ADVERTISEMENT

ನೆರೆಯಲ್ಲಿ ಮುಳುಗಿದ ಬದುಕಿಗೆ ನೆರವಿನ ಆಸರೆ

ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 29 ಲಕ್ಷ ದೇಣಿಗೆ

ವಿನಾಯಕ ಭಟ್ಟ‌
Published 16 ಸೆಪ್ಟೆಂಬರ್ 2019, 19:45 IST
Last Updated 16 ಸೆಪ್ಟೆಂಬರ್ 2019, 19:45 IST
ಜಗಳೂರು ತಾಲ್ಲೂಕಿನ ಜನ ನೀಡಿದ ಸಾಮಗ್ರಿಗಳನ್ನು ತಹಶೀಲ್ದಾರ್‌ ತಿಮ್ಮಣ್ಣ ಉಜ್ಜಿನಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಈಚೆಗೆ ವಿತರಿಸಲಾಯಿತು.
ಜಗಳೂರು ತಾಲ್ಲೂಕಿನ ಜನ ನೀಡಿದ ಸಾಮಗ್ರಿಗಳನ್ನು ತಹಶೀಲ್ದಾರ್‌ ತಿಮ್ಮಣ್ಣ ಉಜ್ಜಿನಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಈಚೆಗೆ ವಿತರಿಸಲಾಯಿತು.   

ದಾವಣಗೆರೆ: ರಾಜ್ಯದಲ್ಲಿ ಪ್ರವಾಹದಲ್ಲಿ ಮುಳುಗಿದ ಸಂತ್ರಸ್ತರ ಬದುಕಿಗೆ ಜಿಲ್ಲೆಯ ಸಂಘ–ಸಂಸ್ಥೆಗಳು ಹಾಗೂ ಜನ ನೆರವಿನ ಹಸ್ತ ಚಾಚುವ ಮೂಲಕ ಆಸರೆಯಾಗಿದ್ದಾರೆ.

ಹಲವು ಗ್ರಾಮಗಳಲ್ಲಿ ಆಹಾರಧಾನ್ಯ, ಬಟ್ಟೆ, ದಿನಬಳಕೆ ವಸ್ತುಗಳನ್ನು ಸಂಗ್ರಹಿಸಿ, ಗ್ರಾಮಸ್ಥರೇ ನೇರವಾಗಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬಳಿಗೇ ಹೋಗಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನೊಂದೆಡೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಹೃದಯಶ್ರೀಮಂತಿಕೆ ತೋರಿದ್ದಾರೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಲು ಶುಕ್ರವಾರದವರೆಗೆ ಒಟ್ಟು 58 ಚೆಕ್‌–ಡಿಡಿಗಳು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದ್ದು, ಒಟ್ಟು ₹ 29.40 ಲಕ್ಷ ಸಂಗ್ರಹಗೊಂಡಿದೆ. ₹ 1 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ 13 ಚೆಕ್‌ಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ₹ 50 ಸಾವಿರದಿಂದ
₹ 1 ಲಕ್ಷದ ಒಳಗಿನ ಮೊತ್ತದ ಒಟ್ಟು 9 ಚೆಕ್‌ಗಳು ಸಲ್ಲಿಕೆಯಾಗಿವೆ. ಜನ ನೀಡಿದ ಹಣವನ್ನು ಈಗಾಗಲೇ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ ಜಮಾ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಶಾಸಕ ಶಾಮನೂರು ಶಿವಶಂಕರಪ್ಪ ಅವರು ವೈಯಕ್ತಿಕ ದೇಣಿಯಾಗಿ ₹ 25 ಲಕ್ಷ ಹಾಗೂ ಬಾಪೂಜಿ ವಿದ್ಯಾ ಸಂಸ್ಥೆ ವತಿಯಿಂದ ದೇಣಿಯಾಗಿ ₹ 44 ಲಕ್ಷದ ಚೆಕ್‌ ಅನ್ನು ನೇರವಾಗಿ ಮುಖ್ಯಮಂತ್ರಿಗೆ ಬೆಂಗಳೂರಿನಲ್ಲಿ ಈಚೆಗೆ ಸಲ್ಲಿಸುವ ಮೂಲಕ ಸಹಾಯಹಸ್ತ ಚಾಚಿದ್ದಾರೆ.

ಚನ್ನಗಿರಿಯಲ್ಲಿ ₹ 18.55 ಲಕ್ಷ ಸಂಗ್ರಹ: ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಹಾಗೂ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ನೇತೃತ್ವದಲ್ಲಿ ಚನ್ನಗಿರಿಯಲ್ಲಿ ಸಂಚರಿಸಿ ಸಾರ್ವಜನಿಕರಿಂದ ₹ 18.55 ಲಕ್ಷ ದೇಣಿಗೆಯನ್ನು ಸಂಗ್ರಹಿಸಲಾಗಿತ್ತು. ಈ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. ತಾಲ್ಲೂಕಿನ ಹಲವು ಗ್ರಾಮಗಳಲ್ಲೂ ದೇಣಿಗೆ ಸಂಗ್ರಹಿಸಿ, ಗ್ರಾಮಸ್ಥರೇ ನೇರವಾಗಿ ಸಂತ್ರಸ್ತರಿಗೆ ವಿತರಿಸಿದ್ದಾರೆ.

ಹೃದಯಶ್ರೀಮಂತಿಕೆಗಿಲ್ಲ ‘ಬರ’!

ಸತತ ಬರಗಾಲ ಕಾಡುತ್ತಿದ್ದರೂ ಜಗಳೂರು ತಾಲ್ಲೂಕಿನ ಜನ ರಾಜ್ಯದ ನೆರೆ ಸಂತ್ರಸ್ತರಿಗೆ ಸುಮಾರು ₹ 18 ಲಕ್ಷ ಮೌಲ್ಯದ ಆಹಾರ ಪದಾರ್ಥ ಹಾಗೂ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಹೃದಯಶ್ರೀಮಂತಿಕೆ ಮೆರೆದಿದ್ದಾರೆ.

‘ನೆರೆ ಸಂತ್ರಸ್ತರಿಗೆ ತಲುಪಿಸಲು ಹಣ ನೀಡಲು ಜನ ಮುಂದೆ ಬಂದಾಗ ನಾವು ನಿರಾಕರಿಸಿದೆವು. ಆಗ ಜನ, ಸಂತ್ರಸ್ತರಿಗೆ ಅಗತ್ಯವಿರುವ ಆಹಾರ ಧಾನ್ಯಗಳು ಹಾಗೂ ಸಾಮಗ್ರಿಗಳನ್ನು ಕೊಡಿಸಲು ಮುಂದೆ ಬಂದರು. ಜಿಲ್ಲಾಡಳಿತದ ಅನುಮತಿ ಪಡೆದು, ಅಂದಾಜು ₹ 18 ಲಕ್ಷ ಮೌಲ್ಯದ ವಸ್ತುಗಳನ್ನು ಮೂರು ಲೋಡ್‌ಗಳಲ್ಲಿ ತೆಗೆದುಕೊಂಡು ಹೋಗಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನ್‌, ಹಿರೇಹಂಪಿಹೊಳೆ, ಅವರಾದಿ ಗ್ರಾಮಗಳ ಸಂತ್ರಸ್ತರಿಗೆ ವಿತರಿಸಿದ್ದೇವೆ’ ಎಂದು ಜಗಳೂರು ತಹಶೀಲ್ದಾರ್‌ ತಿಮ್ಮಣ್ಣ ಉಜ್ಜಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘₹ 12 ಲಕ್ಷ ಮೌಲ್ಯದ 1,350 ಅಕ್ಕಿಚೀಲ, ₹ 2 ಲಕ್ಷ ಮೌಲ್ಯದ ಪಾತ್ರೆ–ಪಗಡೆ; 2000 ಎಣ್ಣೆ ಪ್ಯಾಕೇಟ್‌ ಸೇರಿ ವಿವಿಧ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸಿದ್ದೇವೆ. ಈಗ ಮತ್ತೆ ₹ 2 ಲಕ್ಷ ಮೌಲ್ಯದ ವಸ್ತುಗಳನ್ನು ಜನ ತಂದು ಕೊಟ್ಟಿದ್ದಾರೆ. ಮತ್ತೆ ನೆರೆ ಬಂದಿರುವುದರಿಂದ ಜಿಲ್ಲಾಡಳಿತದಿಂದ ಪರವಾನಗಿ ಪಡೆದು ಅವುಗಳನ್ನೂ ಸಂತ್ರಸ್ತರಿಗೆ ತಲುಪಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

₹ 50 ಲಕ್ಷ ಸಂಗ್ರಹಿಸುವ ಗುರಿ

‘ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಆಡಳಿತವು ಸಂತ್ರಸ್ತರಿಗಾಗಿ ಒಟ್ಟು ₹ 50 ಲಕ್ಷ ದೇಣಿಗೆ ಸಂಗ್ರಹಿಸಿ ಕೊಡುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ತಾತ್ಕಾಲಿಕವಾಗಿ ಪ್ರತ್ಯೇಕ ಖಾತೆ ತೆರೆಯಲಾಗಿದೆ. ಈಗಾಗಲೇ ಹೊನ್ನಾಳಿ ತಾಲ್ಲೂಕಿನಲ್ಲಿ ನಾಗರಿಕರಿಂದ ₹ 30 ಲಕ್ಷ ಸಂಗ್ರಹಿಸಲಾಗಿದೆ. ಜೊತೆಗೆ ಅಂದಾಜು ₹ 4 ಲಕ್ಷ ಮೌಲ್ಯದ ಆಹಾರ ಧಾನ್ಯಗಳು, ಬಟ್ಟೆಗಳನ್ನೂ ಜನ ನೀಡಿದ್ದಾರೆ. ಶೀಘ್ರದಲ್ಲೇ ಇವುಗಳನ್ನು ಸಂತ್ರಸ್ತರಿಗೆ ವಿತರಿಸಲಾಗುವುದು’ ಎಂದು ಹೊನ್ನಾಳಿ ತಹಶೀಲ್ದಾರ್‌ ತುಷಾರ್‌ ಹೊಸೂರು ತಿಳಿಸಿದರು.

ನ್ಯಾಮತಿ ತಾಲ್ಲೂಕಿನಲ್ಲಿ ಇದುವರೆಗೆ ₹ 10 ಲಕ್ಷವನ್ನು ನಾಗರಿಕರು ದೇಣಿಗೆ ನೀಡಿದ್ದಾರೆ. ಅಕ್ಕಿ–ಆಹಾರ ಧಾನ್ಯಗಳನ್ನೂ ಸಂಗ್ರಹಿಸಲಾಗಿದೆ ಎಂದು ನ್ಯಾಮತಿ ತಹಶೀಲ್ದಾರ್‌ ಎಚ್‌.ಜೆ. ರಶ್ಮಿ ಹೇಳಿದರು.

* ವಿಶೇಷವಾಗಿ ಬರಪೀಡಿತ ಜಗಳೂರಿನ ಜನ ಹಾಗೂ ಜಿಲ್ಲೆಯ ಹಿರಿಯ ನಾಗರಿಕರು ತಮ್ಮ ಸ್ವಂತ ಹಣವನ್ನು ನೆರೆ ಸಂತ್ರಸ್ತರಿಗಾಗಿ ನೀಡುತ್ತಿರುವುದು ಅಭಿನಂದನಾರ್ಹ ಕಾರ್ಯವಾಗಿದೆ.

ಮಹಾಂತೇಶ ಬೀಳಗಿ,ಜಿಲ್ಲಾಧಿಕಾರಿ

*ಜಗಳೂರು ತಾಲ್ಲೂಕಿನಲ್ಲಿ ಬರಗಾಲ ಇದ್ದರೂ ಅದನ್ನು ಲೆಕ್ಕಿಸದೆ ನೆರೆ ಸಂತ್ರಸ್ತರಿಗೆ ಜನ ಸ್ಪಂದಿಸಿರುವುದು ಅದ್ಭುತವಾಗಿದೆ. ಈಗಲೂ ಸಾಮಗ್ರಿಗಳನ್ನು ತಂದುಕೊಡುತ್ತಿದ್ದಾರೆ.

ತಿಮ್ಮಣ್ಣ ಉಜ್ಜಿನಿ,ಜಗಳೂರು ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.