ನ್ಯಾಮತಿ: ‘ಸಾರ್ವಜನಿಕರ ನ್ಯಾಯಯುತ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಅಧಿಕಾರಿಗಳು ಹಾಗೂ ಸರ್ಕಾರಿ ಕಚೇರಿ ಸಿಬ್ಬಂದಿ ಹಣ ಕೇಳಿದರೆ ಅಥವಾ ಅಲೆದಾಡಿಸಿದರೆ ನಮಗೆ ಮಾಹಿತಿ ನೀಡಿ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಸ್ತುವಾರಿ ವೀರಭದ್ರಪ್ಪ ಮನವಿ ಮಾಡಿದರು.
ಕರ್ನಾಟಕ ರಾಷ್ಟ್ರ ಕೆ.ಆರ್.ಎಸ್. ಪಕ್ಷದ ವತಿಯಿಂದ ಸೋಮವಾರ ಲಂಚಮುಕ್ತ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ನಂತರ ತಾಲ್ಲೂಕು ಕಚೇರಿ ಆವರಣದಲ್ಲಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
‘ಅಧಿಕಾರಿಗಳು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಿದರೆ ಕೆಆರ್‌ಎಸ್ ಪಕ್ಷದ ಗಮನಕ್ಕೆ ತನ್ನಿ. ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಭ್ರಷ್ಟಾಚಾರ ನಡೆಯುವುದಕ್ಕೆ ಬಿಡುವುದಿಲ್ಲ’ ಎಂದು ಹೊನ್ನಾಳಿ– ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಚಿನ್ನಿಕಟ್ಟೆ ರೆಹಮಾನ್ ಹೇಳಿದರು.
ಇದಕ್ಕೂ ಮೊದಲು ಸುರಹೊನ್ನೆ ಬಸವೇಶ್ವರ ವೃತ್ತದಿಂದ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜಯ್ಯ, ಜಿಲ್ಲಾ ಘಟಕದ ಉಪಾಧ್ಯಕ್ಷ ಅಜೇಶ, ಯುವ ಘಟಕದ ಅಧ್ಯಕ್ಷ ಲಾಯರ್ ರಘು, ಉಪಾಧ್ಯಕ್ಷ ಶಶಿ, ಗೌರವಾಧ್ಯಕ್ಷ ಮಂಜುನಾಥ ಹಳ್ಳಿಕೆರೆ, ನ್ಯಾಮತಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಪ್ರಕಾಶ, ಕಾರ್ಯದರ್ಶಿ ನಜೀರ್, ದೇವರಾಜ, ತನ್ವೀರ್‌ಭಾಷಾ, ರಾಮಸ್ವಾಮಿ, ರಘುಸ್ವಾಮಿ, ಪ್ರತಾಪ, ಬಸಯ್ಯ, ಗಣೇಶನಾಯ್ಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.