ADVERTISEMENT

ಜೀವನದಲ್ಲೇ ಇಂಥ ಅಪಮಾನ ಅನುಭವಿಸಿಲ್ಲ: ಕೋವಿಡ್‌ನಿಂದ ಗುಣಮುಖರಾದ ಶಿಕ್ಷಕಿಯ ನೋವು

ಕೊರೊನಾ ಗೆದ್ದು ಬಂದಾಗ ಸ್ಥಳೀಯರು ತೋರಿಸಿದ ನಡವಳಿಕೆ ಬಗ್ಗೆ ಶಿಕ್ಷಕಿ ಬೇಸರ

ಬಾಲಕೃಷ್ಣ ಪಿ.ಎಚ್‌
Published 1 ಜೂನ್ 2020, 1:46 IST
Last Updated 1 ಜೂನ್ 2020, 1:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ದಾವಣಗೆರೆ: ‘ಆಸ್ಪತ್ರೆಗೆ ಹೋಗಿ ಬಂದಿರುವುದು ತವರುಮನೆಗೆ ಹೋಗಿ ಬಂದಂತಾಗಿತ್ತು. ಅಷ್ಟು ಚೆನ್ನಾಗಿ ನೋಡಿಕೊಂಡರು. ಆದರೆ ಮನೆಗೆ ಬರುತ್ತಿದ್ದಂತೆ ಸ್ಥಳೀಯರು ಮಾಡಿದಂಥ ಅಪಮಾನ ಹುಟ್ಟಿದಲ್ಲಿಂದ ಈವರೆಗೆ ಅನುಭವಿಸಿಲ್ಲ’.

ಕೊರೊನಾ ವೈರಸ್‌ ಸೋಂಕುಪತ್ತೆಯಾಗಿ ಆಸ್ಪತ್ರೆಯಲ್ಲಿದ್ದು, ಗುಣಮುಖರಾಗಿ ವಾರದ ಹಿಂದೆ ಬಿಡುಗಡೆ ಯಾಗಿರುವ ಕೆಟಿಜೆ ನಗರದ ನಿವಾಸಿ, ಶಿಕ್ಷಕಿ ಅವರ ನೋವಿನ ಮಾತಿದು. ಅವರು ಇಡೀ ಪ್ರಕರಣವನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ನನ್ನ ಸಹೋದರಿಯ ಪತಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಅವರೆಲ್ಲ ಅದಕ್ಕಿಂತ 12 ದಿನಗಳ ಮೊದಲು ನಮ್ಮ ಮನೆಗೆ ಬಂದು ಹೋಗಿದ್ದರು. ಆಗ ಎಲ್ಲರೂ ಆರೋಗ್ಯವಾಗಿದ್ದರು. ಆದರೂ ಕೊರೊನಾ ಬಗೆಗಿನ ಸುದ್ದಿಗಳನ್ನು ನೋಡಿ ಹೆದರಿಕೆ ಉಂಟಾಗಿದ್ದರಿಂದ ರೋಗದ ಯಾವುದೇ ಲಕ್ಷಣ ಇಲ್ಲದೇ ಇದ್ದರೂ ನಾನೂ ಪರೀಕ್ಷೆ ಮಾಡಿಸಲು ಹೋಗಿದ್ದೆ. ಅವತ್ತು ನಿಮಗೆ ಏನೂ ತೊಂದರೆ ಇಲ್ಲ ಎಂದು ಹೇಳಿದ್ದರು. ಅಲ್ಲಿ ನನ್ನ ಸಹೋದರಿಯ ಮನೆಯ ವರೆಲ್ಲ ಬಂದಿದ್ದರು. ಅವರ ಜತೆಗೆ ನಾನೂ ಇದ್ದೆ. ಅದಾಗಿ ಮೇ 1ರಂದು ಅವರು ನಿಧನರಾದರು.
ಹಾಗಾಗಿ ಮತ್ತೆ ಪರೀಕ್ಷೆ ಮಾಡಿದರು. ಮೇ 5ಕ್ಕೆ ಸೋಂಕು ಇರುವುದು ದೃಢಪಟ್ಟಿತ್ತು’ ಎಂದು ತಿಳಿಸಿದರು.

ADVERTISEMENT

‘ಮೇ 22ರ ವರೆಗೆ ಆಸ್ಪತ್ರೆಯಲ್ಲಿ ಇದ್ದೆ. ಅಷ್ಟು ದಿನವೂ ಜ್ವರ, ಶೀತ, ಕಫ ಸಹಿತ ಯಾವುದೇ ಲಕ್ಷಣಗಳು ಇರಲಿಲ್ಲ. ಪ್ರತಿದಿನ ವೈದ್ಯರು ಬಂದು ವಿಚಾರಿಸುತ್ತಿದ್ದರು. ಎಲ್ಲರೂ ಚೆನ್ನಾಗಿ ನೋಡಿಕೊಂಡರು. ಮೇ 22ರಂದು ರೆಡ್‌ ಕಾರ್ಪೆಟ್‌ ಹಾಕಿ ನಮ್ಮ ಮೇಲೆ ಹೂವು ಚೆಲ್ಲಿ ಆಂಬುಲೆನ್ಸ್‌ನಲ್ಲಿ ಕಳುಹಿಸಿದರು. ಅಲ್ಲಿಯವರೆಗೆ ನೆಮ್ಮದಿಯಾಗಿದ್ದೆವು. ಆದರೆ ಕೆಟಿಜೆ ನಗರ ತಲುಪುತ್ತಿದ್ದಂತೆ ಮನದಲ್ಲಿ ಮೂಡಿದ್ದ ಎಲ್ಲ ಸಂಭ್ರಮ ಇಳಿದುಹೋಯಿತು’ ಎಂದು ವಿವರಿಸಿದರು.

‘ಕೆಟಿಜೆ ನಗರಕ್ಕೆ ಬರುವುದೇ ಬೇಡ ಎಂದು ದಿನಾ ಅಕ್ಕಾ, ಆಂಟಿ ಅನ್ನುತ್ತಿದ್ದವರೇ ಹೇಳಿದಾಗ ನನಗೆ ಕಣ್ಣೀರು ಬಂತು. ಬದುಕಿನಾದ್ಯಂತ ಬಹಳ ಕಷ್ಟ ಪಟ್ಟವಳು ನಾನು. ಹುಟ್ಟಿ ಐದು ವರ್ಷ ಆಗಿದ್ದಾಗ ಒಂದು ಬಾರಿ ಬಿದ್ದಿದ್ದೆನಂತೆ. ಒಂದು ಕಾಲಿನ ಸ್ವಾಧೀನ ಕಳೆದುಕೊಂಡೆ. ಅಪ್ಪನೇ ಔಷಧ ಮಾಡಿದರು. ಕಷ್ಟಪಟ್ಟು ಓದಿದೆ. ಟಿಸಿಎಚ್‌ ಮಾಡಿದೆ. ಮದುವೆಯಾದ ಮೇಲೂ ಕಷ್ಟ ಕಡಿಮೆಯಾಗಲಿಲ್ಲ. ಬೀಡಿ ಕಟ್ಟಿ ಮನೆಯ ಬಾಡಿಗೆ ನೀಡಿ, ಮಗಳನ್ನು ಸಾಕಿದೆ. ಆನಂತರ ನನಗೆ ಕೆಲಸ ಸಿಕ್ಕಿತು. ನಂತರ ಸ್ವಂತ ಮನೆ ಖರೀದಿ ಮಾಡಿದೆ.
ಹಾಗಾಗಿ ಕಷ್ಟಗಳು ನನಗೆ ಹೊಸತಲ್ಲ. ಆದರೆ ಯಾರಿಗೂ ತೊಂದರೆ ಮಾಡದ ನಾನು ಈ ತರಹ ಅಪಮಾನ ಅನುಭವಿಸಿದ್ದು ಮಾತ್ರ ಹೊಸತು’ ಎಂದು ನಿಟ್ಟುಸಿರು ಬಿಟ್ಟರು.

‘ಇನ್‌ಸ್ಪೆಕ್ಟರ್‌ ಬಂದು ನಿಮಗೆ ತೊಂದರೆಯಾದರೆ ಹೇಳಿ ಎಂದು ತಿಳಿಸಿ, ಸುತ್ತಮುತ್ತಲಿನವರಿಗೆ ಬುದ್ಧಿ ಹೇಳಿದ್ದರಿಂದ ಎಲ್ಲರೂ ಸುಮ್ಮನಾಗಿದ್ದಾರೆ. ನನ್ನ ಶತ್ರುಗಳಿಗೂ ಇಂಥ ಅಪಮಾನ ಆಗದಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುವೆ’ ಎಂದು ನಿಡುಸುಯ್ದರು.

‘ಸಾಯುವ ಯೋಚನೆ ಬಂದಿತ್ತು’

‘ನಾನು ಆಂಬುಲೆನ್ಸ್‌ನಲ್ಲಿ ಬರುವ ಬದಲು ಆಟೊದಲ್ಲೋ, ಸಂಬಂಧಿಕರ ಬೈಕಲ್ಲೋ ಬಂದಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲವೇನೋ? ಆನಂತರ ಪೊಲೀಸರು ಬಂದು ಮನೆಗೆ ಹೋಗುವಂತೆ ಮಾಡಿದರು. ಆದರೂ ಈ ಅಪಮಾನದಿಂದ ಐದು ದಿನಗಳ ಕಾಲ ಮನೆಯಿಂದ ಹೊರಗೆ ಬರಲಿಲ್ಲ. ಸತ್ತು ಬಿಡೋಣ ಎನಿಸಿತ್ತು. ಆದರೆ ಮೊಮ್ಮಗಳ ಮುಖವೇ ಕಣ್ಣಮುಂದೆ ಬರುತ್ತಿದ್ದುದರಿಂದ ಆ ಯೋಚನೆ ಬಿಟ್ಟೆ’ ಎಂದು ಶಿಕ್ಷಕಿ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.