ADVERTISEMENT

ಬಸವಾಪಟ್ಟಣ | ಕೃಷಿಯಲ್ಲೂ ಸೈ ಎನ್ನಿಸಿಕೊಂಡ ನಿವೃತ್ತ ನೌಕರ

ಸಾವಯವ ಪದ್ಧತಿಯಲ್ಲಿ ಸಮಗ್ರ ಕೃಷಿ.. ಸ್ವಯಂ ಚಾಲಿತ ಪವರ್‌ ಸ್ಪ್ರೇಯರ್‌ ತಯಾರಿ...

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:10 IST
Last Updated 10 ಸೆಪ್ಟೆಂಬರ್ 2025, 7:10 IST
ಅಡಿಕೆ, ತೆಂಗು, ಬಾಳೆ ಮತ್ತು ಪಪ್ಪಾಯ ತೋಟದಲ್ಲಿ ರವೀಂದ್ರನಾಥ್ 
ಅಡಿಕೆ, ತೆಂಗು, ಬಾಳೆ ಮತ್ತು ಪಪ್ಪಾಯ ತೋಟದಲ್ಲಿ ರವೀಂದ್ರನಾಥ್    

ಬಸವಾಪಟ್ಟಣ: ಭದ್ರಾವತಿಯ ವಿಐಎಸ್‌ಎಲ್‌ನಲ್ಲಿ 38 ವರ್ಷ ಸೇವೆ ಸಲ್ಲಿಸಿ, ನಿವೃತ್ತರಾದ ನಂತರ ಸ್ವಗ್ರಾಮ ದಾಗಿನಕಟ್ಟೆಗೆ ಬಂದು 5 ಎಕರೆ ಭೂಮಿಯಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿಯಲ್ಲಿ ತೊಡಗಿರುವ ರೈತ ಎಂ.ಜಿ. ರವೀಂದ್ರನಾಥ್‌ ಅವರು ಯಶಸ್ಸಿನ ಮೂಲಕ ಗಮನ ಸೆಳೆದಿದ್ದಾರೆ.

73ರ ಇಳಿ ವಯಸ್ಸಿನಲ್ಲೂ ಇವರು  ತೋಟದಲ್ಲಿ ರಾಸಾಯನಿಕ ಗೊಬ್ಬರ ಬಳಸದೇ ಸಾವಯವ ಪದ್ಧತಿಯಲ್ಲಿ ಅಡಿಕೆ, ತೆಂಗು, ಬಾಳೆ, ಪಪ್ಪಾಯ ಬೆಳೆದಿದ್ದಾರೆ. ಅಲ್ಪ ಪ್ರಮಾಣದಲ್ಲಿ ಮಾವು, ಹಲಸು, ಸೀಬೆ, ಅರಿಶಿನ ಮತ್ತು ತೇಗದ ಮರಗಳನ್ನು ಬೆಳೆಸಿದ್ದಾರೆ. ಇದರೊಂದಿಗೆ ಜೇನು ಕೃಷಿ ಮತ್ತು ಹೈನುಗಾರಿಕೆಯನ್ನೂ ಕೈಗೊಂಡಿದ್ದಾರೆ.

‘ಜೀವಾಮೃತ’ಮತ್ತು ಗೋ ಕೃಪಾಮೃತ ಎಂಬ ದ್ರವರೂಪದ ಗೊಬ್ಬರಗಳನ್ನು ತಯಾರಿಸಿ ವರ್ಷಕ್ಕೆ ಐದು ಬಾರಿ ಫಸಲಿಗೆ ಸ್ವಯಂ ಚಾಲಿತ ಪವರ್‌ ಸ್ಪ್ರೇಯರ್‌ ತಯಾರಿಸಿ ಸಿಂಪರಣೆ ಮಾಡುತ್ತಿದ್ದೇನೆ’ ಎಂದು ಆತ್ಮವಿಶ್ವಾಸದಿಂದ ನುಡಿಯುವರು ರವೀಂದ್ರನಾಥ್‌.

ADVERTISEMENT

‘2023ರಲ್ಲಿ ನಾಟಿ ಮಾಡಿದ್ದ ಆಂಧ್ರದ ಪಂದ್ರ ತಳಿಯ ಪಪ್ಪಾಯ ಉತ್ತಮ ಇಳುವರಿ ನೀಡಿದ್ದು, ಎಕರೆಗೆ 65 ಕ್ವಿಂಟಲ್‌ ಇಳುವರಿ ಬಂದಿದೆ. ಅಡಿಕೆ ಗಿಡಗಳ ಮಧ್ಯೆ 1000 ಬಾಳೆ ಗಿಡಗಳನ್ನು ಬೆಳೆಸಿದ್ದು, ₹ 1.80 ಲಕ್ಷ ಲಾಭ ಬಂದಿದೆ. ಅಲ್ಲದೇ ಜೇನು ಕೃಷಿಯಲ್ಲಿ ಹೆಚ್ಚಿನ ಬಂಡವಾಳವಿಲ್ಲದೇ ಪ್ರತಿ ಜೇನು ಪೆಟ್ಟಿಗೆಯಿಂದ ತಲಾ ಐದು ಕೆ.ಜಿ ಜೇನುತುಪ್ಪ ದೊರೆತಿದ್ದು, ಕೆ.ಜಿ.ಗೆ 800ರಂತೆ ಮಾರಾಟವಾಗಿದೆ’ ಎಂದು ಕೃಷಿಯಲ್ಲಿ ತಮ್ಮ ಲಾಭಾಂಶದ ಲೆಕ್ಕಾಚಾರ ಬಿಡಿಸಿಟ್ಟರು. 

‘ರೈತರು ಸಮಗ್ರ ಕೃಷಿಯ ಬಗ್ಗೆ ಸದಾ ಚಿಂತನೆ ನಡೆಸಬೇಕು. ಬೆಂಗಳೂರಿನ ಎಸ್ಕಾರ್ಟ್‌ ಟ್ರೈನಿಂಗ್‌ ಅಂಡ್‌ ಡೆವಲಪ್‌ಮೆಂಟ್‌ ಸೆಂಟರ್‌ ಸಂಸ್ಥೆಯು ಸಾವಯವ ಕೃಷಿಯ ಬಗ್ಗೆ ಉಚಿತವಾಗಿ ತರಬೇತಿ ನೀಡುತ್ತಿದ್ದು, ನಾನು ಆರು ಬಾರಿ ಈ ಕೇಂದ್ರಕ್ಕೆ ಭೇಟಿ ನೀಡಿರುವೆ. 200ಕ್ಕೂ ಅಧಿಕ ರೈತರನ್ನು ಆ ಸಂಸ್ಥೆಗೆ ಕರೆದುಕೊಂಡು ಹೋಗಿ ತರಬೇತಿ ಕೊಡಿಸಿದ್ದೇನೆ’ ಎಂದು ರವೀಂದ್ರನಾಥ್‌ ತಿಳಿಸಿದರು.

‘ಇವರು ಉತ್ಸಾಹಿ ರೈತರಾಗಿದ್ದು, ಕೃಷಿ ಇಲಾಖೆಯಿಂದ ಕೃಷಿ ಹೊಂಡ, ಎರೆಹುಳು ತೊಟ್ಟಿ ನಿರ್ಮಾಣ ಹಾಗೂ ಎರಡು ಹಸುಗಳನ್ನು ಕೊಳ್ಳಲು ಶೇ 50ರ ದರದಲ್ಲಿ ಆರ್ಥಿಕ ಸಹಾಯ ನೀಡಲಾಗಿದೆ. ತೋಟಕ್ಕೆ ಭೇಟಿ ನೀಡಿ ಕೃಷಿ ಬಗ್ಗೆ ಸಲಹೆ ನೀಡುತ್ತಿದ್ದೇವೆ. ಸಾವಯವ ಪದ್ಧತಿಯಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಾಗಿ ಫಲವತ್ತತೆ ಹೆಚ್ಚಲು ಕಾರಣವಾಗುತ್ತದೆ’ ಎಂದು ಇಲ್ಲಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎನ್‌.ಲತಾ ವಿವರಿಸಿದರು.

‘ತೋಟಗಾರಿಕಾ ಇಲಾಖೆಯಿಂದ ರೈತ ರವೀಂದ್ರನಾಥ್‌ ಅವರಿಗೆ ಅಡಿಕೆ ಸಸಿ ಮತ್ತು ಪಪ್ಪಾಯ ಸಸಿಗಳನ್ನು ಹಾಕಲು ಉದ್ಯೋಗ ಖಾತ್ರಿ ಯೋಜನೆ ಅಡಿ ಸಹಾಯಧನ ನೀಡಲಾಗಿದ್ದು, ಶೇ 75ರ ಸಹಾಯಧನದಲ್ಲಿ ಜೇನುಪೆಟ್ಟಿಗೆಗಳನ್ನೂ ನೀಡಲಾಗಿದೆ. ರವೀಂದ್ರನಾಥ್‌ ಅವರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದು, ರೈತ ಸಮೂಹಕ್ಕೆ ಮಾದರಿಯಾಗಿದ್ದಾರೆ. ಅವರಿಂದ ರಾಸಾಯನಿಕ ರಹಿತ ಕೃಷಿ ಉತ್ಪನ್ನಗಳು ದೊರೆತು ರೋಗರಹಿತ ಸಮಾಜ ನಿರ್ಮಾಣಕ್ಕೆ ಸಹಾಯವಾಗುತ್ತಿದೆ’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಸೌರಭ್‌ ತಿಳಿಸಿದರು.

ತೋಟದಲ್ಲಿ ಜೀವಾಮೃತ ಮತ್ತು ಗೋ ಕೃಪಾಮೃತವನ್ನು ತಯಾರಿಸುತ್ತಿರುವುದು
ತೋಟದಲ್ಲಿ ಜೀವಾಮೃತವನ್ನು ಗಿಡಗಳಿಗೆ ಸಿಂಪಡಿಸಲು ರವೀಂದ್ರನಾಥ್ ಅವರು ತಯಾರಿಸಿರುವ ಸ್ವಯಂ ಚಾಲಿತ ಸಿಂಪರಣಾ ಯಂತ್ರ
ತೋಟದಲ್ಲಿ ಅಳವಡಿಸಿರುವ ಜೇನು ಸಾಕಣೆ ಪೆಟ್ಟಿಗೆ
ತೋಟದಲ್ಲಿ ನಿರ್ಮಿಸಿರುವ ಕೃಷಿ ಹೊಂಡ
ರವೀಂದ್ರನಾಥ್‌ ಅವರನ್ನು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿಯನ್ನಾಗಿ ಆಯ್ಕೆ ಮಾಡಿದ್ದು ಅವರಿಂದ ರೈತರಿಗೆ ಮಾರ್ಗದರ್ಶನ ಮಾಡಿಸಲಾಗುತ್ತದೆ
ಬಿ.ಎಲ್‌.ಅವಿನಾಶ್‌ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರೈತ ಸಂಪರ್ಕ ಕೇಂದ್ರ

ಜೀವಾಮೃತ ತಯಾರಿಸುವ ಬಗೆ

200 ಲೀಟರ್‌ ನೀರಿಗೆ 20 ಕೆ.ಜಿ ನಾಟಿ ಹಸುವಿನ ಸಗಣಿ 20 ಲೀಟರ್‌ ನಾಟಿ ಹಸುವಿನ ಗಂಜಲ 2 ಕೆ.ಜಿ ಬೆಲ್ಲ 2 ಕೆ.ಜಿ ಕಡಲೆ ಹಿಟ್ಟು 10 ಲೀಟರ್‌ ಹುಳಿ ಮಜ್ಜಿಗೆ ಮತ್ತು ಐದು ಹಿಡಿ ಮಣ್ಣು ಬಳಸಿ ಜೀವಾಮೃತ ತಯಾರಿಸಿ ಬಳಸುತ್ತೇವೆ. ಮಹಾರಾಷ್ಟ್ರದ ಸೋಲಾಪುರದ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಉಚಿತವಾಗಿ ನೀಡುತ್ತಿರುವ ಅರ್ಧ ಲೀಟರ್‌ ಗೋ ಕೃಪಾಮೃತಕ್ಕೆ 200 ಲೀಟರ್‌ ನೀರು 2 ಕೆ.ಜಿ ಬೆಲ್ಲ ಬೆರೆಸಿ 12 ದಿನಗಳವರೆಗೆ ಇಡಲಾಗುತ್ತದೆ. ಆಗ ಅದರಲ್ಲಿ ಲಕ್ಷಾಂತರ ಜೀವಾಣುಗಳು ಉತ್ಪತ್ತಿಯಾಗುತ್ತವೆ. ನಂತರ ಅದಕ್ಕೆ 10 ಲೀಟರ್‌ ಹುಳಿ ಮಜ್ಜಿಗೆ ಬೆರೆಸಿ  ಗಿಡಗಳಿಗೆ ಸಿಂಪಡಿಸಲಾಗುತ್ತದೆ ಎಂದು ರಂವೀಂದ್ರನಾಥ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.