ಹರಿಹರ (ದಾವಣಗೆರೆ): ‘ರಾಜ್ಯ ಸರ್ಕಾರ ರಾಜಕೀಯ ಮಾಡದೇ ವೀರಶೈವ ಲಿಂಗಾಯತ ಸಮುದಾಯದ ಎಲ್ಲರನ್ನೂ ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡಬೇಕು’ ಎಂದು ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕೋರಿದರು.
ಇಲ್ಲಿನ ಪಂಚಮಸಾಲಿ ಗುರುಪೀಠದಲ್ಲಿ ನಡೆದ ಹರಜಾತ್ರೆಯಲ್ಲಿ ಭಾಗವಹಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
‘ವೀರಶೈವ-ಲಿಂಗಾಯತ ಸಮುದಾಯದವರು ಬೇರೆ ಬೇರೆ ಅಲ್ಲ ಎಲ್ಲರೂ ಒಂದೇ. ವೀರಶೈವ ಲಿಂಗಾಯತರು ಒಳಪಂಗಡಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಎಲ್ಲ ವೀರಶೈವ ಲಿಂಗಾಯತರು ಒಂದೇ ಎಂದು ಭಾವಿಸಬೇಕು. ಸಮಾಜದ ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗಕ್ಕೆ ಅನುಕೂಲ ಆಗುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇತ್ತೀಚಿಗೆ ಪಂಚಮಸಾಲಿ ಸಮಾಜ ಹೆಚ್ಚು ಬೆಳವಣಿಗೆ ಹೊಂದುತ್ತಿರುವುದು ಸಂತಸದ ವಿಚಾರ’ ಎಂದರು.
ಹರಿಹರ ಪಂಚಮಸಾಲಿ ಗುರು ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ‘ವೀರಶೈವ– ಲಿಂಗಾಯತ ಸಮುದಾಯದಲ್ಲಿ ಕೆಲವರು 2ಎ, 3ಎ, 3ಬಿ ಮೀಸಲಾತಿ ಪಡೆಯುತ್ತಿದ್ದು, ಇದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ. ರಾಜ್ಯದಲ್ಲಿರುವ ಎಲ್ಲಾ ವೀರಶೈವ ಲಿಂಗಾಯತ ಸಮುದಾಯಕ್ಕೆ ಒಂದೇ ರೀತಿಯ ಮೀಸಲಾತಿ ಇರಬೇಕು’ ಎಂದು ಅಭಿಪ್ರಾಯಪಟ್ಟರು.
‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೇಳುತ್ತಿದ್ದೇವೆ. ಸಮಾಜವನ್ನು ಒಡೆಯುವುದಿಲ್ಲ. ಜಾಗೃತಿ ಮೂಡಿಸುತ್ತಿದ್ದೇವೆ. ಬಸವರಾಜ ಬೊಮ್ಮಯಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಪ್ರಕಟಿಸಿರುವ ಮೀಸಲಾತಿಯನ್ನು ವಿರೋಧಿಸಿಲ್ಲ. ಅದನ್ನು ಸ್ವಾಗತಿಸಿಯೂ ಇಲ್ಲ. ನಾವು ಅಗತ್ಯ ಕಾನೂನು ಹೋರಾಟ ಮಾಡುತ್ತಿದ್ದೇವೆ. ಈ ವಿಚಾರ ಕುರಿತು ಪ್ರಚಾರ ಪಡೆದರೆ ಮೀಸಲಾತಿ ಸಿಗುವುದಿಲ್ಲ’ ಎಂದರು.
‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಟಿಕೆಟ್ ಹಂಚಿಕೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಆದ್ಯತೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.
ವೀರಶೈವ ಲಿಂಗಾಯತರೆಲ್ಲರೂ ಹಿಂದೂಗಳು. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ವೀರಶೈವ ಲಿಂಗಾಯತ ಸಮುದಾಯದ ಎಲ್ಲರೂ ಅಂದು ರಾಮನವಮಿ ಎಂದೇ ಭಾವಿಸಿ ಪೂಜೆ ಸಲ್ಲಿಸಬೇಕು.–ವಚನಾನಂದ ಸ್ವಾಮೀಜಿ ಹರಿಹರ ಪಂಚಮಸಾಲಿ ಗುರುಪೀಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.