ADVERTISEMENT

ದಾವಣಗೆರೆ | ಬರದ ನಾಡಿಗೆ ರೈಲು: ಗರಿಗೆದರಿದ ನಿರೀಕ್ಷೆ

ಕೊಟ್ಟೂರು–ಜಗಳೂರು–ಚಿತ್ರದುರ್ಗ ಹೊಸ ರೈಲು ಮಾರ್ಗದ ಸರ್ವೇ: ಸಚಿವ ಸೋಮಣ್ಣ ಭರವಸೆ

ಅಮೃತ ಕಿರಣ ಬಿ.ಎಂ.
Published 14 ಮೇ 2025, 5:45 IST
Last Updated 14 ಮೇ 2025, 5:45 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ದಾವಣಗೆರೆ: ಜಿಲ್ಲೆಯ ಅಭಿವೃದ್ಧಿಗೆ ಬಲ ತುಂಬಬಲ್ಲ ರೈಲು ಮಾರ್ಗದ ವಿಸ್ತರಣೆಯ ಸುಳಿವು ಸಿಕ್ಕಿದೆ. ದಾವಣಗೆರೆ ಹಾಗೂ ಹರಿಹರ ತಾಲ್ಲೂಕುಗಳಲ್ಲಿ ಹಾದು ಹೋಗಿರುವ ರೈಲು ಮಾರ್ಗವು ಜಿಲ್ಲೆಯ ಮತ್ತೊಂದು ತಾಲ್ಲೂಕನ್ನು ಆವರಿಸಿಕೊಳ್ಳಲಿದೆ. ಹಿಂದುಳಿದ ತಾಲ್ಲೂಕು ಎಂದು ಕರೆಸಿಕೊಂಡಿರುವ ಜಗಳೂರು ಮಂದಿನ ದಿನಗಳಲ್ಲಿ ರೈಲ್ವೆ ಸಂಪರ್ಕ ಜಾಲಕ್ಕೆ ಸೇರಿಸಿಕೊಳ್ಳಲಿದೆ.

ADVERTISEMENT

ಸುದೀರ್ಘ ಅವಧಿಯ ಬೇಡಿಕೆಯಾದ ಕೊಟ್ಟೂರು–ಜಗಳೂರು– ಚಿತ್ರದುರ್ಗ ರೈಲು ಮಾರ್ಗದ ಯೋಜನೆಗೆ ರೆಕ್ಕೆಪುಕ್ಕ ಬಂದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನಿಂದ ಶುರುವಾಗಿ, ಜಗಳೂರು ಪಟ್ಟಣವೂ ಒಳಗೊಡಂತೆ ತಾಲ್ಲೂಕನ್ನು ಹಾದು ಚಿತ್ರದುರ್ಗವನ್ನು ಸಂಪರ್ಕಿಸುವ ಹೊಸ ಮಾರ್ಗವು ಅಭಿವೃದ್ಧಿಗೆ ಹೊಸ ಕಾಣ್ಕೆ ನೀಡಬಹುದೆಂಬ ಆಶಾವಾದವನ್ನು ಹುಟ್ಟುಹಾಕಿದೆ.

ವಿಜಯನಗರ ಜಿಲ್ಲೆಯ ಉಜ್ಜಿನಿಯಲ್ಲಿ ಈಚೆಗೆ ನಡೆದ ಜಾತ್ರೆಯಲ್ಲಿ ಭಾಗಿಯಾಗಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಹೊಸ ಮಾರ್ಗದ ಕನಸಿಗೆ ಜೀವ ನೀಡಿದ್ದಾರೆ. ಕೊಟ್ಟೂರು–ಜಗಳೂರು– ಚಿತ್ರದುರ್ಗ ನೂತನ ರೈಲು ಮಾರ್ಗದ ಯೋಜನೆಯ ಕಾರ್ಯಸಾಧ್ಯತೆ ಸಮೀಕ್ಷೆ ಮಾಡಲು ಸದ್ಯದಲ್ಲೇ ಆದೇಶ ನೀಡುವುದಾಗಿ ಹೇಳಿರುವುದು ವಿಜಯನಗರ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

ಕಡಿಮೆ ಮಳೆ ಬೀಳುವ ಜಗಳೂರು ತಾಲ್ಲೂಕಿನ ಅಭಿವೃದ್ಧಿಗೆ ಪೂರಕವಾಗಬಲ್ಲ ಬೃಹತ್‌ ನೀರಾವರಿ ಯೋಜನೆಗಳು, ಕೈಗಾರಿಕೆಗಳು ಇಲ್ಲ. ಅಂತೆಯೇ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದುಳಿಯಲು ಕಾರಣವಾಗಿದೆ. ರೈಲು ಮಾರ್ಗ ಅನುಷ್ಠಾನಗೊಂಡಲ್ಲಿ, ಸಾರಿಗೆ ಸಂಪರ್ಕದಿಂದ ಆರ್ಥಿಕ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆ ಹಾಗೂ ಉದ್ಯೋಗಾವಕಾಶಗಳು ಹೆಚ್ಚಿ, ತಾಲ್ಲೂಕಿನ ಅಭಿವೃದ್ಧಿಗೆ ಬಲ ಸಿಗುತ್ತದೆ ಎಂಬುದು ಇಲ್ಲಿನ ಜನರ ನಿರೀಕ್ಷೆ.

ಹೊಸ ಮಾರ್ಗ: ಏನು ಲಾಭ?

ಭದ್ರಾ ಮೇಲ್ದಂಡೆ ಯೋಜನೆಯ ಅಡಿ ತಾಲ್ಲೂಕಿನ 57 ಕೆರೆಗಳನ್ನು ತುಂಬಿಸುವ ಯೋಜನೆ ಶುರುವಾದ ಬಳಿಕ ಜಗಳೂರಿನಲ್ಲಿ ನೀರಾವರಿ ಪ್ರದೇಶ ವಿಸ್ತರಣೆಯಾಗುತ್ತಿದೆ. ಇದರಿಂದ ವಾಣಿಜ್ಯ ಬೆಳೆ ಬೆಳೆಯುವ ಪ್ರಮಾಣವೂ ಅಧಿಕವಾಗುತ್ತದೆ. ಕೊಟ್ಟೂರು ಹಾಗೂ ಜಗಳೂರು ತಾಲ್ಲೂಕುಗಳಲ್ಲಿ ಮುಖ್ಯವಾಗಿ ಬೆಳೆಯುವ ಮೆಕ್ಕೆಜೋಳ, ಹತ್ತಿ, ಶೇಂಗಾ, ಈರುಳ್ಳಿ ಹಾಗೂ ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸಲು ರೈತರು ಹಾಗೂ ಸ್ಥಳೀಯ ಉದ್ಯಮಿಗಳಿಗೆ ರೈಲು ಸೌಲಭ್ಯದಿಂದ ಸುಲಭವಾಗಲಿದೆ.

ನೀರು ಹಾಗೂ ರೈಲ್ವೆ ಸಂಪರ್ಕ ಸುಲಭವಾಗಿ ದೊರೆತರೆ, ಈವರೆಗೂ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದ ಕೈಗಾರಿಕೆಗಳು ತಾಲ್ಲೂಕಿನತ್ತ ಮುಖ ಮಾಡಲಿವೆ. ಇದರಿಂದ ಇಲ್ಲಿನ ನಿರುದ್ಯೋಗಿಗಳಿಗೆ ಸ್ಥಳೀಯವಾಗಿಯೇ ಕೆಲಸ ದೊರೆಯಬಹುದು ಎಂದು ನಿವೃತ್ತ ಪ್ರಾಂಶುಪಾಲ, ಜಗಳೂರಿನ ಯಾದವ ರೆಡ್ಡಿ ಅಭಿಪ್ರಾಯಪಡುತ್ತಾರೆ.

ನಗರಗಳ ಸಂಪರ್ಕ ಸೇತು:

ಕೊಟ್ಟೂರಿನ ಮೂಲಕ ಹೊಸಪೇಟೆಗೆ ಈಗಾಗಲೇ ರೈಲು ಸಂಪರ್ಕವಿದೆ. ಕೊಟ್ಟೂರು– ಚಿತ್ರದುರ್ಗ ನಡುವಿನ ಅಂದಾಜು 78 ಕಿ.ಮೀ. ಉದ್ದದ ಹೊಸ ಮಾರ್ಗ ನಿರ್ಮಾಣವಾದ ಬಳಿಕ, ಚಿತ್ರದುರ್ಗ–ಹೊಸಪೇಟೆ ನಡುವಿನ ಸಂಪರ್ಕ ಸಾಧ್ಯವಾಗಲಿದೆ. ಈ ಭಾಗದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಕೊಟ್ಟೂರು ಹಾಗೂ ಉಜ್ಜಿನಿಯನ್ನು ಹಾದುಹೋಗುವ ಜತೆಗೆ, ಹೊಸಪೇಟೆ ಸಮೀಪದ ಐತಿಹಾಸಿಕ ಹಂಪಿ ಹಾಗೂ ಚಿತ್ರದುರ್ಗಗಳನ್ನು ಬೆಸೆಯುತ್ತದೆ. ಇದರಿಂದ ಪ್ರವಾಸೋದ್ಯಮಕ್ಕೂ ನೆರವಾಗಲಿದೆ ಎಂದು ಕೊಟ್ಟೂರಿನ ಶಿಕ್ಷಕ ಎಸ್.ಎಂ. ಮರುಳಸಿದ್ದೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.