ADVERTISEMENT

Newspaper Distribution day |ದಾವಣಗೆರೆ: ಸುದ್ದಿ, ಸಮಾಚಾರ: ಲೋಕ ಸಂಚಾರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:23 IST
Last Updated 4 ಸೆಪ್ಟೆಂಬರ್ 2025, 6:23 IST
ಪ್ರಕಾಶ್‌ ಎಂ.ಎನ್‌
ಪ್ರಕಾಶ್‌ ಎಂ.ಎನ್‌   

ದಾವಣಗೆರೆ: ಬೆಳಗಿನ ಕಾಫಿ ಅಥವಾ ಟೀ ಕುಡಿಯುವ ಹೊತ್ತಿಗೆ ಕೈಯಲ್ಲಿ ದಿನಪತ್ರಿಕೆ ಇಲ್ಲದಿದ್ದರೆ ಚಡಪಡಿಕೆ ಶುರುವಾಗುತ್ತದೆ. ಮನೆಯ ಆವರಣವನ್ನು ಪತ್ರಿಕೆ ಇನ್ನೂ ಪ್ರವೇಶಿಸಿಲ್ಲವೇ ಎಂಬ ಪ್ರಶ್ನೆ ಕಾಡತೊಡಗುತ್ತದೆ. ನಿತ್ಯ ನಸುಕಿನಲ್ಲಿ ಪತ್ರಿಕೆ ಹೊತ್ತು ಬರುತ್ತಿದ್ದ ದ್ವಿಚಕ್ರ ವಾಹನ ಕಣ್ಣಿಗೆ ಬಿದ್ದರಷ್ಟೇ ಮನಸ್ಸಿಗೆ ಸಮಾಧಾನ.

ಇದು ಪತ್ರಿಕೆಯ ಬಹುತೇಕ ಓದುಗರ ಅನುಭವ. ದಿನಪತ್ರಿಕೆಯ ದರ್ಶನದೊಂದಿಗೆ ನಿತ್ಯದ ಕಾರ್ಯಚಟುವಟಿಕೆಗಳು ಆರಂಭವಾಗುತ್ತವೆ. ಪತ್ರಿಕೆಯ ಜೊತೆಗೆ ಇಂತಹದೊಂದು ಅವಿನಾಭಾವ ಸಂಬಂಧ ಬೆಸೆದವರು ವಿತರಕರು. ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೇ ಪ್ರತಿದಿನವೂ ಮನೆ–ಮನೆಗೆ ಪತ್ರಿಕೆ ತಲು‍ಪಿಸುವ ಕಾಯಕ ಯೋಗಿಗಳನ್ನು ನೆನೆಯುವ ದಿನ ಸೆ.4.

ಮಾಧ್ಯಮ ಕ್ಷೇತ್ರ ನಿರಂತರವಾಗಿ ಬದಲಾಗುತ್ತಿದೆ. ಅಂತರ್ಜಾಲ ಸುಲಭ ಸಾಧ್ಯವಾದ ಬಳಿಕ ಅಂಗೈಯಲ್ಲಿಯೇ ಸುದ್ದಿ–ಸಮಾಚಾರ ಸಿಗುತ್ತಿದೆ. ದಿನದ 24 ಗಂಟೆಯೂ ಸುದ್ದಿಗಳನ್ನು ಭಿತ್ತರಿಸುವ ದೃಶ್ಯ ಮಾಧ್ಯಮಗಳೂ ಸಮಾಜದಲ್ಲಿವೆ. ಆದರೂ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓದುವ ಅನುಭೂತಿಯೇ ಭಿನ್ನ. ಟಿ.ವಿ, ಸಾಮಾಜಿಕ ಜಾಲತಾಣದಲ್ಲಿ ಕಣ್ಣಿಗೆ, ಕಿವಿಗೆ ಬಿದ್ದ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದರಷ್ಟೇ ಸಮಾಧಾನ. ಇಂತಹ ಪತ್ರಿಕೆಗಳನ್ನು ಪ್ರತಿಯೊಬ್ಬರಿಗೆ ಮುಟ್ಟಿಸುವ ಕಾರ್ಯವನ್ನು ವಿತರಕರು ಮಾಡುತ್ತಿದ್ದಾರೆ.

ADVERTISEMENT

ಸುದ್ದಿ ಮನೆಯಲ್ಲಿ ರೂಪುಗೊಳ್ಳುವ ಪತ್ರಿಕೆಗಳು ಮುದ್ರಣಗೊಳ್ಳುವ ಹೊತ್ತಿಗೆ ಮಧ್ಯರಾತ್ರಿ ಕಳೆಯುತ್ತದೆ. ಆಗ ವಿತರಕರ ಕಾರ್ಯ ಆರಂಭವಾಗುತ್ತದೆ. ಪತ್ರಿಕೆಗಳನ್ನು ಹೊತ್ತು ತರುವ ವಾಹನಗಳು ಊರು, ಕೇರಿ ತಲುಪುವ ಸಮಯಕ್ಕೆ ವಿತರಕರು ಹಾಜರಾಗುತ್ತಾರೆ. ಎಲ್ಲರೂ ಬೆಳಗಿನ ಸುಖ ನಿದ್ರೆಯಲ್ಲಿರುವಾಗ ವಿತರಕರು ಕೆಲಸದಲ್ಲಿ ನಿರತರಾಗುತ್ತಾರೆ. ಸೈಕಲ್‌ ಅಥವಾ ಬೈಕ್‌ ಏರಿ ಜೋಪಾನವಾಗಿ ಪತ್ರಿಕೆ ತಲುಪಿಸುವ ವಿತರಕರ ಜೀವನ ಕಟ್ಟಿಕೊಡುವ ಪ್ರಯತ್ನವನ್ನು ‘ಪ್ರಜಾವಾಣಿ’ ಮಾಡಿದೆ.

ಬದುಕು ಕಟ್ಟಿಕೊಳ್ಳಲು ನೆರವು
ನಮ್ಮದು ಮೂಲತಃ ಕೃಷಿ ಕುಟುಂಬ. ಸಹೋದರನ ಜೊತೆಗೆ ಪತ್ರಿಕೆಯ ನಂಟು ಬೆಳೆಯಿತು. 20 ವರ್ಷಗಳಿಂದ ಪತ್ರಿಕೆ ವಿತರಿಸುತ್ತಿದ್ದೇನೆ. ನಿತ್ಯ ನಸುಕಿನ 4 ಗಂಟೆಗೆ ಕೆಲಸ ಶುರುವಾಗುತ್ತದೆ. ಬದುಕು ಕಟ್ಟಿಕೊಳ್ಳಲು ಪತ್ರಿಕೆ ನೆರವಾಗಿದೆ. ಇಬ್ಬರು ಮಕ್ಕಳು ಕೂಡ ಪತ್ರಿಕೆ ತಲುಪಿಸಲು ಜೊತೆಯಾದರು. 2 ನೇ ತರಗತಿಯಿಂದಲೇ ನೆರವಾಗುತ್ತಿರುವ ಪುತ್ರರು ಈಗ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೊಂಚ ತಂದರೆ ಆಗುತ್ತಿದೆ. ಆದರೂ ಕಾಯಕವನ್ನು ಮಾತ್ರ ಬಿಟ್ಟಿಲ್ಲ. ಪ್ರಕಾಶ್‌ ಎಂ.ಎನ್‌ ವಿತರಕ ಶಾಮನೂರು ದಾವಣಗೆರೆ

‘ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ’-ಸಿದ್ದೇಶ್

ಜಗಳೂರು: ‘ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಜಗಳೂರು ಪಟ್ಟಣದ ಮಹಾತ್ಮ ಗಾಂಧಿ ವೃತ್ತಕ್ಕೆ ಹೋಗುತ್ತೇನೆ. ಮೊದಲು ಪ್ರತ್ಯೇಕ ವಾಹನದಲ್ಲಿ ಬರುವ ‘ಪ್ರಜಾವಾಣಿ’ ಹಾಗೂ ಬಸ್‌ಗಳಲ್ಲಿ ಪೂರೈಕೆಯಾಗುವ ಇತರೆ ಪತ್ರಿಕೆಗಳನ್ನು ಹೊಂದಿಸಿಕೊಂಡು ಮನೆ ಮನೆಗೆ ಹಾಕುತ್ತೇವೆ. ನಾನು ಒಬ್ಬನೇ 1,500 ಪತ್ರಿಕೆಗಳನ್ನು ವಿತರಿಸುತ್ತೇನೆ. ಇನ್ನುಳಿದ 1,500 ಪತ್ರಿಕೆಗಳನ್ನು ನಮ್ಮ ಹುಡುಗರು ಮನೆಮನೆಗೆ ತಲುಪಿಸುತ್ತಾರೆ’ ಎಂದು ಪಟ್ಟಣದ ಪತ್ರಿಕಾ ವಿತರಕ ಎಸ್. ಸಿದ್ದೇಶ್ ಹೇಳುತ್ತಾರೆ. 

‘8 ಗಂಟೆ ವರೆಗೆ ಪಟ್ಟಣದ ಮನೆಮನೆಗಳಿಗೆ ತೆರಳಿ ಪತ್ರಿಕೆಗಳನ್ನು ಹಾಕಿ ಬರುತ್ತೇನೆ. ನಂತರ 9 ಗಂಟೆಯಿಂದ ಪುಸ್ತಕದ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತೇನೆ. ಇದು ನಿತ್ಯದ ಕಾಯಕವಾಗಿದೆ. ಕೆಲವೊಮ್ಮೆ ತೀವ್ರ ಮಳೆ, ಮೈ ನಡುಗುವ ಚಳಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಸಿದ್ದೇಶ್. 

‘10 ವರ್ಷದಿಂದ ಪ್ರಾಮಾಣಿಕವಾಗಿ ಕಾಯಕ ಮಾಡುತ್ತಾ ಬರುತ್ತಿದ್ದೇವೆ. ಸರ್ಕಾರ ಪತ್ರಿಕಾ ವಿತರಕರ ಸಮಸ್ಯೆ ಬಗ್ಗೆ ಸ್ಪಂದಿಸಬೇಕಿದೆ’ ಎಂದು ಒತ್ತಾಯಿಸಿದರು.

‘ಪೇಪರ್ ಸ್ವಾಮಿ’ ಮಂಜುನಾಥ!

ಮಾಯಕೊಂಡ: ಮೂರು ದಶಕಗಳಿಂದ ಪತ್ರಿಕಾ ವಿತರಣೆಯನ್ನೇ ಕಾಯಕವಾಗಿಸಿಕೊಂಡು ಪ್ರತಿದಿನ ಮುಂಜಾನೆ ಮಳೆ– ಚಳಿ ಎನ್ನದೆ ಓದುಗರಿಗೆ ದಿನಪತ್ರಿಕೆಗಳನ್ನು ಮುಟ್ಟಿಸುವ ಕೆಲಸದಲ್ಲಿ ತೊಡಗಿರುವ ಮಂಜುನಾಥ ಸ್ವಾಮಿ ಅವರು ಈ ಭಾಗದಲ್ಲಿ ‘ಪೇಪರ್ ಸ್ವಾಮಿ’ ಎಂದೇ ಹೆಸರಾಗಿದ್ದಾರೆ.

ಆರಂಭದಲ್ಲಿ ಮಾಯಕೊಂಡ ಗ್ರಾಮದಲ್ಲಿ ಮಾತ್ರ ಪತ್ರಿಕೆ ವಿತರಿಸುತ್ತಿದ್ದ ಮಂಜುನಾಥಸ್ವಾಮಿ ಅವರು ಕ್ರಮೇಣ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ತಮ್ಮ ಕಾರ್ಯ ಕ್ಷೇತ್ರ ವಿಸ್ತರಿಸಿಕೊಂಡಿದ್ದು, ಇವರ ಸೇವಾ ಕಾರ್ಯ ನಿರಂತರವಾಗಿ ಸಾಗಿದೆ. 

ಇವರ ಮುಖ್ಯ ವೃತ್ತಿ ಕೃಷಿಯಾಗಿದ್ದರೂ ದಿನಪತ್ರಿಕೆ, ನಿಯಯಕಾಲಿಕೆಗಳ  ಮೇಲಿನ ಪ್ರೀತಿಯ ಕಾರಣ ಪತ್ರಿಕಾ ವಿತರಣೆಯನ್ನು ಒಂದು ದಿನವೂ ತಪ್ಪದೇ ನಿರ್ವಹಿಸುತ್ತಿದ್ದಾರೆ.

ಕುಟುಂಬದವರಿಗೆ ಆರ್ಥಿಕ ಭದ್ರತೆ ಒದಗಿಸಿ-ಎ.ಕೆ.ಹಾಲೇಶ್

ಸಾಸ್ವೆಹಳ್ಳಿ: ಸಾಸ್ವೆಹಳ್ಳಿ, ರಾಂಪುರ, ಬುಳ್ಳಾಪುರಗಳಲ್ಲಿ ಪತ್ರಿಕೆ ವಿತರಿಸುತ್ತಿರುವ ಹಾಲೇಶ್ ಎ.ಕೆ. ಅವರು 25 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿದ್ದಾರೆ. 

‘ಪತ್ರಿಕೆ ಹಂಚುವ ಕೆಲಸವು ಆರೋಗ್ಯಕ್ಕೆ ಉತ್ತಮ’ ಎನ್ನುವ ಹಾಲೇಶ್ ಅವರು, ‘ಪತ್ರಿಕೆ ವಿತರಿಸುವಾಗ ಅಪಘಾತ ಸಂಭವಿಸುವ ಸಾಧ್ಯತೆಗಳಿದ್ದು, ಪತ್ರಿಕಾ ವಿತರಕರಿಗೆ ಅಪಘಾತ ವಿಮೆ ಮಾಡಿಸುವುದು ಅತ್ಯಗತ್ಯವಾಗಿದೆ. ಅಪಘಾತದಿಂದ ವಿತರಕರು ಮೃತಪಟ್ಟರೆ, ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಬೇಕು. ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳೂ ಪತ್ರಿಕಾ ವಿತರಕರಿಗೂ ದೊರೆಯಬೇಕು’ ಎನ್ನುತ್ತಾರೆ. 

ಕಮ್ಮಾರಗಟ್ಟೆ ‘ಪೇಪರ್ ಬಸಣ್ಣ’

ಸಾಸ್ವೆಹಳ್ಳಿ: ಕಮ್ಮಾರಗಟ್ಟೆಯ ಪತ್ರಿಕಾ ವಿತರಕ ಬಸವರಾಜ ಸಿ. ಅವರು ತಮ್ಮ ಇಡೀ ಜೀವನವನ್ನು ಪತ್ರಿಕಾ ರಂಗಕ್ಕೆ ಮೀಸಲಿಟ್ಟಿದ್ದಾರೆ.

ಬಸವರಾಜ ಅವರು 1992ರಿಂದ ಪತ್ರಿಕೆ ಹಂಚುವ ಕಾರ್ಯದಲ್ಲಿ ತೊಡಗಿದ್ದಾರೆ. ‘ಪ್ರಜಾವಾಣಿ’ ಎಂದರೆ ನನಗೆ ಅಚ್ಚುಮೆಚ್ಚು. ಪತ್ರಿಕೆಯಲ್ಲಿ ಅತ್ಯುತ್ತಮ ವರದಿಗಳಿರುತ್ತವೆ ಎನ್ನುತ್ತಾರೆ ಅವರು. ಮೊದಲಿಗೆ ಸೈಕಲ್‌ನಲ್ಲಿ ಕಮ್ಮಾರಗಟ್ಟೆ ಸುತ್ತಮುತ್ತಲ ಪ್ರದೇಶಗಳಿಗೆ ತೆರಳಿ ಪತ್ರಿಕೆ ಹಂಚುತ್ತಿದ್ದ ಬಸವರಾಜಪ್ಪ, ಇದೀಗ ಕಮ್ಮಾರಗಟ್ಟೆ, ಹುಣಸೆಹಳ್ಳಿ, ಚಿಕ್ಕಬಾಸೂರು ತಾಂಡ, ಚಿಕ್ಕಬಾಸೂರು, ಹಿರೇಬಾಸೂರು, ಬೀರ ಗೊಂಡನಹಳ್ಳಿ, ಉಜ್ಜನಿಪುರ, ಹೊಟ್ಯಾಪುರ ಮತ್ತು ಸದಾಶಿವಪುರ ಗ್ರಾಮಗಳಿಗೂ ಪತ್ರಿಕೆ ವಿತರಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.