ದಾವಣಗೆರೆ: ‘ನೈಸರ್ಗಿಕ ಕೃಷಿ ಪದ್ಧತಿಯಿಂದ ಮಣ್ಣಿನಲ್ಲಿ ಇಂಗಾಲದ ಅಂಶ ಮತ್ತು ಸೂಕ್ಷ್ಮಜೀವಾಣುಗಳ ಚಟುವಟಿಕೆ ಹೆಚ್ಚುತ್ತದೆ. ಇದರಿಂದ ಬೆಳೆಗಳ ಇಳುವರಿ ಏರಿಕೆಯಾಗುತ್ತದೆ’ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ ಸಲಹೆ ನೀಡಿದರು.
ಚನ್ನಗಿರಿ ತಾಲ್ಲೂಕಿನ ನೀತಿಗೆರೆ ಗ್ರಾಮದಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ದೇವರಹಳ್ಳಿ ರೈತ ಸಂಪರ್ಕ ಕೇಂದ್ರದ ಸಹಯೋಗದೊಂದಿಗೆ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ ಯೋಜನೆಯಡಿ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನೈಸರ್ಗಿಕ ಕೃಷಿಯಲ್ಲಿ ಬಳಸುವ ಜೀವಾಮೃತ, ಬೀಜಾಮೃತ, ಗೋ ಕೃಪಾಮೃತ, ನೀಮಾಸ್ತ್ರ ತಯಾರಿಕೆ ವಿಧಾನಗಳನ್ನು ತಿಳಿಸಿಕೊಟ್ಟರು.
‘ತೋಟಗಾರಿಕಾ ಬೆಳೆಗಳಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಮಣ್ಣಿನ ಫಲವತ್ತತೆ, ರೋಗ ಮತ್ತು ಕೀಟಬಾಧೆಗಳ ಹಾವಳಿ ಕಡಿಮೆಯಾಗುತ್ತದೆ. ಬೆಳೆಯ ಇಳುವರಿ ಹೆಚ್ಚುವುದರ ಜೊತೆಗೆ ಗುಣಮಟ್ಟವು ಚೆನ್ನಾಗಿರುತ್ತದೆ’ ಎಂದು ಬೇಸಾಯ ತಜ್ಞ ಎಂ.ಜಿ. ಬಸವನಗೌಡ ಹೇಳಿದರು.
‘ಸ್ಥಳೀಯವಾಗಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಹೆಚ್ಚಿನ ಲಾಭ ಪಡೆಯಬಹುದು’ ಎಂದು ಕೃಷಿ ಅಧಿಕಾರಿ ಶ್ರೀಕುಮಾರ್ ಹೇಳಿದರು.
ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಪ್ರಗತಿಪರ ಕೃಷಿಕ ನಾಗರಾಜ್ ಅವರ ತಾಕಿಗೆ ಭೇಟಿ ನೀಡಿ ಜೀವಾಮೃತ ತಯಾರಿಕೆ ಮತ್ತು ಬಳಕೆ ವಿಧಾನದ ಬಗ್ಗೆ ರೈತರೊಂದಿಗೆ ಚರ್ಚೆ ಮಾಡಲಾಯಿತು. ಕೃಷಿ ಸಖಿ ಚಂದ್ರಕಲಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.