ADVERTISEMENT

ಮಾವು ಬೆಳೆಯಲ್ಲಿ ಯಶಸ್ಸು ಸಾಧಿಸಿರುವ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 4:23 IST
Last Updated 13 ಏಪ್ರಿಲ್ 2022, 4:23 IST
ಬಸವಾಪಟ್ಟಣದ ಶಿಕ್ಷಕ ಏಜಾಜ್ ಅಹಮದ್ ಬೆಳೆಸಿರುವ ಮಾವಿನ ಗಿಡಗಳು.
ಬಸವಾಪಟ್ಟಣದ ಶಿಕ್ಷಕ ಏಜಾಜ್ ಅಹಮದ್ ಬೆಳೆಸಿರುವ ಮಾವಿನ ಗಿಡಗಳು.   

ಬಸವಾಪಟ್ಟಣ: ಇಲ್ಲಿನ ಶಿಕ್ಷಕ ಏಜಾಜ್‌ ಅಹಮದ್‌ ಅವರು ತಮ್ಮ ತೋಟದಲ್ಲಿನ ಅಡಿಕೆ ಗಿಡಗಳ ಮಧ್ಯ ಬಾದಾಮಿ ತಳಿಯ ಮಾವಿನ ಸಸಿಗಳನ್ನು ಬೆಳೆಸಿ, ಉತ್ತಮ ಇಳುವರಿ ಪಡೆದು ಯಶಸ್ಸು ಸಾಧಿಸಿದ್ದಾರೆ.

ಇಲ್ಲಿನ ಶೇಕ್‌ ಬುಡೇನ್‌ ಸಾಹೇಬರ ಪುತ್ರ ಏಜಾಜ್‌ ಅಹಮದ್‌ ಅವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ಅಡಿಕೆ ಮತ್ತು ಮಾವಿನ ಕೃಷಿಯಲ್ಲಿ ತೊಡಗಿದ್ದಾರೆ. ತಮಗೆ ಪಿತ್ರಾರ್ಜಿತವಾಗಿ ಬಂದಿರುವ ಐದೂವರೆ ಎಕರೆ ಜಮೀನಿನಲ್ಲಿ 16 ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ಹಾಕಿದ್ದರು. ಅದರ ನಡುವೆಯೇ ಮಾವಿನ ಕೃಷಿ ಕೈಗೊಂಡಿದ್ದಾರೆ.

‘ಅಡಿಕೆ ಗಿಡಗಳು ಚೆನ್ನಾಗಿ ಬೆಳೆಯ ತೊಡಗಿದಂತೆ ಮಹಾರಾಷ್ಟ್ರದ ರತ್ನಗಿರಿಯಿಂದ 150 ಬಾದಾಮಿ ತಳಿಯ ಮಾವಿನ ಸಸಿಗಳನ್ನು ತರಿಸಿ 10 ಅಡಿ ಅಂತರದಲ್ಲಿ ನಾಟಿ ಮಾಡಿದ್ದು, ಕಳೆದ 11 ವರ್ಷಗಳಿಂದ ಮಾವಿನ ಫಸಲನ್ನು ಪಡೆಯುತ್ತಿದ್ದೇನೆ. ವರ್ಷ ವರ್ಷಕ್ಕೂ ಹೆಚ್ಚು ಇಳುವರಿ ಬರುತ್ತಿದೆ. ಮಾವಿನ ಗಿಡಗಳಿಗೆ ಕೇವಲ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ಬಳಸುತ್ತಿದ್ದೇನೆ. ಮೂರು ಕೊಳವೆಬಾವಿಗಳಿಂದ ಡ್ರಿಪ್‌ ಮೂಲಕ ನೀರು ಹಾಯಿಸುತ್ತಿದ್ದೇನೆ. ಗಿಡಗಳು ಈಗ ಎಂಟು ಅಡಿ ಎತ್ತರ ಬೆಳೆದು ಅಗಲವಾಗಿ ಹರಡಿಕೊಂಡು ಸಾಕಷ್ಟು ಕಾಯಿಗಳನ್ನು ಬಿಡುತ್ತಿವೆ’ ಎನ್ನುತ್ತಾರೆ ಶಿಕ್ಷಕ ಏಜಾಜ್‌ ಅಹಮದ್‌.

ADVERTISEMENT

‘ಈ ವರ್ಷವೂ ನಮ್ಮ ತೋಟದಲ್ಲಿ ಮಾವಿನ ಫಸಲು ಉತ್ತಮವಾಗಿ ಬರುತ್ತಿದೆ. ಈ ಬೆಳೆಗೆ ವರ್ಷಕ್ಕೆ ಕೇವಲ ₹ 40 ಸಾವಿರ ಖರ್ಚು ಮಾಡುತ್ತಿದ್ದು, ಕಳೆದ ವರ್ಷ ₹ 4 ಲಕ್ಷಕ್ಕೆ ಮಾರಾಟ ಮಾಡಿದ್ದೆ. ಇಷ್ಟು ವರ್ಷ ಮಾವಿನ ಕಾಯಿಗಳು ಬಲಿಯುತ್ತಿದ್ದಂತೆ ವ್ಯಾಪಾರಿಗಳಿಗೆ ಇಡೀ ಫಸಲನ್ನು ಗುತ್ತಿಗೆ ಆಧಾರದಲ್ಲಿ ಮಾರಾಟ ಮಾಡುತ್ತಿದ್ದೆ. ಆದರೆ, ಈ ವರ್ಷ ರಾಜ್ಯದಲ್ಲಿ ಮಾವಿನ ಫಸಲು ತುಂಬಾ ಕಡಿಮೆ ಇದ್ದು, ಪೂರೈಕೆ ಕಡಿಮೆಯಾಗಿ ದರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮಹಾರಾಷ್ಟ್ರದ ಮುಂಬೈ, ಪೂನಾ, ಸಾಂಗ್ಲಿ, ಮೀರಜ್‌ಗಳಿಗೆ ಇಲ್ಲಿಂದ ನೇರವಾಗಿ ಮಾವಿನ ಹಣ್ಣುಗಳನ್ನು ಕಳುಹಿಸಲು ನಿರ್ಧರಿಸಿದ್ದೇನೆ’ ಎನ್ನುತ್ತಾರೆ ಅವರು.

‘ಇಲ್ಲಿನ ಮಣ್ಣು ಮಾವಿನ ಫಸಲಿಗೆ ಸೂಕ್ತವಾಗಿದ್ದು, ಉತ್ತಮ ತಳಿಯ ಸಸಿಗಳನ್ನು ಕೇವಲ ಐದು ವರ್ಷ ಚೆನ್ನಾಗಿ ನೋಡಿಕೊಂಡರೆ ಸಾಕು ನಂತರದಿಂದ ಉತ್ತಮ ಫಲ ಪಡೆಯಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅವರು.

ಏಜಾಜ್‌ ಅಹಮದ್‌ ಅವರು ಚನ್ನಗಿರಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆ, ಕನ್ನಡಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಭಾ ಪುರಸ್ಕಾರಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.