಪಂದ್ಯಗಳನ್ನು Msports ಯೂಟ್ಯೂಬ್‍ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಶಿವಗಂಗಾ ಶ್ರೀನಿವಾಸ, ಕಾರ್ಯದರ್ಶಿ ಕುರುಡಿ ಗಿರೀಶ್‌ (ಸ್ವಾಮಿ) ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.