ADVERTISEMENT

ಪರ್ಯಾಯ ಬೆಳೆಯಿಂದ ಉತ್ತಮ ಆದಾಯ

3 ಎಕರೆ ಜಮೀನಿಗೆ ಜೀವಾಮೃತ ಬಳಸಿ ಕೃಷಿಯಲ್ಲಿ ತೊಡಗಿರುವ ರೈತ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 4:58 IST
Last Updated 18 ಆಗಸ್ಟ್ 2021, 4:58 IST
ಚನ್ನಗಿರಿ ತಾಲ್ಲೂಕು ಮಾಚನಾಯಕನಹಳ್ಳಿ ಗ್ರಾಮದಲ್ಲಿ 3 ಎಕರೆ ಜಮೀನಿನಲ್ಲಿ ಜೀವಾಮೃತ ಬಳಸಿ, ಪರ್ಯಾಯ ಬೆಳೆಗಳನ್ನು ಬೆಳೆಯುತ್ತಿರುವ ರೈತ ನಿಜಲಿಂಗಪ್ಪ.
ಚನ್ನಗಿರಿ ತಾಲ್ಲೂಕು ಮಾಚನಾಯಕನಹಳ್ಳಿ ಗ್ರಾಮದಲ್ಲಿ 3 ಎಕರೆ ಜಮೀನಿನಲ್ಲಿ ಜೀವಾಮೃತ ಬಳಸಿ, ಪರ್ಯಾಯ ಬೆಳೆಗಳನ್ನು ಬೆಳೆಯುತ್ತಿರುವ ರೈತ ನಿಜಲಿಂಗಪ್ಪ.   

ಚನ್ನಗಿರಿ: ತೋಟದೊಳಗೆ ಕಾಲಿಟ್ಟರೆ ಸಾಕು ವಿವಿಧ ಬೆಳೆಗಳು ನಳನಳಿಸುತ್ತಿರುವ ದೃಶ್ಯ. ಇರುವ 3 ಎಕರೆ ಜಮೀನಿನಲ್ಲಿ ಇಷ್ಟೊಂದು ಬೆಳೆಗಳನ್ನು ಹೇಗೆ ಬೆಳೆದಿದ್ದಾರೆ
ಎಂದು ಒಂದು ಕ್ಷಣ ಸೋಜಿಗವಾಗುತ್ತದೆ.

ಇಂದು ಬೇಸಾಯ ಮಾಡುವುದು ತುಂಬಾ ಕಷ್ಟ. ಎಷ್ಟೇ ದುಡಿದರೂ ಬೆಳೆಗೆ ತಕ್ಕಂತೆ ಲಾಭ ಸಿಗುವುದಿಲ್ಲ. ವ್ಯವಸಾಯದ ಸಹವಾಸವೇ ಬೇಡ ಎನ್ನುವ ಮನೋಭಾವ ರೈತರಲ್ಲಿದೆ. ಅದರ ನಡುವೆಯೂಜೀವಾಮೃತ ಬಳಸಿ ಕೃಷಿಯಲ್ಲಿ ತೊಡಗಿರುವ ತಾಲ್ಲೂಕಿನ ಚನ್ನಗಿರಿ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಮಾಚನಾಯಕನಹಳ್ಳಿ ಗ್ರಾಮದ ರೈತ ನಿಜಲಿಂಗಪ್ಪ ಅವರ ಸಾಧನೆ ಇತರರಿಗೆ ಮಾದರಿಯಾಗಿದೆ.

ಸಣ್ಣ ರೈತ ನಿಜಲಿಂಗಪ್ಪ 3 ಎಕರೆ ಜಮೀನಿನಲ್ಲಿ 1 ಎಕರೆ ಅಡಿಕೆ ತೋಟ ಮಾಡಿದ್ದಾರೆ. ಕಳೆದ ವರ್ಷ 15 ಕ್ವಿಂಟಲ್ ಅಡಿಕೆ ಬೆಳೆದಿದ್ದಾರೆ. ಇನ್ನೂ 1 ಎಕರೆ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದು, ಅದು ಫಸಲಿಗೆ ಬರಬೇಕಿದೆ. 15 ಕ್ವಿಂಟಲ್ ಅಡಿಕೆಯಿಂದ ₹ 5 ಲಕ್ಷ ಆದಾಯ ಗಳಿಸಿದ್ದಾರೆ. ಜತೆಗೆ ಪಪ್ಪಾಯ ಗಿಡಗಳನ್ನು ಹಾಕಿ ₹ 30 ಸಾವಿರ ಆದಾಯವನ್ನು ಪಡೆದುಕೊಂಡಿದ್ದಾರೆ.

ADVERTISEMENT

ಅಷ್ಟೇ ಅಲ್ಲದೇ ಅಡಿಕೆ ಗಿಡಗಳಲ್ಲಿ ಕಾಳು ಮೆಣಸು, ಕೋಕೋ, ಕಾಫಿ ಗಿಡ, ಮೆಕ್ಕೆಜೋಳ, ಏಲಕ್ಕಿ, ಲವಂಗ, ಜಾ ಕಾಯಿ ಮುಂತಾದ ಬೆಳೆಗಳನ್ನು ಪರ್ಯಾಯ ಬೆಳೆಯಾಗಿ ಬೆಳೆದಿದ್ದಾರೆ. 20 ಕೆ.ಜಿ. ಕಾಳು ಮೆಣಸು ಬೆಳೆದು
₹ 8 ಸಾವಿರ ಆದಾಯ‌ ಗಳಿಸಿದ್ದಾರೆ.10 ಕೆ.ಜಿ. ಕೋಕೋ ಹಾಗೂ 5 ಕೆ.ಜಿ. ಕಾಫಿ ಬೀಜವನ್ನು ಉತ್ಪಾದನೆ ಮಾಡಿದ್ದಾರೆ.

‘ಕೃಷಿಯಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂದು ಇರುವ ಜಮೀನಿನಲ್ಲಿಯೇ ಪರ್ಯಾಯ ಬೆಳೆಗಳನ್ನು ಬೆಳೆದು ಹೆಚ್ಚುವರಿ ಆದಾಯ ಪಡೆದುಕೊಳ್ಳುತ್ತಿದ್ದೇನೆ. ಯಾವುದೇ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸುವುದಿಲ್ಲ. ಜೀವಾಮೃತವೇ ಬೆಳೆಗಳಿಗೆ ಆಧಾರ. ಅದರ ಫಲವಾಗಿ ಪ್ರತಿ ವರ್ಷ 3 ಎಕರೆ ಜಮೀನಿನಲ್ಲಿ ₹ 8 ಲಕ್ಷ ಆದಾಯ ಗಳಿಸುತ್ತಿದ್ದೇನೆ’ ಎನ್ನುತ್ತಾರೆ ಪ್ರಗತಿಪರ ರೈತ ನಿಜಲಿಂಗಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.