ADVERTISEMENT

‘ಹುಂಡಿ ಹಣ ಬೇಕು; ಅಭಿವೃದ್ಧಿ ಏಕಿಲ್ಲ’

ಹನುಮಂತ ದೇವಾಲಯ ಅಭಿವೃದ್ಧಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 7:30 IST
Last Updated 9 ನವೆಂಬರ್ 2020, 7:30 IST
ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದ ಹನುಮಂತ ದೇವರ ಹುಂಡಿ ಹಣ ಎಣಿಕೆ ಕಾರ್ಯ ತಹಶೀಲ್ದಾರ್ ಸಮ್ಮುಖದಲ್ಲಿ ಶನಿವಾರ ನಡೆಯಿತು
ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದ ಹನುಮಂತ ದೇವರ ಹುಂಡಿ ಹಣ ಎಣಿಕೆ ಕಾರ್ಯ ತಹಶೀಲ್ದಾರ್ ಸಮ್ಮುಖದಲ್ಲಿ ಶನಿವಾರ ನಡೆಯಿತು   

ಮಲೇಬೆನ್ನೂರು: ಸಮೀಪದ ಕುಂಬಳೂರು ಗ್ರಾಮದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಹನುಮಂತ ದೇವರ ಹುಂಡಿ ತೆರೆದು ಶನಿವಾರ ಹಣ ಎಣಿಕೆ ಮಾಡುವ ವೇಳೆ ದೇವಾಲಯದ ಅಭಿವೃದ್ಧಿಗೆ ಸರ್ಕಾರದಿಂದ ಹಣ ಮಂಜೂರಾಗಿಲ್ಲ ಎಂದು ಅಧಿಕಾರಿಗಳೊಂದಿಗೆ ಗ್ರಾಮಸ್ಥರು ವಾಗ್ದಾದ ನಡೆಸಿದರು.

‘ಪ್ರತಿ ವರ್ಷ ಬಂದು ಹುಂಡಿ ಹಣ ಎಣಿಸಿ ತೆಗೆದುಕೊಂಡು ಹೋಗುತ್ತೀರಿ, ದೇವಾಲಯದ ಅಭಿವೃದ್ಧಿ ಮಾಡಿಲ್ಲ’ ಎಂದುಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ದೇವಾಲಯದ ಗೋಪುರ ಕಳಸ ಶಿಥಿಲವಾಗಿದ್ದು, ಹೊಸದಾಗಿ ನಿರ್ಮಿಸಲು ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಸಿಬ್ಬಂದಿ ಒಮ್ಮೆಯೂ ದೇವಾಲಯಕ್ಕೆ ಬಂದಿಲ್ಲ. ಈಗ ಬಂದಿದ್ದೀರಿ’ ಎಂದು ಗ್ರಾಮಸ್ಥರು ವಾಗ್ದಾದ ನಡೆಸಿದರು.

ADVERTISEMENT

ಮಧ್ಯೆ ಪ್ರವೇಶಿಸಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ‘ದೇವಾಲಯದ ಅಭಿವೃದ್ಧಿ ಕೆಲಸ ಕುರಿತು ಕಚೇರಿಗೆ ಬಂದು ಮಾತನಾಡಿ ಸಮಸ್ಯೆ ಪರಿಹರಿಸೋಣ’ ಎಂದು ಭರವಸೆ ನೀಡಿದರು.

ದೇವಾಲಯದ ಅರ್ಚಕರಿಬ್ಬರು ದೇವಾಲಯಕ್ಕೆ ಬರುವ ಚಿನ್ನಾಭರಣ, ಹಣದ ಲೆಕ್ಕ ಸರಿಯಾಗಿಲ್ಲ ಎಂದು ಪರಸ್ಪರ ವಾಗ್ವಾದ ನಡೆಸಿದರು. ಕಂದಾಯ ಇಲಾಖೆ ಸಿಬ್ಬಂದಿ ಪೊಲೀಸರನ್ನು ಕರೆಸಿ ಪರಿಸ್ಥಿತಿ ನಿಯಂತ್ರಿಸಿದರು.

ಎರಡು ವರ್ಷಗಳಿಂದ ಹುಂಡಿ ತೆರೆಯದ ಕಾರಣ ಬೀಗ ತೆಗೆಯಲು ಆಗಲಿಲ್ಲ. ಆಗ ಬೀಗ ಸರಿ ಮಾಡುವವರನ್ನು ಕರೆಸಿ ತೆರೆಯಲಾಯಿತು. ಹುಂಡಿಯಲ್ಲಿ ₹ 5,93,416 ಸಂಗ್ರಹವಾಗಿದೆ ಎಂದು ಉಪ ತಹಶೀಲ್ದಾರ್‌ ಆರ್.ರವಿ ತಿಳಿಸಿದರು.

ಕೊರೊನಾ ಕಾರಣ ಹೆಚ್ಚಿನ ಭಕ್ತರು ಬಂದಿಲ್ಲ. ಇಲ್ಲದಿದ್ದರೆ ಹೆಚ್ಚಿನ ಹಣ ಸಂಗ್ರಹವಾಗುತ್ತಿತ್ತು ಎಂದು ಗ್ರಾಮಸ್ಥರು ಹೇಳಿದರು.

ರಾಜಸ್ವ ನಿರೀಕ್ಷಕ ಸಮೀರ್ ಅಹ್ಮದ್, ವಿಎ ಶ್ರೀಧರ ಮೂರ್ತಿ, ಮುಜರಾಯಿ ವಿಷಯ ನಿರ್ವಾಹಕಿ ಸಂಗೀತಾ, ಎಎಸ್ಐ ಮಲ್ಲಿಕಾರ್ಜುನ, ಅರ್ಚಕ ಶ್ರೀನಿವಾಸ, ಭೀಮಯ್ಯ, ಗ್ರಾಮದ ಮುಖಂಡರಾದ ಬಸವರಾಜ್, ಗೌಡ್ರ ಪರಮೇಶ್ವರಪ್ಪ, ಲಿಂಗರಾಜ್, ರೇವಣಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.