ADVERTISEMENT

ನ್ಯಾಮತಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಮರೀಚಿಕೆ; ಸಾಂಕ್ರಾಮಿಕ ರೋಗ ಹರಡುವ ಭೀತಿ

ಡಿ.ಎಂ.ಹಾಲಾರಾಧ್ಯ
Published 3 ಆಗಸ್ಟ್ 2025, 6:35 IST
Last Updated 3 ಆಗಸ್ಟ್ 2025, 6:35 IST
ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದ ಹಿಂಬದಿಯಲ್ಲಿ ಕಸ ಕಡ್ಡಿ ಬಿದ್ದಿರುವುದು
ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದ ಹಿಂಬದಿಯಲ್ಲಿ ಕಸ ಕಡ್ಡಿ ಬಿದ್ದಿರುವುದು   

ನ್ಯಾಮತಿ: ತುಂಬಿರುವ ಕಸ–ಕಡ್ಡಿ.. ಸರಾಗವಾಗಿ ಹರಿಯದೇ ನೀರು ನಿಂತಿರುವ ಜಾಗ.. ಶೌಚಾಲಯದ ಗುಂಡಿಗಳಿಂದ ಹೊರ ಬರುತ್ತಿರುವ ನೀರು – ಇಂತಹ ದೃಶ್ಯಗಳನ್ನು ಕಾಣಬೇಕಿದ್ದರೆ ನ್ಯಾಮತಿ ಪಟ್ಟಣದ ಸಮುದಾಯ ಆಸ್ಪತ್ರೆಯ ಆವರಣಕ್ಕೆ ಬರಬೇಕು.

ನ್ಯಾಮತಿ ತಾಲ್ಲೂಕು ಕೇಂದ್ರದಲ್ಲಿರುವ ಸಮುದಾಯ ಆಸ್ಪತ್ರೆಗೆ ಪ್ರತಿದಿನ ನೂರಾರು ರೋಗಿಗಳು, ಗರ್ಭಿಣಿಯರು, ಬಾಣಂತಿಯರು ಬರುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯ ಆಡಳಿತಾಧಿಕಾರಿ, ತಜ್ಞ ವೈದ್ಯರು ಮತ್ತು ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಆಸ್ಪತ್ರೆಯ ಹಿಂಭಾಗ ಮತ್ತು ಮುಂದಿನ ಆವರಣ ಗಬ್ಬು ನಾರುತ್ತಿದ್ದು, ಆಸ್ಪತ್ರೆಯ ಅಂದಗೆಡಿಸಿದೆ.

ಆಸ್ಪತ್ರೆಗೆ ತಡೆಗೋಡೆ ಇದ್ದು, ಹಿಂಬದಿಯಲ್ಲಿ ನರ್ಸ್‌ಗಳ ವಸತಿ ಗೃಹಗಳು ಇವೆ. ಆದರೂ ಕಸ, ಕಡ್ಡಿ ಹಾಗೂ ಬಳಕೆ ಮಾಡಿದ ಬಟ್ಟೆಗಳ ರಾಶಿ ಇಲ್ಲಿ ಕಂಡುಬರುತ್ತದೆ. ಶೌಚ ಗುಂಡಿಗಳಿಂದ ಹೊರಕ್ಕೆ ಹರಿಯುವ ನೀರು ಹಾಗೂ ಆಸ್ಪತ್ರೆಯ ಒಳಗಡೆ ಬಳಸಿದ ನೀರು ಪೈಪ್‌ ಮೂಲಕ ಹೊರಬಂದು, ಮುಂದಕ್ಕೆ ಹರಿಯಲು ಸಾಧ್ಯವಾಗದೇ ಆವರಣದಲ್ಲಿ ನಿಲುಗಡೆಯಾಗುತ್ತದೆ. ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ. 

ADVERTISEMENT

ಆಸ್ಪತ್ರೆಯ ಹಿಂಬದಿಯ ದೃಶ್ಯ ನೋಡಿದರೆ ಗಾಬರಿಯಾಗುತ್ತದೆ. ಇಲ್ಲಿರುವ ವೈದ್ಯರು, ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ, ಮುಖ್ಯಾಧಿಕಾರಿಗಳು ಆಸ್ಪತ್ರೆಯ ಪರಿಸರದ ಬಗ್ಗೆ ಕಾಳಜಿ ವಹಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆಸ್ಪತ್ರೆಯಲ್ಲಿ ಆರೋಗ್ಯ ಸಮಿತಿ ಸದಸ್ಯರು ಇದ್ದೂ ಇಲ್ಲದಂತಿದ್ದಾರೆ.

ಶಾಸಕರು ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸಬೇಕಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಚೀಲೂರು ಎ.ಕೆ.ಕುಮಾರ ಒತ್ತಾಯಿಸುತ್ತಾರೆ.

ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದ ಹಿಂಬದಿಯಲ್ಲಿ ಬಳಸಿದ ನೀರು ಹೊರಹೋಗದೆ ಸಂಗ್ರಹವಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.