
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ 20 ಮತ್ತು 31ನೇ ವಾರ್ಡ್ ವ್ಯಾಪ್ತಿಯಲ್ಲಿ ನೂತನ ವಾಚನಾಲಯ ತೆರೆಯಲು ಸಜ್ಜಾಗಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಿರ್ವಹಣೆಯ ಹೊಣೆಯನ್ನು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಹೆಗಲಿಗೆ ಒಪ್ಪಿಸಲು ಮುಂದಾಗಿದೆ.
ವಾರ್ಡ್ ಸಂಖ್ಯೆ 20ರ ವ್ಯಾಪ್ತಿಯ ಎಚ್.ಕೆ.ಆರ್. ನಗರ ಹಾಗೂ ವಾರ್ಡ್ ಸಂಖ್ಯೆ 31ರ ಎಸ್‌ಒಜಿ ಕಾಲೊನಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಿರ್ಮಾಣಗೊಂಡ ಕಟ್ಟಡಗಳು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಗೊಂಡಿವೆ. ವಾಚನಾಲಯಕ್ಕೆ ಸಿಬ್ಬಂದಿ ನೇಮಕಾತಿಗೆ ಪರ್ಯಾಯವಾಗಿ ವಾರ್ಡ್ ವ್ಯಾಪ್ತಿಯ ಯುವ ಮಂಡಳಿ ಅಥವಾ ಸ್ವಯಂ ಸೇವಾ ಸಂಸ್ಥೆಯನ್ನು ಗುರುತಿಸುವ ಪ್ರಯತ್ನ ಆರಂಭವಾಗಿದೆ.
‘ವಾಚನಾಲಯಕ್ಕೆ ಅಗತ್ಯ ಪೀಠೋಪಕರಣ, ಪತ್ರಿಕೆಗಳಿಗೆ ಅನುಮೋದನೆ ಸಿಕ್ಕಿದೆ. ನಿರ್ವಹಣೆಗೆ ಸ್ವಯಂ ಸೇವಾ ಸಂಸ್ಥೆಗಳನ್ನು ಪತ್ತೆ ಮಾಡಲಾಗುತ್ತಿದೆ. ಸಂಸ್ಥೆಗಳು ಈ ಕಾರ್ಯವನ್ನು ಸೇವೆಯ ರೀತಿಯಲ್ಲಿ ಮಾಡಬೇಕು. ಇದಕ್ಕೆ ಗೌರವಧನ, ಸಂಭಾವನೆ ಇರುವುದಿಲ್ಲ. ಆಸಕ್ತ ಸಂಸ್ಥೆಗಳು ಮುಂದೆ ಬಂದರೆ ಒಡಂಬಡಿಕೆ ಮಾಡಿಕೊಂಡು ಜವಾಬ್ದಾರಿ ನೀಡಲಾಗುತ್ತದೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ ಮಾಹಿತಿ ನೀಡಿದರು.
ನಗರದಲ್ಲಿ 9 ಶಾಖಾ ಗ್ರಂಥಾಲಯ, 1 ಕೇಂದ್ರ ಗ್ರಂಥಾಲಯ ಹಾಗೂ 10 ವಾಚನಾಲಯಗಳಿವೆ. ಇನ್ನೂ ಎರಡು ವಾಚನಾಲಯ ತೆರೆದರೆ ಈ ಸಂಖ್ಯೆ 12ಕ್ಕೆ ಏರಿಕೆಯಾಗಲಿದೆ. ಇನ್ನೂ 8 ವಾರ್ಡ್‌ಗಳಲ್ಲಿನ ‘ರೀಡಿಂಗ್ ರೂಂ’ಗಳನ್ನು ಮಹಾನಗರ ಪಾಲಿಕೆ ನಿರ್ವಹಿಸುತ್ತಿದೆ. ವಾಚನಾಲಯ ಹಾಗೂ ‘ರೀಡಿಂಗ್ ರೂಂ’ಗಳಲ್ಲಿ ಪತ್ರಿಕೆ ಓದಲು ಮಾತ್ರ ಅವಕಾಶವಿದೆ.
ವಾಚನಾಲಯಗಳು ನಿತ್ಯ ಬೆಳಿಗ್ಗೆ 8.30ರಿಂದ 11.30 ಮತ್ತು ಸಂಜೆ 4 ರಿಂದ ರಾತ್ರಿ 8ರವರೆಗೆ ತೆರೆದಿರುತ್ತವೆ. ಕೆಟಿಜೆ ನಗರ, ದೇವರಾಜ ಅರಸು ಬಡಾವಣೆ, ಐನಳ್ಳಿ, ಕಾರಾಗೃಹ, ಜಿಲ್ಲಾಡಳಿತ ಭವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಆವರಣ ಸೇರಿ ಹಲವೆಡೆ ವಾಚನಾಲಯಗಳಿವೆ. ಜಿಲ್ಲಾಡಳಿತ ಭವನ ಸೇರಿ ಕೆಲವೆಡೆ ಸಿಸಿಟಿವಿ ಕ್ಯಾಮೆರಾ ಮೂಲಕವೇ ನಿರ್ವಹಣೆ ಮಾಡಲಾಗುತ್ತಿದೆ.
ವಾಚನಾಲಯಗಳಲ್ಲಿ ದಿನಪತ್ರಿಕೆ ವಾರಪತ್ರಿಕೆ ಮಾಸಪತ್ರಿಕೆಗಳಿರುತ್ತವೆ. ಅನೇಕರು ನಿತ್ಯವೂ ಭೇಟಿ ನೀಡಿ ಪತ್ರಿಕೆಗಳನ್ನು ಓದುತ್ತಿದ್ದಾರೆ. ಕಟ್ಟಡ ಲಭ್ಯವಾದ ಸ್ಥಳಗಳಲ್ಲಿ ವಾಚನಾಲಯ ತೆರೆಯಲು ಅವಕಾಶವಿದೆಪಿ.ಆರ್. ತಿಪ್ಪೇಸ್ವಾಮಿ ಉಪನಿರ್ದೇಶಕ ಸಾರ್ವಜನಿಕ ಗ್ರಂಥಾಲಯ ಇಲಾಖೆ
ಸಿಲ್ವರ್ ಜ್ಯುಬಿಲಿ ಕಟ್ಟಡಕ್ಕೆ ಅನುಮೋದನೆ
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಓದುಗರು ಭೇಟಿ ನೀಡುವ ‘ಸಿಲ್ವರ್ ಜ್ಯುಬಿಲಿ’ ಗ್ರಂಥಾಲಯದ ವಿಸ್ತರಣೆಗೆ ಸಿದ್ಧತೆಗಳು ಆರಂಭವಾಗಿವೆ. ₹ 1.22 ಕೋಟಿ ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ನಗರ ಗ್ರಂಥಾಲಯ ಪ್ರಾಧಿಕಾರ ಅನುಮೋದನೆ ನೀಡಿದೆ. ಬಡಾವಣೆ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಈ ಗ್ರಂಥಾಲಯ 14039 ಸದಸ್ಯರನ್ನು ಹೊಂದಿದೆ. ನಿತ್ಯ 600ಕ್ಕೂ ಅಧಿಕ ಓದುಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಈಗಿರುವ ಕಟ್ಟಡದಲ್ಲಿ ಎಲ್ಲರಿಗೂ ಸ್ಥಳಾವಕಾಶ ಕಲ್ಪಿಸಲು ಕಷ್ಟವಾಗುತ್ತಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾಗಿರುವ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವಕಾಶ ಕಲ್ಪಿಸಿದ್ದಾರೆ.
Cut-off box - ₹ 2 ಕೋಟಿ ಗ್ರಂಥಾಲಯ ಕರ ಜಿಲ್ಲೆಯಲ್ಲಿ ವಾರ್ಷಿಕ ₹ 2 ಕೋಟಿಗೂ ಅಧಿಕ ಗ್ರಂಥಾಲಯ ಕರ ಸಂಗ್ರಹವಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳು ಈ ಸೆಸ್‌ನ್ನು ನಿಯಮಿತವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನೀಡುತ್ತಿವೆ. ಪುಸ್ತಕ ಪೀಠೋಪಕರಣಕ್ಕೆ ಶೇ 60 ಸಿಬ್ಬಂದಿ ವೇತನಕ್ಕೆ ಶೇ 20 ನಿರ್ವಹಣೆಗೆ ಶೇ 10 ಕಟ್ಟಡ ಹಾಗೂ ಇತರೆ ವೆಚ್ಚಕ್ಕೆ ತಲಾ ಶೇ 5ರಷ್ಟು ವಿನಿಯೋಗ ಮಾಡಲಾಗುತ್ತಿದೆ. ‘ನಗರ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ತೆರಿಗೆಯಲ್ಲಿ ₹ 1ರಲ್ಲಿ 6 ಪೈಸೆ ಗ್ರಂಥಾಲಯ ಕರವಾಗಿರುತ್ತದೆ. ಮಹಾನಗರ ಪಾಲಿಕೆಯಿಂದ ಪ್ರತಿ ವರ್ಷ ಸರಾಸರಿ ₹ 1.5 ಕೋಟಿ ಹಾಗೂ ಹರಿಹರ ಹೊನ್ನಾಳಿ ಜಗಳೂರು ಚನ್ನಗಿರಿ ಮಲೇಬೆನ್ನೂರು ನ್ಯಾಮತಿ ಸ್ಥಳೀಯ ಸಂಸ್ಥೆಯಿಂದ ಅಂದಾಜು ₹ 50 ಲಕ್ಷ ಗ್ರಂಥಾಲಯ ಕರ ಸಂಗ್ರಹವಾಗುತ್ತದೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.