ADVERTISEMENT

ದಾವಣಗೆರೆ: ಮಳೆಯಿಂದ ನೆಲಹಾಸಿದ ಭತ್ತ

ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಕಂಗಾಲಾದ ಭತ್ತ ಬೆಳೆಗಾರರು

ಬಾಲಕೃಷ್ಣ ಪಿ.ಎಚ್‌
Published 26 ಅಕ್ಟೋಬರ್ 2020, 19:30 IST
Last Updated 26 ಅಕ್ಟೋಬರ್ 2020, 19:30 IST
ಶಿವಪ್ಪ
ಶಿವಪ್ಪ   

ದಾವಣಗೆರೆ: ಇನ್ನೆರಡು ವಾರದಲ್ಲಿ ಕಟಾವು ಆಗುತ್ತಿದ್ದ ಭತ್ತ ಈಗ ಮಳೆ ಗಾಳಿಗೆ ನೆಲ ಹಾಸಿದೆ. ಎಕರೆಗೆ 40ರಿಂದ 45 ಚೀಲ ಭತ್ತ ಸಿಗುವ ನಿರೀಕ್ಷೆ ಹುಸಿಯಾಗಿದೆ. 15 ಚೀಲವಾದರೂ ಸಿಗುತ್ತಾ? ಇಲ್ವ ಎಂಬ ಚಿಂತೆ ರೈತರನ್ನು ಕಾಡಲು ಆರಂಭಿಸಿದೆ.

‘ಕಾಳು ಕಟ್ಟಿದ್ದರೂ ಇನ್ನೂ ಬಳಿತಿಲ್ಲ. ಈಗ ಗಾಳಿ ಮಳೆ ಬಂದು ನೆಲ ಹಾಸಿದರೆ ಅದರ ಮೇಲೆ ನೀರು ನಿಂತು ಕಾಳೆಲ್ಲ ಕೊಳೆತು ಹೋಗುತ್ತದೆ. ಬಳಿತಿದ್ದರೆ ಈಗಲೇ ಕಟಾವು ಮಾಡಬಹುದಿತ್ತು. ಬಳಿಯದ ಕಾರಣ ಕಟಾವು ಮಾಡಿದರೆ ಭತ್ತ ಸಿಗುವುದಿಲ್ಲ’ ಎಂದು ಕುಂದವಾಡದ ರೈತ ಶಿವಪ್ಪ ಬೇಸರ ವ್ಯಕ್ತಪಡಿಸಿದರು.

ಫಸಲಿಗೆ ಬಂದಿದ್ದ ಬಾಳೆ, ಪಪ್ಪಾಯಿ ಕೂಡ ಗಾಳಿಗೆ ಉರುಳಿವೆ. ಭತ್ತವೂ ನೆಲಕ್ಕೆ ಬಿದ್ದಿದೆ. ಕೃಷಿಕರ ಬದುಕೇ ಅನಿಶ್ಚಿತವಾಗಿಬಿಟ್ಟಿದೆ ಎನ್ನುತ್ತಾರೆ ಅವರು.

ADVERTISEMENT

‘ಒಂದು ಎಕರೆಗೆ ಸುಮಾರು ₹ 25 ಸಾವಿರ ಖರ್ಚು ಬೀಳುತ್ತದೆ. ಒಂದು ಚೀಲ ಭತ್ತಕ್ಕೆ (74 ಕೆ.ಜಿ.) ಈ ಬಾರಿ 1,200 ಇದೆ. ಎಕರೆಗೆ 45 ಚೀಲ ಭತ್ತ ಬಂದರೆ ಖರ್ಚು ಕಳೆದು ಬದುಕು ಸಾಗಿಸಲು ಸ್ವಲ್ಪ ಉಳಿಯುತ್ತಿತ್ತು. 5.5 ಎಕರೆ ಭತ್ತ ಬೆಳೆದಿದ್ದೆ. ಗಾಳಿಮಳೆ ಅದನ್ನೂ ಕಿತ್ತುಕೊಂಡಿತು’ ಎಂದು ಅಲವತ್ತುಕೊಂಡರು.

ಬರೀ ಮಳೆ ಬಂದಿದ್ದರೆ ಏನೂ ಆಗುತ್ತಿರಲಿಲ್ಲ. ಭಾನುವಾರ ಸಂಜೆ 5ರಿಂದ 7ರ ವರೆಗೆ ಮಳೆ ಜತೆಗೆ ಗಾಳಿಯೂ ಬೀಸಿದ್ದರಿಂದ ಭತ್ತ ಕ್ರಾಸ್‌ ಬಿದ್ದವು. ಸ್ವಲ್ಪ ದಿನಕ್ಕೆ ಕಟಾವಿಗೆ ಬಂದು ಬಿಡುತ್ತಿತ್ತು. ಇಂಥ ಸಂದರ್ಭದಲ್ಲಿಯೇ ಕೈಕೊಟ್ಟಿತು ಎಂಬುದು ರೈತ ಷಣ್ಮುಖಪ್ಪ ಅವರ ನೋವು.

ಕುಂದವಾಡದ ಸುತ್ತಮುತ್ತವೇ ಸುಮಾರು 150 ಎಕರೆ ಭತ್ತ ಹಾಳಾಗಿದೆ. ಬಾತಿ, ಲೋಕಿಕೆರೆ ಸಹಿತ ತಾಲ್ಲೂಕಿನಾದ್ಯಂತ ಭತ್ತದ ಬೆಳೆಗಾರರಿಗೆ ಈ ಗಾಳಿಮಳೆ ತೊಂದರೆ ಕೊಟ್ಟಿದೆ. ಅಧಿಕಾರಿಗಳು ಯಾರೂ ಭೇಟಿ ನೀಡಿಲ್ಲ. ಕೂಡಲೇ ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

ಜಿಲ್ಲೆಯಾದ್ಯಂತ ಎಲ್ಲೆಲ್ಲಿ ನಷ್ಟವಾಗಿದೆ ಎಂಬುದನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು. ಪರಿಹಾರ ನೀಡುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌ ವಿ. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.