ADVERTISEMENT

ದಾವಣಗೆರೆ: ಹೊರವಲಯದಲ್ಲಿ ವಸತಿ ನಿಲಯ, ಭಯದಲ್ಲೇ ಓಡಾಡುವ ವಿದ್ಯಾರ್ಥಿನಿಯರು

ಸಿಗದ ಭದ್ರತೆ, ಬಸ್ ಸೌಲಭ್ಯ ಮರೀಚಿಕೆ

ಚಂದ್ರಶೇಖರ ಆರ್‌.
Published 19 ಅಕ್ಟೋಬರ್ 2019, 10:33 IST
Last Updated 19 ಅಕ್ಟೋಬರ್ 2019, 10:33 IST
ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಸರ್ಕಾರಿ ವಸತಿ ನಿಲಯಗಳ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗುತ್ತಿರುವುದು
ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಸರ್ಕಾರಿ ವಸತಿ ನಿಲಯಗಳ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗುತ್ತಿರುವುದು   

ದಾವಣಗೆರೆ: ನಿರ್ಜನ ಪ್ರದೇಶದಲ್ಲಿ ನಿತ್ಯ 2 ಕಿ.ಮೀ. ನಡೆದುಕೊಂಡೇ ಸಂಚರಿಸುವ ಸ್ಥಿತಿ. ಪೋಲಿಗಳ ಕಾಟದಿಂದ ರಸ್ತೆಯಲ್ಲಿ ಭಯದಲ್ಲೇ ಓಡಾಡುವ ಅನಿವಾರ್ಯತೆ.

ಇದು ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಸರ್ಕಾರಿ ವಸತಿ ನಿಲಯಗಳ ವಿದ್ಯಾರ್ಥಿನಿಯರ ಪರಿಸ್ಥಿತಿ.

ಇಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿನಿಲಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸೇರಿ ಮೂರು ವಿದ್ಯಾರ್ಥಿನಿಯರ ನಿಲಯಗಳಿವೆ. ವಸತಿ ನಿಲಯಗಳು ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ ವಸತಿ ನಿಲಯಗಳಿಗೆ ಹೋಗಲು ಸಮರ್ಪಕ ಬಸ್‌ ಸೌಲಭ್ಯ ಇಲ್ಲ. ಇದರಿಂದ ವಿ‌ದ್ಯಾರ್ಥಿನಿಯರು ಶಾಮನೂರಿನಿಂದ ವಸತಿ ನಿಲಯಗಳಿಗೆ ಹೋಗಲು 2 ಕಿ.ಮೀ. ನಿರ್ಜನ ಪ್ರದೇಶದಲ್ಲಿ ಸಂಚರಿಸುವಂತಾಗಿದೆ.

ADVERTISEMENT

650 ವಿದ್ಯಾರ್ಥಿನಿಯರು ಈ ವಸತಿ ನಿಲಯಗಳಲ್ಲಿ ಆಶ್ರಯ ಪಡೆದಿದ್ದಾರೆ. ಪದವಿ, ವೃತ್ತಿ ಶಿಕ್ಷಣ, ಸ್ಮಾತಕೋತ್ತರ ಪದವಿ, ವೈದ್ಯಕೀಯ, ಎಂಜಿನಿಯರಿಂಗ್‌ ಹೀಗೆ ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು ಇಲ್ಲಿ ಆಶ್ರಯ ಪಡೆದಿದ್ದಾರೆ. ಹಾಸ್ಟೆಲ್‌ಗೆ ಓಡಾಡುವಾಗ ದಾರಿಯಲ್ಲಿ ಪೋಲಿ ಹುಡುಗರ ಕಾಟ ಹೆಚ್ಚಾಗಿದೆ. ಅಲ್ಲದೇ ತರಗತಿಗಳು ತಡವಾದರೆ ಸಂಜೆಯಾದ ಮೇಲೆ ಓಡಾಡುವುದು ಸಮಸ್ಯೆಯಾಗಿದೆ.

ನಿರ್ಜನ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್ ನಿರ್ಮಿಸಿರುವ ಸರ್ಕಾರ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ನಿಲಯಗಳಿಗೆ ಭದ್ರತಾ ಸಿಬ್ಬಂದಿ ಇಲ್ಲ. ಇದರಿಂದ ಸಮಸ್ಯೆ ಎದುರಿಸುವಂತಾಗಿದೆ ಎಂಬುದು ವಿದ್ಯಾರ್ಥಿನಿಯರ ದೂರು.

‘ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿ, ಎಐಡಿಎಸ್ಒ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆಯನ್ನೂ ಮಾಡಿದ್ದೇವೆ. ಪ್ರತಿಭಟನೆ ಮಾಡಿದ ಬಳಿಕ ಬೆಳಿಗ್ಗೆ ಒಂದು, ಸಂಜೆ ಒಂದು ಬಸ್‌ ಬಂದಿತು. ಉಳಿದ ಸಮಯದಲ್ಲೂ ಬಸ್‌ ಸೌಲಭ್ಯ ಕಲ್ಪಿಸಬೇಕೆಂಬ ಮನವಿಗೆ ಸ್ಪಂದನೆ ಮಾತ್ರ ಸಿಕ್ಕಿಲ್ಲ’ ಎಂಬುದು ವಿದ್ಯಾರ್ಥಿನಿಯರ ಅಳಲು.

ಬೆಳಿಗ್ಗೆ, ಸಂಜೆ ಮಾತ್ರ ಒಂದು ಬಸ್‌ ಇದೆ. ಇದರಿಂದ ಹಲವು ಬಾರಿ ತರಗತಿಗಳು ತಪ್ಪಿಹೋಗಿವೆ. ಸಂಜೆ ಹೊತ್ತು ಓಡಾಡಲೂ ಇಲ್ಲಿ ಭಯವಾಗುತ್ತದೆ ಎಂದು ವಿದ್ಯಾರ್ಥಿನಿ ಸುಶ್ಮಿತಾ ಅಳಲು ತೋಡಿಕೊಂಡರು.

’ರಸ್ತೆಯಲ್ಲಿ ಓಡಾಡುವಾಗ ಪೋಲಿ ಹುಡುಗರ ಕಾಟ ಹೆಚ್ಚಾಗಿದೆ. ಅವರ ಕಾಟಕ್ಕೆ ಬೇಸತ್ತು ತೋಟ, ಗದ್ದೆಗಳು ಇರುವ ಮಾರ್ಗದಲ್ಲಿ ಹೆದರಿ ಓಡಾಡುವಂತಾಗಿದೆ. ಸ್ನೇಹಿತೆಯರು ಇದ್ದರೆ ಮಾತ್ರ ಬರುತ್ತೇನೆ. ಇಲ್ಲದಿದ್ದರೆ ರಸ್ತೆಯಲ್ಲಿ ಓಡಾಡುವುದಕ್ಕೂ ಭಯವಾಗುತ್ತದೆ. ನಗರದ ಮಧ್ಯದಲ್ಲಿ ಹಾಸ್ಟೆಲ್‌ ನಿರ್ಮಿಸಿದರೆ ಒಳಿತು‘ ಎಂದು ವಿದ್ಯಾರ್ಥಿನಿ ಸುಧಾ ಹೇಳಿದರು.

ಪದವಿ, ವೃತ್ತಿ ಶಿಕ್ಷಣ ಕೋರ್ಸ್‌ಗಳ ವಿದ್ಯಾರ್ಥಿನಿಯರು ಇರುವ ಕಾರಣ ಎಲ್ಲರ ತರಗತಿ ಒಂದೇ ಸಮಯಕ್ಕೆ ಮುಗಿಯುವುದಿಲ್ಲ. ಹೀಗಾಗಿ ಆಗಾಗ ಬಸ್‌ ಸೌಲಭ್ಯ ಕಲ್ಪಿಸಿದರೆ ಅನುಕೂಲ. ಶಾಮನೂರಿಗೆ ಬರುವ ಬಸ್‌ಗಳನ್ನು ಇಲ್ಲಿಯವರೆಗೆ ಓಡಿಸಬಹುದು ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದರು.

‘ಅನುಷ್ಠಾನಗೊಳ್ಳದ ಭರವಸೆ’
ಬಸ್‌ ಸೌಲಭ್ಯ ಕಲ್ಪಿಸುವಂತೆ ಸಮಾಜ ಕಲ್ಯಾಣ ಇಲಾಖೆ, ಕೆಎಸ್‌ಆರ್‌ಟಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಸರಿಯಾದ ಸಮಯಕ್ಕೆ ಬಸ್‌ ಬಿಟ್ಟಿಲ್ಲ. ಅಲ್ಲದೇ ಬಸ್‌ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಅಧಿಕಾರಿಗಳು ಹೇಳುವ ಮಾತು ಕಾಗದಕ್ಕೆ ಸೀಮಿತವಾಗಿದೆ. ಅನುಷ್ಠಾನಗೊಂಡಿಲ್ಲ. ಒಂದು ಬಸ್‌ ಬಿಟ್ಟರೆ ಬೇರೆ ಬಸ್‌ ಇಲ್ಲಿ ಬಂದಿಲ್ಲ. ಎಂದು ಎಐಡಿಎಸ್‌ಒ ನಗರ ಘಟಕದ ಉಪಾಧ್ಯಕ್ಷೆ ನಾಗಜ್ಯೋತಿ ಹೇಳಿದರು.

ಈಚೆಗೆ ಹಾಸ್ಟೆಲ್‌ ನೋಡಲು ಬಂದ ಪೋಷಕರೊಬ್ಬರು ನಿರ್ಜನ ಪ್ರದೇಶದಲ್ಲಿರುವ ಕಾರಣ ಹೆದರಿ ಮಗಳನ್ನು ಕಾಲೇಜಿಗೆ ಕಳುಹಿಸಿಯೇ ಇಲ್ಲ. ಅಲ್ಲದೇ ಕೆಲ ವಿದ್ಯಾರ್ಥಿನಿಯರು ಶಿಕ್ಷಣ ಮೊಟಕುಗೊಳಿಸುತ್ತಾರೆ ಎಂದು ಹೆದರಿ ಹಾಸ್ಟೆಲ್‌ ದೂರದಲ್ಲಿರುವ ಬಗ್ಗೆ ಪೋಷಕರಿಗೆ ಮಾಹಿತಿಯೇ ನೀಡಿಲ್ಲ ಎಂದು ಅವರು ಸಮಸ್ಯೆಯ ವಾಸ್ತವ ತೆರೆದಿಟ್ಟರು.

*
ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಸೌಲಭ್ಯ ಕಲ್ಪಿಸಬೇಕು. ಇಲ್ಲವೇ ವಸತಿ ನಿಲಯವನ್ನು ನಗರದ ಒಳಗೆ ಸ್ಥಳಾಂತರಿಸಬೇಕು.
–ನಾಗಜ್ಯೋತಿ, ಉಪಾಧ್ಯಕ್ಷೆ, ಎಐಡಿಎಸ್‌ಒ ನಗರ ಘಟಕ

*
ನಿರ್ಜನ ಪ್ರದೇಶದಲ್ಲಿರುವ ಕಾರಣ ಪೋಲಿಗಳ ಕಾಟ ಹೆಚ್ಚಾಗಿದೆ. ಸಂಜೆ ಹೊತ್ತು ಓಡಾಡಲು ವಿದ್ಯಾರ್ಥಿನಿಯರು ಭಯಪಡುವಂತಾಗಿದೆ. ಸಂಬಂಧಪಟ್ಟ ಇಲಾಖೆಯವರು ಭದ್ರತೆ ಕಲ್ಪಿಸಬೇಕು.
–ಸೌಮ್ಯಾ, ಅಧ್ಯಕ್ಷೆ, ಎಐಡಿಎಸ್‌ಒ ನಗರ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.