
ನ್ಯೂಜಿಲೆಂಡ್ ವರನ ಕೈಹಿಡಿದ ಕನ್ನಡತಿ
ದಾವಣಗೆರೆ: ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಬುಧವಾರ ನೆರವೇರಿದ ವಿವಾಹದಲ್ಲಿ ಚಳ್ಳಕೆರೆಯ ಯುವತಿಯೊಬ್ಬರು ನ್ಯೂಜಿಲೆಂಡ್ ವರನ ಕೈಹಿಡಿದರು. ಹಿಂದೂ ಸಂಪ್ರದಾಯದಂತೆ ವಧು–ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಡಾ.ಪೂಜಾ ನಾಗರಾಜ್ ಹಾಗೂ ನ್ಯೂಜಿಲೆಂಡ್‌ನ ಕ್ಯಾಂಬೆಲ್ ವಿಲ್‌ವರ್ಥ್ ಅವರು ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾದರು. ಡಾ.ಪೂಜಾ ಅವರು ಕೆಲ ವರ್ಷಗಳಿಂದ ನ್ಯೂಜಿಲೆಂಡ್‌ನಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಪೂಜಾ ಅವರ ತಂದೆ ನಾಗರಾಜ್ 2005ರಿಂದ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದಾರೆ. ವೈದ್ಯಕೀಯ ಶಿಕ್ಷಣ ಪೂರೈಸಿದ ಬಳಿಕ ಪೂಜಾ ಕೂಡ ವಿದೇಶದಲ್ಲಿ ನೆಲೆ ಕಂಡುಕೊಂಡಿದ್ದರು. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಕ್ಯಾಂಬೆಲ್ ಜೊತೆಗಿನ ಪರಿಚಯ ಪರಸ್ಪರ ಪ್ರೀತಿಗೆ ತಿರುಗಿತ್ತು. ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ ಬಳಿಕ ವಿವಾಹವಾಗಲು ದಾವಣಗೆರೆಗೆ ಮರಳಿದ್ದರು.
ಹಿಂದೂ ಸಂಪ್ರದಾಯದ ಪ್ರಕಾರ ಅರಿಶಿನ ಶಾಸ್ತ್ರ, ಧಾರೆ, ಅರುಂಧತಿ ನಕ್ಷತ್ರ ನೋಡುವ ವಿಧಾನಗಳು ನೆರವೇರಿದವು. ಹಸೆಮಣೆಯ ಮೇಲೆ ಕುಳಿತಿದ್ದ ವಧುವಿಗೆ ನ್ಯೂಜಿಲೆಂಡ್ ವರ ತಾಳಿಕಟ್ಟಿದಾಗ ಗಟ್ಟಿಮೇಳ ಮೊಳಗಿತು. ಸಂಬಂಧಿಕರು, ಸ್ನೇಹಿತರು ಅಕ್ಷತೆ ಹಾಕಿ ಹರಸಿದರು.
‘20 ವರ್ಷಗಳಿಂದ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದೇನೆ. ಸಂಬಂಧಿಕರು, ಸಹೋದರರು ಇಲ್ಲಿಯೇ ಇದ್ದಾರೆ. ಹೀಗಾಗಿ, ಮದುವೆಯನ್ನು ದಾವಣಗೆರೆಯಲ್ಲಿ ಆಯೋಜಿಸಿದೆವು’ ಎಂದು ವಧು ತಂದೆ ನಾಗರಾಜ್ ತಿಳಿಸಿದರು.
ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿಯೇ. ಇಲ್ಲಿನ ಸಂಸ್ಕೃತಿ ತುಂಬಾ ಇಷ್ಟ. ದಾವಣಗೆರೆಯಲ್ಲಿ ಮದುವೆ ಆಗಬೇಕು ಎಂಬ ಅಪೇಕ್ಷೆಗೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದವುಡಾ.ಪೂಜಾ ನಾಗರಾಜ್, ವಧು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.