ಚನ್ನಗಿರಿ: ‘ಮೂರು ವರ್ಷಗಳಿಂದ ಅಡಿಕೆ ಖೇಣಿದಾರರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಮೊದಲು ಅಡಿಕೆ ಖೇಣಿದಾರರು ಒಗ್ಗಟ್ಟಾಗುವುದು ಮುಖ್ಯ. ಖೇಣಿದಾರರು ಅಡಿಕೆ ತೋಟಗಳನ್ನು ಖೇಣಿ ಹಿಡಿಯಲು ಪೈಪೋಟಿ ಮಾಡಬಾರದು’ ಎಂದು ಅಡಿಕೆ ಖೇಣಿದಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪಗೊಂಡನಹಳ್ಳಿ ವೀರಭದ್ರಪ್ಪ ತಿಳಿಸಿದರು.
ಪಟ್ಟಣದ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ತಾಲ್ಲೂಕು ಅಡಿಕೆ ಖೇಣಿದಾರರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಖೇಣಿದಾರರು ಅಡಿಕೆ ಬೆಳೆಗಾರರಿಗೆ ಮೋಸ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ. ಕೆಲವು ತಾಲ್ಲೂಕುಗಳಲ್ಲಿ ಖೇಣಿದಾರರನ್ನು ಖಳನಾಯಕರು ಎಂದು ಬಿಂಬಿಸಲಾಗುತ್ತಿದೆ. ರೈತರು ಹಾಗೂ ಖೇಣಿದಾರರ ಸಂಬಂಧ ಸೌಹಾರ್ದಯುತವಾಗಿ ಇರಬೇಕು. ಹವಮಾನ ವೈಪರೀತ್ಯ, ಇಳುವರಿ ಕುಸಿತದ ಕಾರಣದಿಂದಾಗಿ ಖೇಣಿದಾರರು ಸಾಲದ ಕೂಪಕ್ಕೆ ಬೀಳುವಂತಾಗಿದೆ. ಆದ್ದರಿಂದ ಈ ಬಾರಿ ಖೇಣಿದಾರರು ಆಗಸ್ಟ್ ತಿಂಗಳವರೆಗೆ ಅಡಿಕೆ ತೋಟಗಳನ್ನು ಖೇಣಿ ಹಿಡಿಯಬಾರದು’ ಎಂದು ಹೇಳಿದರು.
‘ಕಾರ್ಮಿಕರ ಸಮಸ್ಯೆ, ಅಧಿಕ ತಾಪಮಾನ ಮುಂತಾದ ಕಾರಣಗಳಿಂದಾಗಿ ಅಡಿಕೆಯ ತೂಕ ಕಡಿಮೆಯಾಗಿ ಖೇಣಿದಾರರು ಸಂಕಷ್ಟಕ್ಕೆ ಈಡಾಗುವಂತಾಗಿದೆ. 1 ಕ್ವಿಂಟಲ್ ಹಸಿ ಅಡಿಕೆಗೆ 11ರಿಂದ 11.50 ಕೆ.ಜಿ ಒಣ ಅಡಿಕೆ ಸಿಗುತ್ತದೆ. ಆದರೆ, ಖೇಣಿದಾರರು 1 ಕ್ವಿಂಟಲ್ ಹಸಿ ಅಡಿಕೆಗೆ 13 ಕೆ.ಜಿ ಒಣ ಅಡಿಕೆ ನೀಡಲು ರೈತರಿಂದ ಒಪ್ಪಂದ ಮಾಡಿಕೊಂಡು ಕೊನೆಗೆ ಅಡಿಕೆ ಬೆಳೆಗಾರರಿಗೆ ಖೇಣಿ ಹಿಡಿದ ಹಣವನ್ನೂ ಕೊಡಲಾಗದೇ ಓಡಿ ಹೋಗುವಂತಾಗಿದೆ’ ಎಂದು ಜಿಲ್ಲಾ ಖೇಣಿದಾರರ ಸಂಘದ ಉಪಾಧ್ಯಕ್ಷ ನಟರಾಜ್ ಕುರ್ಕಿ ಸಂಕಷ್ಟ ಹೇಳಿಕೊಂಡರು.
‘ಹಾಗಾಗಿ ಅಡಿಕೆ ಖೇಣಿದಾರರ ಸಂಘ ನಿಗದಿಪಡಿಸಿದಂತೆ 1 ಕ್ವಿಂಟಲ್ ಹಸಿ ಅಡಿಕೆಗೆ 11 ಕೆ.ಜಿ ಒಣ ಅಡಿಕೆಯನ್ನು ರೈತರಿಗೆ ಕೊಡಲು ಒಪ್ಪಂದ ಮಾಡಿಕೊಂಡಾಗ ಮಾತ್ರ ರೈತರು ಹಾಗೂ ಖೇಣಿದಾರರು ಸೌಹಾರ್ದಯುತವಾಗಿ ಇರಬಹುದಾಗಿದೆ’ ಎಂದು ತಿಳಿಸಿದರು.
ಶಿವಕುಮಾರ್, ಮಂಜುನಾಥ್, ಸಿದ್ದೇಶ್, ಬಸವರಾಜ್, ಮದನ್ ಸಾಗರ್, ಶಿವರಾಜ್, ಮಾಲತೇಶ್, ಟಿ. ನಾಗರಾಜ್, ಕೆ.ಸಿ. ರವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.