ಸಾಸ್ವೆಹಳ್ಳಿ: ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.
ಸಾಸ್ವೆಹಳ್ಳಿ ಕರ್ನಾಟಕ ಬ್ಯಾಂಕ್ ಎದುರು ಹಾದು ಹೋಗಿರುವ ರಾಜಕಾಲುವೆಯಲ್ಲಿ ಕಸ ಕಟ್ಟಿಕೊಂಡಿದ್ದರಿಂದ ನೀರು ರಸ್ತೆಯ ಮೇಲೆ ಹರಿದಿದೆ.
ಸಾಸ್ವೆಹಳ್ಳಿಯ ಕುಂಬಾರ್ ಕೆರೆ ತುಂಬಿ ಕೋಡಿ ಬಿದ್ದ ಪರಿಣಾಮ ನೀರು ರಾಜಕಾಲುವೆ ಮೂಲಕ ನುಗ್ಗಿದ್ದು, ಕೆಲ ಮನೆಗಳ ಹೊಸ್ತಿಲ ತನಕ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಗ್ರಾಮ ಆಡಳಿತ ಜೆಸಿಬಿ ಮೂಲಕ ಕಸ ತೆಗೆಯಿಸಿ ಸ್ವಚ್ಛಗೊಳಿಸಿದ್ದಾರೆ.
ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಗ್ರಾಮದಲ್ಲಿ ಹಾಲಮ್ಮ ವೀರಭದ್ರಪ್ಪ ಮತ್ತು ಸುನೀತಾ ರುದ್ರಪ್ಪ ಅವರ ಮನೆಗಳು ಹಾನಿಗೀಡಾಗಿವೆ. ಹೊಸಹಳ್ಳಿ 2, ಹೊಸಹಳ್ಳಿ ಕ್ಯಾಂಪ್ 1, ಹುರಳಹಳ್ಳಿ 2, ರಾಂಪುರ 2, ಸಾಸ್ವೆಹಳ್ಳಿ 2, ಬೆನಕನಹಳ್ಳಿ 1, ಲಿಂಗಾಪುರ 1, ಬೀರಗೊಂಡನಹಳ್ಳಿ 1, ಹನಗವಾಡಿ 1 ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂದು ಸಾಸ್ವೆಹಳ್ಳಿ ಆರ್‌ಐ ದಿನೇಶ್ ಬಾಬು ಮಾಹಿತಿ ನೀಡಿದರು.
ಸಾಸ್ವೆಹಳ್ಳಿ ಹೋಬಳಿಯಲ್ಲಿ ಭಾನುವಾರ 91.2 ಮಿ.ಮೀ. ಮಳೆಯಾಗಿದ್ದು, ಬಹುತೇಕ ಕೆರೆಗಳು ತುಂಬಿ ಕೊಡಿ ಬಿದ್ದಿವೆ ಎಂದು ಸಾಸ್ವೆಹಳ್ಳಿ ಉಪತಹಶೀಲ್ದಾರ್ ಚಂದ್ರಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ವಿ.ಎ ಗಳಾದ ಸಂತೋಷ್, ಮಂಜುನಾಥ್, ಮಹಾಬಲೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.